ಜಾರಕಿಹೊಳಿ ಕೋಟೆಯಲ್ಲಿ ಸಿಎಂ ಅಬ್ಬರದ ಪ್ರಚಾರ; ರಮೇಶ್ ಬದಲು ಬಾಲಚಂದ್ರ ಸಕ್ರಿಯ

ಸಿಡಿ ಪ್ರಕರಣದಲ್ಲಿ ಸಿಲುಕಿದ್ದು ಹಾಗೂ ಕೋವಿಡ್ ಸೋಂಕು ತಗುಲಿದ ಕಾರಣಕ್ಕೆ ಬೆಳಗಾವಿ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಪ್ರಚಾರ ಸಾಧ್ಯವಾಗಿಲ್ಲ. ಆದರೂ ಬಿಜೆಪಿಗರ ಹುಮ್ಮಸ್ಸು ಕುಂದದೆ ನಿನ್ನೆಯಿಂದಲೂ ಭರ್ಜರಿ ಪ್ರಚಾರ ಸಮಾರಂಭಗಳು ಇಲ್ಲಿ ನಡೆಯುತ್ತಿವೆ.

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

  • Share this:
ಬೆಳಗಾವಿ: ಬೆಳಗಾವಿ ಲೋಕಸಭಾ ಉಪ ಚುನಾವಣೆ ಕದನ ಜೋರಾಗಿದ್ದು ಸ್ವತಃ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅನಾರೋಗ್ಯದ ನಡುವೆಯೂ ಬಿಡುವಿಲ್ಲದೆ ನಿರಂತರ ಪ್ರಚಾರ ಮಾಡುತ್ತಿದ್ದಾರೆ. ಕೊನೆಯ ಹಂತದ ಪ್ರಚಾರಕ್ಕಾಗಿ ಜಾರಕಿಹೋಳಿ ಸಹೋದರರ ಕೋಟೆಗೆ ಎಂಟ್ರಿ ಕೊಟ್ಟ ಯಡಿಯೂರಪ್ಪ ನಿನ್ನೆ ಬಾಲಚಂದ್ರ ಜಾರಕಿಹೋಳಿ ಪ್ರತಿನಿಧಿಸುವ ಕ್ಷೇತ್ರ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದರು.

ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೆ ಹಿಡಿತ ಹೊಂದಿರುವ ಜಾರಕಿಹೋಳಿ ಸಹೋದರರು ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದರು. ಆದ್ರೆ ಗೋಕಾಕ್ ತಾಲೂಕಿನ ಪ್ರಮುಖ ಬಿಜೆಪಿ ಶಕ್ತಿಯಾಗಿರುವ ರಮೇಶ್ ಮತ್ತು ಬಾಲಚಂದ್ರ ಜಾರಕಿಹೋಳಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಕೊನೆಯ ಹಂತದಲ್ಲಿ ರಾಜ್ಯ ನಾಯಕರ ಮಾತಿಗೆ ಮಣಿದು ಕಳೆದ ಎರಡು ದಿನಗಳಿಂದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೋಳಿ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು. ಆದ್ರೆ ರಮೇಶ್ ಜಾರಕಿಹೋಳಿ ಮಾತ್ರ ಕೋವಿಡ್​ನಿಂದಾಗಿ ಮನೆಯಿಂದ ಆಚೆಯೇ ಬಂದಿರಲಿಲ್ಲ. ಇದನ್ನ ಅರಿತ ಮುಖ್ಯಮಂತ್ರಿ ಯಡಿಯೂರಪ್ಪ ಸ್ವತಃ ತಾವೇ ಜಾರಕಿಹೋಳಿ ಕೋಟೆಗೆ ಎಂಟ್ರಿ ಕೊಟ್ಟರು. ನಿನ್ನೆ ಬುಧವಾರದಂದು ಗೋಕಾಕ್ ನಗರ ಹಾಗೂ ಅರಭಾವಿ ಕ್ಷೇತ್ರದ ಮೂಡಲಗಿಯಲ್ಲಿ ಮತ ಯಾಚನೆ ಮಾಡಿದರು.

ಮೊದಲಿಗೆ ಮೂಡಲಗಿಯಲ್ಲಿ ಬಿಜೆಪಿ ಸಮಾವೇಶ ನಡೆಸಿದ ಮುಖ್ಯಮಂತ್ರಿಗಳು ಬಾಲಚಂದ್ರ ಜಾರಕಿಹೋಳಿಯನ್ನ ಹಾಡಿ ಹೊಗಳಿದರು. ಗೋಕಾಕ್ ತಾಲೂಕಿನಲ್ಲಿ ಬಾಲಚಂದ್ರ ನಮಗೆ ಅತಿ ದೊಡ್ಡ ಶಕ್ತಿ. ಬಾಲಚಂದ್ರ ಭರವಸೆ ನೀಡಿದ ಹಾಗೆ 60 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದ ಗೆಲುವನ್ನು ಬಿಜೆಪಿಗೆ ಕೊಡಿಸಬೇಕು ಎಂದು ಕೋರಿದರು.

ಇದೆ ವೇಳೆ ಮಾತನಾಡಿದ ಬಾಲಚಂದ್ರ, ಇದು ಪಕ್ಷಗಳ ನಡುವಿನ ಸಮರ ಎಂದು ಪುನರುಚ್ಛಾರ ಮಾಡಿದ್ದಾರೆ. ಸತೀಶ್ ಜಾರಕಿಹೋಳಿಗೆ ನಾವು ವಿರೋಧ ಮಾಡುತ್ತಿಲ್ಲ. ಅದ್ರೆ ಕಾಂಗ್ರೆಸ್ ಪಕ್ಷಕ್ಕೆ ನಾವು ವಿರೋಧ ಮಾಡುತ್ತಿದ್ದು ಹೆಚ್ಚಿನ ಮತಗಳನ್ನ ಬಿಜೆಪಿ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಅರ್ಧಕ್ಕೆ ರ್‍ಯಾಲಿ ನಿಲ್ಲಿಸಿದ ಯಡಿಯೂರಪ್ಪ; ಎರಡು ದಿನ ಪ್ರಚಾರಕಾರ್ಯಕ್ಕೆ ಸಿದ್ದರಾಮಯ್ಯ ಬ್ರೇಕ್

ಗೋಕಾಕ್​ನಲ್ಲಿ ರೋಡ್ ಶೋ:

ಮುಡಲಗಿ ಬಳಿಕ ರಮೇಶ್ ಜಾರಕಿಹೋಳಿ ಕ್ಷೇತ್ರವಾದ ಗೋಕಾಕ್ ನಗರದಲ್ಲಿ ತೆರೆದ ವಾಹನದಲ್ಲಿ ಬಿಜೆಪಿಗರಿಂದ ಬೃಹತ್ ರೋಡ್ ಶೋ ನಡೆಯಿತು. ರಮೇಶ್ ಜಾರಕಿಹೋಳಿ ಅನುಪಸ್ಥಿತಿಯಲ್ಲೇ ಬಾಲಚಂದ್ರ ಹಾಗೂ ರಮೇಶ್ ಅಳಿಯ ಅಂಬಿರಾವ ಪಾಟೀಲ್ ನೇತೃತ್ವದಲ್ಲಿ ಗೋಕಾಕ್ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಎರಡು ಕಿಲೋಮೀಟರ್ ರೋಡ್ ಶೋ ಆಯಿತು. ರಮೇಶ್ ಇಲ್ಲದೇ ಇದ್ದರೂ ಸಹೋದರ ಬಾಲಚಂದ್ರ ಇಡೀ ರೋಡ್ ಶೋ ಉಸ್ತುವಾರಿ ಹೊತ್ತು 7 ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನ ಸೇರಿಸಿದರು.

ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಜಿಲ್ಲೆಯಲ್ಲಿ ಸುರೇಶ್ ಅಂಗಡಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಕಾಲಿಕ ನಿಧನದಿಂದಾಗಿ ಅವರ ಕುಟುಂಬದವರಿಗೆ ಟಿಕೆಟ್ ನೀಡಿದ್ದೇವೆ. ಸುರೇಶ್ ಅಂಗಡಿ ಅರ್ಧಕ್ಕೆ ಬಿಟ್ಟು ಹೋಗಿರುವ ಕೆಲಸಗಳನ್ನ ನಾವು ಮಾಡುವ ಭರವಸೆ ನೀಡುತ್ತೇವೆ. ದೇಶದಲ್ಲೆ ಬಿಜೆಪಿ ಅಲೆ ಇದೆ. ಕಾರ್ಯಕರ್ತರು ಎರಡು ದಿನ ಮನೆ ಮನೆಗೆ ತೆರಳಿ ಬಿಜೆಪಿ ಪರ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ಇದನ್ನೂ ಓದಿ: ಹೆಚ್ಚಾಗುತ್ತಿರುವ ಕೊರೋನಾ; ಸಿಎಂ ಜೊತೆ ಚರ್ಚಿಸಿ ಶೀಘ್ರವೇ ಬಿಗಿ ಕ್ರಮ ಎಂದ ಸಚಿವ ಸುಧಾಕರ್

ಪತಿ ನೆನೆದು ಕಣ್ಣೀರು ಹಾಕಿದ ಮಂಗಲಾ:

ಗೋಕಾಕ್ ನಗರದವರೇ ಆದ ಮಂಗಲಾ ಅಂಗಡಿ ತಮ್ಮ ಪತಿ ಸುರೇಶ್ ಅಂಗಡಿ ಅವರನ್ನ ನೆನೆದು ಕಣ್ಣೀರು ಹಾಕಿದರು. ನಾನು ಗೋಕಾಕ್​ದಲ್ಲೇ ಹುಟ್ಟಿ ಬೆಳೆದಿದ್ದೇನೆ. ನನ್ನ ಪತಿಗೆ ನಮ್ಮೂರ ಅಳಿಯ ಎಂದು ಸಾಕಷ್ಟು ಬಂಬಲವನ್ನ ಇಲ್ಲಿನ ಜನ ನೀಡುತ್ತಾ ಬಂದಿದ್ದರು. ಆದ್ರೆ ನಿಮ್ಮ ಅಳಿಯ ನಮ್ಮನ್ನ ಬಿಟ್ಟು ಅಗಲಿದ್ದಾರೆ. ಅಳಿಯನಿಗೆ ನೀಡಿದ ಬೆಂಬಲವನ್ನ ನಿಮ್ನ ಮಗಳಾದ ನನಗೂ ನೀಡಬೇಕು ಎಂದು ಕಣ್ಣೀರು ಹಾಕಿದರು.

ಒಟ್ಟಿನಲ್ಲಿ ಜಾರಕಿಹೋಳಿ ಸಹೋದರ ಸವಾಲಾಗಿರುವ ಗೋಕಾಕ ತಾಲೂಕಿನಲ್ಲಿ ರಮೇಶ್ ಮತ್ತು ಬಾಲಚಂದ್ರ ಅಷ್ಟೊಂದು ತಲೆ ಕಡೆಸಿಕೊಳ್ಳದೆ ತಮ್ಮದೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಮುಖ್ಯಮಂತ್ರಿ ಅವರೂ ಅಖಾಡಕ್ಕೆ ಎಂಟ್ರಿ ಕೊಟ್ಟು ಮತ ಯಾಚನೆ ಮಾಡಿದರು. ಜ್ವರದಿಂದ ಬಳಲುತ್ತಿದ್ದರೂ ನಿನ್ನೆ ಸಿಎಂ ಸಾಕಷ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಸಕೊಂಡಿದ್ದರು. ಇಂದು ಅನಿವಾರ್ಯವಾಗಿ ಅವರು ರ್ಯಾಲಿಯೊಂದರಿಂದ ಅರ್ಧಕ್ಕೆ ನಿರ್ಗಮಿಸಬೇಕಾಯಿತು. ಆದರೂ ಇಂದು ಸಂಜೆ ಅವರು ದೇವೇಂದ್ರ ಫಡ್ನವಿಸ್ ಜೊತೆ ಪ್ರಚಾರ ಸಮಾವೇಶದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇವರೆಲ್ಲರ ಶ್ರಮ ಎಷ್ಟರ ಮಟ್ಟಿಗೆ ಬಿಜೆಪಿಗೆ ಫಲ ನೀಡುತ್ತೆ ಅನ್ನೊದು ಕಾದುನೋಡಬೇಕು.

ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಏಪ್ರಿಲ್ 17ರಂದು ಮತದಾನ ನಡೆಯಲಿದೆ.

ವರದಿ: ಲೋಹಿತ್ ಶಿರೋಳ
Published by:Vijayasarthy SN
First published: