ಮೈಸೂರಿನ ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ: ತನಿಖೆಗೆ ಸಿಎಂ ಆದೇಶ; ಮೃತರ ಕುಟಂಬಕ್ಕೆ 50 ಲಕ್ಷ ಪರಿಹಾರ

ಹಿರಿಯ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ನಂಜನಗೂಡಿನ ವೈದ್ಯಾಧಿಕಾರಿ ಡಾ. ಎಸ್.ಆರ್. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

  • Share this:
ಬೆಂಗಳೂರು(ಆ. 21): ನಂಜನಗೂಡಿನ ವೈದ್ಯಾಧಿಕಾರಿ ಡಾ. ಎಸ್ ಆರ್ ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ. ಕರ್ನಾಟಕ ನೌಕರರ ಸಂಘದ ಮನವಿ ಮೇರೆಗೆ ಸಿಎಂ ಈ ಕ್ರಮ ತೆಗೆದುಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸಿ ಏಳು ದಿನದೊಳಗೆ ವರದಿ ನೀಡುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಇದರ ಜೊತೆಗೆ, ಮೃತ ವೈದ್ಯಾಧಿಕಾರಿಯ ಕುಟುಂಬಕ್ಕೆ ಕೂಡಲೇ 50 ಲಕ್ಷ ರೂ ಪರಿಹಾರವನ್ನೂ ಸಿಎಂ ಘೋಷಿಸಿದ್ಧಾರೆ. ಅವರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಬೇಕು. ಸರ್ಕಾರದ ಇತರ ಸೌಲಭ್ಯವನ್ನು ಶೀಘ್ರದಲ್ಲೇ ಒದಗಿಸಬೇಕು ಎಂದೂ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ವೈದ್ಯಾಧಿಕಾರಿ ನಾಗೇಂದ್ರ ನಿನ್ನೆ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದರು. ಇವರ ಸಾವು ಇದೀಗ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಕುರಿತು ನಿನ್ನೆ ಸಂಜೆ ಬೆಂಗಳೂರಿನಲ್ಲಿ ಮಾತನಾಡಿದ್ದ ಸಚಿವ ಡಾ| ಕೆ. ಸುಧಾಕರ್‌, "ವೈದ್ಯಾಧಿಕಾರಿಯ ಸಾವನ್ನು ಅನ್ಯ ಕಾರಣಗಳಿಗೆ ದುರ್ಬಳಕೆ ಮಾಡಬಾರದು. ನಾಗೇಂದ್ರ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಕೂಡ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಮೃತರ ಕುಟುಂಬದೊಂದಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ವೈದ್ಯಾಧಿಕಾರಿಗಳ ಸಂಘದೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ನಾಗೇಂದ್ರ ಅವರ ಸಾವಿನಲ್ಲಿ ಗೊಂದಲ ಸೃಷ್ಟಿ ಮಾಡುವುದು ಅಮಾನವೀಯ. ಘಟನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯ ದೊರಕಿಸಿಕೊಡಲಾಗುವುದು" ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ: ಮೈಸೂರು ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ; ನ್ಯಾಯ ಸಿಗೋವರೆಗೂ ನಾವು ಸೇವೆ ನೀಡಲ್ಲ ಎಂದ ಆಸ್ಪತ್ರೆ ಸಿಬ್ಬಂದಿ

ಹಾಗೆಯೇ, ನಾಗೇಂದ್ರ ಅವರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ನೀಡುವುದಾಗಿ ಡಾ. ಸುಧಾಕರ್ ತಿಳಿಸಿದ್ದರು. ಆದರೆ, ವಿಶೇಷ ಸಂದರ್ಭವೆಂದು ಪರಿಗಣಿಸಿ ಪರಿಹಾರ ಹಣವನ್ನು 50 ಲಕ್ಷ ರೂಗೆ ಏರಿಸಲಾಗಿದೆ.ಡಾ. ಎಸ್.ಆರ್. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ಆಸ್ಪತ್ರೆ ವೈದ್ಯರು ಇಂದು ಬೆಳಗ್ಗೆ ಪ್ರತಿಭಟನೆ ಮುಂದುವರಿಸಿದರು. ಜಿಲ್ಲಾ ಪಂಚಾಯತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಯಾರೊಬ್ಬರೂ ಕೆಲಸ ಮಾಡುವುದಿಲ್ಲ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಹೊರತುಪಡಿಸಿ ಉಳಿದ ಯಾವುದೇ ಚಿಕಿತ್ಸೆ ನೀಡುವುದಿಲ್ಲ ಎಂದು ಆರೋಗ್ಯ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.
Published by:Vijayasarthy SN
First published: