ಬೆಳಗಾವಿ(ಅಕ್ಟೋಬರ್.07): ಇತ್ತೀಚಿಗೆ ಕೊರೋನಾ ಸೋಂಕಿನಿಂದ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ನಿವಾಸಕ್ಕೆ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿದರು. ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಸಿಎಂ ಕುಟುಂಬಸ್ಥರಿಗೆ ಯಾವ ರೀತಿ ಸಾಂತ್ವನ ಹೇಳಲಿ ಎಂಬುದು ಅರ್ಥವಾಗುತ್ತಿಲ್ಲ ಎಂದು ನೊಂದು ನುಡಿದರು. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಿದ ವಿಶ್ವೇಶ್ವರಯ್ಯ ನಗರದಲ್ಲಿ ಇರುವ ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದರು. 30 ನಿಮಿಷಕ್ಕೂ ಹೆಚ್ಚು ಕಾಲ ಮನೆಯಲ್ಲಿ ಇದ್ದ ಸಿಎಂ ಬಿ ಎಸ್ ಯಡಿಯೂರಪ್ಪನವರು ಸುರೇಶ್ ಅಂಗಡಿ ಹೆಂಡತಿ ಮಂಗಲ, ತಾಯಿ ಸೋಮವ್ವ ಜತೆಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಸುರೇರ್ಶ ಅಂಗಡಿ ಕೆಲಸದ ಬಗ್ಗೆ ಸಿಎಂ ಪ್ರಶಂಸೆ ವ್ಯಕ್ತ ಪಡಿಸಿದರು. ಸೋಮವ್ವ ಕೈ ಹಿಡಿದು ಸಿಎಂ ಬಿ ಎಸ್ ಯಡಿಯೂರಪ್ಪ ಧೈರ್ಯ ತುಂಬುವ ಕೆಲಸ ಮಾಡಿದರು.
ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸುರೇಶ್ ಅಂಗಡಿ ತನ್ನ ಆತ್ಮೀಯ ಸ್ನೇಹಿತರಾಗಿದ್ದರು. ಅವರು ಇಲ್ಲ ಎನ್ನುವುದು ಕಲ್ಪನೆ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಅನೇಕ ಕೊಡುಗೆಯನ್ನು ಅಂಗಡಿ ನೀಡಿದ್ದಾರೆ. ರೈಲ್ವೆ ಸಚಿವರಾದ ಬಳಿ ರಾಜ್ಯಕ್ಕೆ ಅನೇಕ ಉಪಯುಕ್ತ ಯೋಜನೆಗಳಿಗೆ ಚಾಲನೆ ನೀಡುವಲ್ಲಿ ವಿಶೇಷ ಪಾತ್ರವನ್ನು ವಹಿಸಿದ್ದರು. ದೆಹಲಿಗೆ ತೆರಳುವ ಮೊದಲು ಜ್ವರ ಬಂದರು ನಿರ್ಲಕ್ಷ್ಯ ಮಾಡಿದ್ದರು. ಇದುವೆ ಅವರ ಪ್ರಾಣಕ್ಕೆ ಕುತ್ತು ತಂದಿದೆ ಎಂದರು.
ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಹೇಗೆ ಸಾಂತ್ವನ ಹೇಳುವುದು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಅಂಗಡಿಯವರ ಅಂತ್ಯಕ್ರಿಯೆಯನ್ನು ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನೇರವೇರಿಸಲಾಗಿದೆ. ಅಲ್ಲಿಯೇ ಸ್ಮಾರಕ ನಿರ್ಮಾಣದ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ : ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಘೋಷಣೆ; ಶಿರಾದಲ್ಲಿ ಟಿ.ಬಿ. ಜಯಚಂದ್ರ, ಆರ್ಆರ್ ನಗರದಲ್ಲಿ ಕುಸುಮಾ ಸ್ಪರ್ಧೆ
ಸಿಎಂ ಬಿ ಎಸ್ ಯಡಿಯೂಪ್ಪನವರಿಗೆ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಸಾಥ್ ನೀಡಿದ್ದರು. ಸುರೇಶ್ ಅಂಗಡಿ ಮನೆಗೆ ಭೇಟಿ ನೀಡಿದ ಬಳಿಕ ಸಿಎಂ ಯಡಿಯೂರಪ್ಪನವರು ಸರ್ಕೀಟ್ ಹೌಸ್ ನಲ್ಲಿ ಸಭೆಯನ್ನು ನಡೆಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಿಎಂ ಕೊರೋನಾ ಸೋಂಕು ಹಾಗೂ ಮರಣ ಪ್ರಮಾಣ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ