ಮಸ್ಕಿ ಉಪಚುನಾವಣೆ ಅಖಾಡಕ್ಕೆ ಸಿಎಂ ಯಡಿಯೂರಪ್ಪ; ದಲಿತ ಕೇರಿಯಲ್ಲಿ ಭರ್ಜರಿ ಸ್ವಾಗತ

ಉಪಚುನಾವಣೆ ನಡೆಯುತ್ತಿರುವ ಮಸ್ಕಿ ಕ್ಷೇತ್ರಕ್ಕೆ ನಿನ್ನೆ ರಾತ್ರಿ ಆಗಮಿಸಿದ ಸಿಎಂ ಯಡಿಯೂರಪ್ಪ ಅವರು ಮೂರು ದಿನಗಳ ಕಾಲ ಇಲ್ಲಿ ವಿವಿಧ ಕಡೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಯಚೂರಿನಲ್ಲಿ ದಲಿತರ ಮನೆಯಲ್ಲಿ ಸಿಎಂ ಯಡಿಯೂರಪ್ಪ ಆಹಾರ ಸ್ವೀಕಾರ

ರಾಯಚೂರಿನಲ್ಲಿ ದಲಿತರ ಮನೆಯಲ್ಲಿ ಸಿಎಂ ಯಡಿಯೂರಪ್ಪ ಆಹಾರ ಸ್ವೀಕಾರ

  • Share this:
ರಾಯಚೂರು: ಪ್ರತಾಪಗೌಡ ಅವರ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣದ ಅಖಾಡ ಈಗ ರಂಗೇರಿದೆ. ಈಗಾಗಲೇ ಒಂದು ಬಾರಿ ಪ್ರಚಾರ ಮಾಡಿದ್ದ ಸಿಎಂ ಯಡಿಯೂರಪ್ಪ ಈಗ ಮೂರು ದಿನಗಳ ಕಾಲ ಮಸ್ಕಿ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ನಿನ್ನೆ ಆಗಮಿಸಿದ ಸಿಎಂ ದಲಿತರ ಮನೆಯಲ್ಲಿ ಉಪಹಾರ ಸೇವಿಸಿ, ಕಾಶಿ ಜಗದ್ಗುರಗಳನ್ನು ಭೇಟಿ ಮಾಡಿದರು, ಇಂದು ಮೂರು ಕಡೆ ಬಹಿರಂಗ ಸಭೆ ನಡೆಸಲಿದ್ದಾರೆ. ಒಟ್ಟು 28 ಹಳ್ಳಿಗಳ ಜನರನ್ನು ಮೂರು ಕಡೆ ಸೇರಿಸಲಿದ್ದಾರೆ. ಮಸ್ಕಿಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆಸಲಿದ್ದಾರೆ. ನಾಳೆ ಜಾತಿವಾರು ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.

ನಿನ್ನೆ ಬೆಂಗಳೂರಿನಿಂದ ಬಂದ ಸಿಎಂ ಮುದಗಲ್​ನಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದ ನಂತರ ನೇರವಾಗಿ ಮಸ್ಕಿಗೆ ಆಗಮಿಸಿದರು. ಮಸ್ಕಿಯಲ್ಲಿ ವಾರ್ಡ್ 18 ರಲ್ಲಿಯ ಮಾರೆಮ್ಮ ಎಂಬ ದಲಿತರ ಮನೆಯಲ್ಲಿ ಆಗಮಿಸಿ ಉಪಾಹಾರ ಸೇವಿಸಿದರು. ಸಿಎಂ ಆಗಮನಕ್ಕಾಗಿ ದಲಿತರ ಕಾಲೋನಿಯನ್ನು ರಂಗೋಲಿ ಹಾಕಿ ಶಿಂಗರಿಸಿದ್ದರು. ಸಿಎಂ ಆಗಮನದ ಸಂದರ್ಭದಲ್ಲಿ ಹೂ ಮಳೆಗರೆದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ಶಾಸಕ ರಾಜುಗೌಡ, ಪರಣ್ಣ ಮುನವಳ್ಳಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಇದ್ದರು. ಸಿಎಂಗಾಗಿ ಉಪ್ಪಿಟ್ಟು, ಅವಲಕ್ಕಿ ಸಿದ್ದ ಮಾಡಿಕೊಂಡಿದ್ದರು. ಆದರೆ ಅವರು ಗೋಡಂಬಿ, ಹಣ್ಣುಗಳನ್ನು ಸೇವಿಸಿದರು.

ಇದನ್ನೂ ಓದಿ: ಮುಷ್ಕರ ನಿಷೇಧದ ಬೆದರಿಕೆ ನಡುವೆಯೂ 4ನೇ ದಿನಕ್ಕೆ ಅಡಿ ಇಟ್ಟ ಸಾರಿಗೆ ನೌಕರರ ಸ್ಟ್ರೈಕ್

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಲಿತರ ಮನೆಗೆ ಭೇಟಿ ನೀಡುವುದರಲ್ಲಿ ಏನು ವಿಶೇಷವಿಲ್ಲ. ಅವಕಾಶ ಸಿಕ್ಕಾಗ ದಲಿತರ ಮನೆಗೆ ಭೇಟಿ ನೀಡುತ್ತಿರುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಇದೇ ವೇಳೆ ಮಸ್ಕಿಯಲ್ಲಿಯ ಗಚ್ಚಿನಮಠದಲ್ಲಿರುವ ಉಜ್ಜಯಿನಿ ಜಗದ್ಗುರು ಶ್ರೀರುದ್ರಮುನಿ ಸ್ವಾಮಿಗಳ ಭೇಟಿ ಮಾಡಿ ಆಶೀರ್ವಾದ ಪಡೆದು ಹತ್ತು ನಿಮಿಷ ಅವರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಲಿತರು ಹಾಗು ವೀರಶೈವ ಸ್ವಾಮಿಗಳ ಭೇಟಿ ಮಾಡಿರುವುದು ಸಹ ಚುನಾವಣೆಯ ತಂತ್ರವಾಗಿದೆ ಎನ್ನಲಾಗಿದೆ. ಈ ವೇಳೆ ಮಾತನಾಡಿದ ಅವರು, ಮಸ್ಕಿಯಲ್ಲಿ ಬಿಜೆಪಿ ಹಣ ಹಂಚುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಸೋಲಿನ ಭಯದಿಂದ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಹೇಳಿದರು.

ಇಂದು ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಈಗಾಗಲೇ ನಮ್ಮ ಅಭ್ಯರ್ಥಿ 25,000 ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತವಾಗಿದೆ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಬಿದ್ದ ಮನೆ ಪರಿಹಾರಕ್ಕಾಗಿ ಅಲೆದಾಟ; ಕೇಂದ್ರ ಸಚಿವ ಜೋಶಿ ಮನೆ ಎದುರು ವಿಷ ಸೇವಿಸಿ ಮಹಿಳೆ ಸಾವು

ಮಸ್ಕಿ ತಾಲೂಕಿನ ನಾರಾಯಣಪುರ ಬಲದಂಡೆ ನಾಲೆಯ 5ಎ ಕಾಲುವೆಯ ಬಗ್ಗೆ ತಜ್ಞರ ವರದಿ ತರಿಸಿಕೊಂಡು ಸಾಧಕ ಬಾಧಕ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಅವರು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾತನಾಡಿ, ಸಾರಿಗೆ ನೌಕರರು ಹಠ ಬಿಟ್ಟು ಕೆಲಸಕ್ಕೆ ಬನ್ನಿ ನಿಮ್ಮ ಕೈ ಮುಗಿಯುತ್ತೇನೆ, ಈಗಾಗಲೇ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದರು.

ಇಂದು ತುರ್ವಿಹಾಳದಲ್ಲಿ ತುರ್ವಿಹಾಳ, ತಿಡಿಗೋಳ ಜಿಲ್ಲಾ ಪಂಚಾಯತ, ಬಳಗಾನೂರಿನಲ್ಲಿ ಬಳಗಾನೂರು, ಗುಡುದೂರು ಜಿಪಂ ವ್ಯಾಪ್ತಿಯ, ಸಂತೆಕೆಲ್ಲೂರಿನಲ್ಲಿ ಸಿಎಂ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ನಂತರದಲ್ಲಿ ಮಸ್ಕಿಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆಸಲಿದ್ದಾರೆ. ನಾಳೆ ಮುದಗಲ್ ನಲ್ಲಿ ಕ್ಷೇತ್ರದ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸಲಿದ್ದು ಸಂಜೆ ಮಸ್ಕಿಯಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ, ಸೋಮವಾರ ಮುಂಜಾನೆ ಮುದಗಲ್​ನಿಂದ ಬಸವಕಲ್ಯಾಣಕ್ಕೆ ಪ್ರಚಾರಕ್ಕೆ ತೆರಳಲಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: