ಬಾಗಲಕೋಟೆ (ಜ. 15): ರಾಜ್ಯದಲ್ಲಿ ಒಂದೆಡೆ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಿಡಿ ಸ್ಫೋಟ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಮೀಸಲಾತಿ ದಂಗಲ್ ಶುರುವಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಆರಂಭವಾಗಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಜೊತೆಗೆ ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡಿಸುವಂತೆ ಆಗ್ರಹಿಸಿ ಇಂದಿನಿಂದ ಪಾದಯಾತ್ರೆ ಆರಂಭವಾಗಿದೆ. ಮೀಸಲಾತಿ ದಂಗಲ್ ಮಧ್ಯೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಇತ್ತ ಕೂಡಲಸಂಗಮದಿಂದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ, ಅತ್ತ ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ರಾಜ್ಯದ ಪ್ರಬಲ ಎರಡು ಸಮುದಾಯಗಳೂ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಮುಜುಗರ ತರುವಂಥ ಸಂಗತಿಯಾಗಿದೆ. ಕುರುಬ ಸಮುದಾಯ ಎಸ್ ಟಿ ಮೀಸಲಾತಿ ಹೋರಾಟಕ್ಕೆ ಬೆಂಬಲವಾಗಿ ಸಚಿವ ಕೆ ಎಸ್ ಈಶ್ವರಪ್ಪ ಜೊತೆಗೆ ಸಚಿವರಾದ ಎಂಟಿಬಿ ನಾಗರಾಜ್, ಮಾಜಿ ಸಚಿವ ಎಚ್ ವಿಶ್ವನಾಥ್, ಕಾಂಗ್ರೆಸ್ ಮುಖಂಡ ಎಚ್ ಎಂ ರೇವಣ್ಣ, ಸೇರಿದಂತೆ ಪಕ್ಷಾತೀತ ನಾಯಕರು ಬೆಂಬಲವಾಗಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟಕ್ಕೆ ಫೈರ್ ಬ್ರಾಂಡ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತಿದ್ದು, ಮೀಸಲಾತಿ ಹೇಗೆ ಪಡೆಯಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ತಿರುಗೇಟು ನೀಡಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ, ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಆರ್ ಎಸ್ ಎಸ್ ಮೂಲದಿಂದ ರಾಜಕೀಯಕ್ಕೆ ಬಂದವರಾಗಿದ್ದು, ಈ ಎರಡು ಪಾದಯಾತ್ರೆ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆಯಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯದ ಎಸ್ ಟಿ ಹೋರಾಟದ ಹಿಂದೆ ಆರ್ ಎಸ್ ಎಸ್ ಪಾತ್ರ ಇದೆ ಎಂದಿದ್ದರು. ಆರ್ ಎಸ್ ಎಸ್ ತಂತ್ರದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಕ್ಕಟ್ಟಿಗೆ ಸಿಲುಕಿಸುವುದಾಗಿ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟಕ್ಕೆ ಮುರುಗೇಶ್ ನಿರಾಣಿ ಬೆಂಬಲ ನೀಡಿದ್ದರು. ಆದರೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಮುರುಗೇಶ್ ನಿರಾಣಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟದ ಬಗ್ಗೆ ಗೊಂದಲ ಹೇಳಿಕೆ ಕೊಡುವ ಮೂಲಕ ಪರೋಕ್ಷವಾಗಿ ಹೋರಾಟ ಹತ್ತಿಕ್ಕುವ ತಂತ್ರ ರಾಜ್ಯ ಸರ್ಕಾರ ಅನುಸರಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಿಂದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಿನ್ನೆಯಿಂದಲೇ ಪಾದಯಾತ್ರೆ ಆರಂಭವಾಗಿದೆ. ಇವತ್ತು ಸಂಜೆ ಹೊತ್ತಿಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿದೆ. ಇವತ್ತು ಬೆಳಿಗ್ಗೆ ಹುನಗುಂದ ಪಟ್ಟಣದಿಂದ ಎರಡನೇ ದಿನದ ಪಾದಯಾತ್ರೆಯಲ್ಲಿ ಜೋಡೆತ್ತು ಮೆರವಣಿಗೆ ಗಮನ ಸೆಳೆಯಿತು. ಬಳಿಕ ಹುನಗುಂದ ಪಟ್ಟಣದ ಹೊರವಲಯದಲ್ಲಿ ಇಳಕಲ್ ಗುರು ಮಹಾಂತ್ ಶ್ರೀಗಳು ಆಗಮಿಸಿ, 2ಎ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದರು. ಈ ವೇಳೆ ಇಳಕಲ್ ಗುರು ಮಹಾಂತ್ ಶ್ರೀಗಳು, ಹಾಗೂ ಪಂಚಮಸಾಲಿ ಶ್ರೀ ಪರಸ್ಪರ ಕಾಲಿಗೆ ಬಿದ್ದು ನಮಸ್ಕರಿಸಿದರು, ಇಳಕಲ್ ಶ್ರೀ ಪಂಚಮಸಾಲಿ ಶ್ರೀ ಸನ್ಮಾನಿಸಿದರು. ಬಳಿಕ ವಿಜಯಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಮೂಲಕ ಇಳಕಲ್ ಕಡೆಗೆ ಸಾಗಿದ ಪಾದಯಾತ್ರೆ, ಮಧ್ಯಾಹ್ನ ಇಳಕಲ್ ಪಟ್ಟಣಕ್ಕೆ ಬಂದು ತಲುಪಿದ ವೇಳೆ ಮಹಿಳೆಯರು ಆರತಿ, ಪುಷ್ಪ ಸಮರ್ಪಿಸಿ, ಪಾದಯಾತ್ರೆ ಸ್ವಾಗತಿಸಿ ಕೋರಿದರು.
ಹುನಗುಂದದಿಂದ ಆರಂಭವಾಗಿರುವ ಎರಡನೇ ದಿನದ ಪಾದಯಾತ್ರೆ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಕಡೆಕೊಪ್ಪ ಗ್ರಾಮಕ್ಕೆ ತಲುಪಿ ಸಂಜೆ ವಾಸ್ತವ್ಯ ಹೂಡಲಿದ್ದಾರೆ. ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಸೇರಿದಂತೆ ನೂರಾರು ಜನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಈ ಪಾದಯಾತ್ರೆ 30 ದಿನಗಳ ಕಾಲ ಸಂಚರಿಸಿ ಬೆಂಗಳೂರು ವಿಧಾನಸೌದ ತಲುಪಲಿದೆ. ಪಾದಯಾತ್ರೆ ವೇಳೆ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಯಡಿಯೂರಪ್ಪನವರು ಮಾತಿಗೆ ತಪ್ಪೋದಿಲ್ಲ ಅಂತ ಅಂದ್ಕೊಂಡಿದ್ವೀವಿ. ಆದ್ರೆ ನಿನ್ನೆಯಿಂದ ಮಾತು ತಪ್ಪುತ್ತಿದ್ದಾರೆ. ಈಗಲೂ ಭರವಸೆಯಿದೆ ಮಾತಿಗೆ ತಪ್ಪದೇ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಬೇಕು ಎಂದರು.
ಎರಡನೇ ದಿನದ ಪಾದಯಾತ್ರೆ ಆನಂದ ತಂದಿದೆ. ಪಾದಯಾತ್ರೆ, ಪ್ರತಿಭಟನೆಯಿಂದ ಮೀಸಲಾತಿ ಸಿಗುವುದಿಲ್ಲ, ಕುಳಿತು ಚರ್ಚಿಸಿ ಮೀಸಲಾತಿ ಪಡೆದುಕೊಳ್ಳಬೇಕು ಎನ್ನುವ ಸಚಿವ ಮುರುಗೇಶ್ ನಿರಾಣಿ ಸಲಹೆಗೆ ಪಂಚಮಸಾಲಿ ಶ್ರೀ ಸವಾಲೆಸೆದಿದ್ದಾರೆ. ಜ.17ಕ್ಕೆ ಬಾಗಲಕೋಟೆ ಜಿಲ್ಲೆ ಕೆರಕಲಮಟ್ಟಿ ಗ್ರಾಮದ ಬಳಿಯ ಸಕ್ಕರೆ ಕಾರ್ಖಾನೆ ಉದ್ಘಾಟಿಸಲು ಬರುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಪ್ರಯತ್ನಿಸಲಿ, ನಾವು ಪಾದಯಾತ್ರೆ ಮಧ್ಯೆದಿಂದಲೇ ವಾಪಸ್ ಪಡೆದು ಕೆರಕಲಮಟ್ಟಿಗೆ ಪಾದಯಾತ್ರೆ ಮೂಲಕವೇ ಬರುತ್ತೇವೆ. ಅಮಿತ್ ಶಾ ಅವರಿಗೆ ಮೀಸಲಾತಿ ಸತ್ಯ ಹೇಳಿ ಮೋದಿಗೆ ತಲುಪಿಸುತ್ತೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಳ್ಳಬೇಕೆಂದರು.
ಸಿಎಂ ಯಡಿಯೂರಪ್ಪ ಹರಿಹರ ಪೀಠಕ್ಕೆ 10ಕೋಟಿ ಅನುದಾನ ಘೋಷಿಸಿದ್ದಕ್ಕೆ ನಮ್ಮ ಮಠ ಬಡವರ, ಕೂಲಿಕಾರರ, ಶ್ರೀ ಸಾಮಾನ್ಯರ ಮಠ. ನಾನು ಸಮಾಜಕ್ಕಾಗಿ ನ್ಯಾಯ ಸಿಗೋದಕ್ಕೆ ಹೋರಾಟ ಮಾಡ್ತಿದ್ದೇನೆ. ಹಾಗಾಗಿ ನನ್ನ ಮಠಕ್ಕೆ ಹಣ ಬೇಡ. ಅವರು ಹಣ ಪಡೆದು ಮಠ ಕಟ್ಟಲಿ ಎಂದು ಹರಿಹರ ಪೀಠದ ಜಗದ್ಗುರು ವಚನಾನಾಂದ ಶ್ರೀಗೆ ತಿರುಗೇಟು ನೀಡಿ, 2021ರಲ್ಲಿ ನಮ್ಮ ಶ್ರೀ ಮಠಕ್ಕೆ ಕೊಟ್ಟಿರುವ 20ಲಕ್ಷ ಅನುದಾನ ವಾಪಸ್ ಕೊಡ್ತೀವಿ ನಮಗೆ 2ಎ ಮೀಸಲಾತಿ ಬೇಕೆಂದರು.
ಇದನ್ನು ಓದಿ: ಶಾಲಾ-ಕಾಲೇಜು ಆರಂಭವಾದರೂ ಮುಗಿಯದ ಶುಲ್ಕ ಗೊಂದಲ; ಸಭೆಯಲ್ಲಿ ಆಯುಕ್ತರಿಗೆ ಕೈ ಮುಗಿದು ಕಣ್ಣೀರು ಹಾಕಿದ ಪೋಷಕರು
ಇನ್ನು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಿರಾಣಿ ಸಾಹೇಬ್ರೆ ನಮಗೂ ಸಹನೆ ಇದೆ. ಸಮಾಜಕ್ಕೆ ನಿಮ್ಮ ಕೊಡುಗೆ ಏನು. ಮಂತ್ರಿ ಆಗುವುದಕ್ಕೆ ಅಲ್ಲ. ಮಠ ಕಟ್ಟಲು ಹಣ ಕೊಡೋದು ರಾಜಕೀಯ ಗಿಮಿಕ್. ಈ ನಾಟಕ ಬೇಡಾ ನಮಗೆ ಮೀಸಲಾತಿ ಕೊಡ್ತೀರೋ ಇಲ್ವೋ ಅಷ್ಟೇ ಹೇಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರಶ್ನಿಸಿದರು.
ಅತ್ತ ಕಾಗಿನೆಲೆಯಿಂದ ಪಾದಯಾತ್ರೆ ಆರಂಭವಾಗಿದ್ದು, ಎರಡು ಹಿಂದುಳಿದ ವರ್ಗಗಳ ಸಮಾಜದ ಸ್ವಾಮೀಜಿಗಳು ಮೀಸಲಾತಿ ಹೋರಾಟಕ್ಕೆ ಧುಮುಕಿದ್ದಾರೆ. ಹೋರಾಟದ ರೂಪುರೇಷೆ ಸಾಮ್ಯತೆ ಹೊಂದಿದ್ದು, ನ್ಯಾಯಯುತ ಹೋರಾಟಕ್ಕೆ ಪಾದಯಾತ್ರೆಯಿಂದ ರಾಜ್ಯ ಸರ್ಕಾರ ಹೇಗೆ ಸ್ಪಂದಿಸುತ್ತೆ ಎಂದು ಕಾದು ನೋಡಬೇಕಿದೆ.