ಕೋಲಾರ: ಅತಿವೃಷ್ಟಿ ಹಿನ್ನೆಲೆಯಲ್ಲಿ (Heavy Rainfall) ಬೆಳೆಹಾನಿ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಭೇಟಿ ನೀಡಿದರು. ಮೊದಲು ನರಸಾಪುರ ಬಳಿಯ ಚೌಡದೇನಹಳ್ಳಿ ಗ್ರಾಮದ ರೈತ ಮಂಜುನಾಥ್ ಎನ್ನುವರ ತೋಟದಲ್ಲಿ ಹಾನಿಗೆ ಒಳಗಾದ ರಾಗಿ ಹಾಗು ತೊಗರಿ ಬೆಳೆಯನ್ನ (RAGI AND TOOR DAL CROP) ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು. ಸಿಎಂಗೆ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ , ಶಾಸಕ ಶ್ರೀನಿವಾಸಗೌಡ, ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಹಲವು ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು. ನಂತರ ಚೌಡದೇನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಹಾಗು ಹೂ ಬೆಳೆಹಾನಿಯನ್ನ ಪರಿಶೀಲನೆ ನಡೆಸಿದ ಸಿಎಂ, ನೊಂದ ರೈತರಿಗೆ ಸಮಾಧಾನ ಹೇಳಿದರು, ಜಗದೀಶ್ ಎನ್ನುವರು ಎರಡು ಎಕರೆ ಪ್ರದೇಶದಲ್ಲಿ ಸೇವಂತಿಗೆ ಹೂ ಬೆಳೆದಿದ್ದು, ಜೋರು ಮಳೆಯಿಂದಾಗಿ ಹೂ ಬೆಳೆ ನೆಲಕಚ್ಚಿದೆ. ಬೆಳೆಹಾನಿ ಬಗ್ಗೆ ಸಿಎಂ ಜೊತೆಗೆ ಮಾತನಾಡುವಾಗ ರೈತ ಜಗದೀಶ್ ಬಾವುಕರಾದರು. ರೈತನನ್ನ ಸಮಾಧಾನ ಪಡಿಸಿದ ಸಿಎಂ, ಹೌದಪ್ಪ ರೈತರ ಜೀವನ ಕಷ್ಟಕರವಾಗಿದೆ. ಧೈರ್ಯ ತಂದುಕೊ, ನಿನ್ನೊಂದಿಗೆ ನಾವಿದ್ದೇವೆ ಎಂದು ಸಮಾಧಾನ ಮಾಡಿದರು.
1 ಲಕ್ಷ ಹಣ ಬಿಡುಗಡೆ
ಬೆಳೆಹಾನಿ ವೀಕ್ಷಣೆ ನಂತರ ಕೋಲಾರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 20 ವರ್ಷದ ನಂತರ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗಿದೆ ಎಂದರು. ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್ ಕೃಷಿ ಬೆಳೆ, 6900 ಹೆಕ್ಟೇರ್ ನಷ್ಟು ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 9 ಮನೆಗಳು ಕುಸಿದಿದ್ದು, 790 ಮನೆಗಳಿಗೆ ಹಾನಿಯಾಗಿದೆ. ಪೂರ್ಣ ಪ್ರಮಾಣದ ಮನೆ ಕುಸಿತಕ್ಕೆ ಕೂಡಲೇ 1 ಲಕ್ಷ ಹಣ ಬಿಡುಗಡೆ ಮಾಡಲಾಗುವುದು. ಬಳಿಕ ಹಂತ ಹಂತವಾಗಿ ಮನೆಗಳಿಗೆ 5 ಲಕ್ಷ ಹಣ ಬಿಡುಗಡೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ 685 ಕೋಟಿ ರೂಪಾಯಿ ಪರಿಹಾರ
ಅತಿವೃಷ್ಟಿ ಸಮಯದಲ್ಲಿ ಬಳಸಲು ರಾಜ್ಯಾದ್ಯಂತ 685 ಕೋಟಿ ರೂಪಾಯಿ ಪರಿಹಾರದ ಹಣ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ರಸ್ತೆ ಸರಿಪಡಿಸಲು 500 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯಾದ್ಯಂತ 5 ಲಕ್ಷ ಹೆಕ್ಟೇರ್ ನಷ್ಟು ಬೆಳೆಹಾನಿಯಾಗಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಅನಿರೀಕ್ಷಿತ ಬೆಳೆಹಾನಿಗೆ ಸರ್ಕಾರ ಉತ್ತಮವಾಗಿ ಸ್ಪಂದಿಸಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ
ರಾಜ್ಯದಲ್ಲಿ ಇನ್ನು ನಾಲ್ಕು ದಿನ ಮಳೆಯಾಗುವ ನಿರೀಕ್ಷೆಯಿದ್ದು, ಎಲ್ಲಾ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕೋಲಾರದಲ್ಲಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಬೆಳೆಹಾನಿ ಕುರಿತು ಪರಿಹಾರ ಮೊತ್ತ ಏರಿಸುವಂತೆ ಮನವಿಗಳು ಬಂದಿದೆ. ಎನ್ ಡಿ ಆರ್ ಎಪ್ ಪರಿಹಾರ ಮೊತ್ತ ಏರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ವಿಚಾರ ಕೇಂದ್ರ ಸರ್ಕಾರದ ಗಮನಕ್ಕು ಇದೆ ಎಂದಿದ್ದಾರೆ, ಇನ್ನು ರಾಜ್ಯದಲ್ಲಿ ವಸತಿ ಯೋಜನೆಯಡಿ 5 ಲಕ್ಷ ಮನೆಗಳನ್ನ ನಿರ್ಮಿಸಲು ಕ್ಯಾಬಿನೆಟ್ ಅನುಮತಿ ನೀಡಿದ್ದು, ಗ್ರಾಮೀಣ ಬಾಗದಲ್ಲಿ ಅಮೃತ ಯೋಜನೆಯಲ್ಲಿ 750 ಗ್ರಾಮ ಪಂಚಾಯ್ತಿಯಲ್ಲಿ ಮನೆ ಗಳನ್ನ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Kanva Dam: 18 ವರ್ಷಗಳ ಬಳಿಕ ಕಣ್ವ ಡ್ಯಾಂ ಭರ್ತಿಗೆ ಕ್ಷಣಗಣನೆ
ಕೋವಿಡ್ ನಂತರ ರಾಜ್ಯದ ಆರ್ಥಿಕ ಪರಿಸ್ತಿತಿ ಸಾಕಷ್ಟು ಸುಧಾರಿಸಿದ್ದು, ಜಿಎಸ್ಟಿ ಸಂಗ್ರಹಣೆ ಮೊತ್ತವು 1 ಲಕ್ಷ 30 ಸಾವಿರ ಕೋಟಿ ದಾಟಿದೆ, ಕೇಂದ್ರ ಸರ್ಕಾರದಿಂದಲು ಜಿಎಸ್ಟಿ ಮೊತ್ತ ಪ್ರತಿ 3 ತಿಂಗಳಿಗೊಮ್ಮೆ ಸಿಗುತ್ತಿದ್ದು, ರಾಜ್ಯದ ಆರ್ಥಿಕ ಪರಿಸ್ತಿತಿ ಸುಧಾರಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಇನ್ನುಳಿದಂತೆ ಕೆರೆ ಕಟ್ಟೆಗಳ ಬಳಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಬಡಾವಣೆಗಳಿಗ ನೀರು ನುಗ್ಗುತ್ತಿರುವ ಕಾರಣ, ಕೂಡಲೇ ರಾಜಕಾಲುವೆ ಒತ್ತುವರಿ, ಅಕ್ರಮವಾಗಿ ನಿರ್ಮಸಿರುವ ಮನೆಗಳನ್ನು ತೆರವು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳೆಹಾನಿ ವೀಕ್ಷಣೆ ಮಾಡಿದ ಸಿಎಂ, ಕಾಲು ನೋವಿನಿಂದ ಕಾಲ್ನಡಿಗೆ ಮೂಲಕ ಸಾಗಲು ಕೊಂಚ ಕಷ್ಟಪಟ್ಟರು. ಕಾಲು ನೋವಿನಿಂದ ಬಳಲಿದಂತೆ ಮೇಲ್ನೋಟಕ್ಕೆ ಕಂಡರು ಅಧಿಕಾರಿಗಳು ಹಾಗು ರೈತರೊಂದಿಗೆ ಬೆರೆತು ಸತತ 4 ಗಂಟೆಗಳ ಕಾಲ ಬೆಳೆಹಾನಿಯನ್ನ ಪರಿಶೀಲನೆ ನಡೆಸಿದರು. ಹೋದ ಸ್ಥಳ ರೈತಪರ ಹಾಗು ದಲಿತಪರ ಸಂಘಟನೆಗಳ ಮನವಿಯನ್ನು ಆಲಿಸಿ ಮನವಿ ಪತ್ರಗಳನ್ನು ಸ್ವೀಕರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ