Hangal By Election 2021: ಸಿದ್ದರಾಮಣ್ಣ ಬಂದರೆ ನಮ್ಮ ತಾಲೂಕಿಗೆ ಏನು ಮಾಡಿದ್ದೀರಿ ಎಂದು ಕೇಳಿ; ಜನರಿಗೆ ಸಿಎಂ ಬೊಮ್ಮಾಯಿ ಸಲಹೆ!

ಸಿದ್ದರಾಮಯ್ಯ ಇಲ್ಲಿ ಬಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸ್ತೀನಿ ಅಂತಾ ಕನಸು ಕಂಡಿದ್ದೀರಿ. ಅವರಿಗೆ ಗೊತ್ತಾಗಿದೆ, ನಮ್ಮ ಕನಸು ನನಸಾಗೋದಿಲ್ಲ ಅಂತಾ. ಸಿದ್ದರಾಮಯ್ಯನವರ ಅಭ್ಯರ್ಥಿ ಗೆದ್ದು ಬರೋದಿಲ್ಲ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ

 • Share this:
  ಹಾವೇರಿ: ಈ ಉಪಚುನಾವಣೆ ಅನಿವಾರ್ಯವಾಗಿ ಬಂದಿದೆ. ತಮ್ಮ ಮುಂದಿರೋ ಆಯ್ಕೆ ನಿರಂತರವಾಗಿ ನಿಮ್ಮೊಂದಿಗಿದ್ದು ನಿರಂತರ ಜನಸೇವೆ ಮಾಡಿದವರು ಆಗಿರಬೇಕು. ಯಾವಾಗ್ಯಾವಾಗ ನೀವು ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ರಿ ಆಗ ಅವರಿಂದ ಅಭಿವೃದ್ಧಿ ಆಗಿಲ್ಲ. ಅವರಿಗೆ ಮತ ಕೊಡ್ತೀರಾ ಅಥವಾ ಅಭಿವೃದ್ಧಿಗೆ ಮತ ಕೊಡ್ತೀರಾ.? ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಹಾನಗಲ್ ಕ್ಷೇತ್ರಕ್ಕೆ ಯಾವುದಾದ್ರೂ ಯೋಜನೆ ಕೊಟ್ಟಿದ್ದಾರಾ.? ನಿಮ್ಮತ್ತ ತಿರುಗಿಯೂ ನೋಡಲಿಲ್ಲ. ತಿಳುವಳ್ಳಿ ಏತ ನೀರಾವರಿ ಯೋಜನೆಗೆ ನಮ್ಮ ನಾಯಕರಾದ ಯಡಿಯೂರಪ್ಪರ ಕಾಲದಲ್ಲಿ ಜಾರಿಗೆ ತಂದ್ವಿ. ಈ ಕ್ಷೇತ್ರಕ್ಕೆ ಒಂದು ಶಾಲೆಯನ್ನೂ ಕೊಡ್ಲಿಲ್ಲ ಎಂದು ಕಾಂಗ್ರೆಸ್ ವಿರುದ್ಧಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಹರಿಹಾಯ್ದರು.

  ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ಮಾತನಾಡಿದ ಬೊಮ್ಮಾಯಿ, ದಿವಂಗತ ಸಿ.ಎಂ.ಉದಾಸಿ ಕಾಲದಲ್ಲಿ ಬಿಡುಗಡೆಯಾದ ಯೋಜನೆಗೆ ಅಡಿಗಲ್ಲು ಹಾಕಲು ಬಂದಿದ್ದರು. ನಿಮಗೆ ಚಿನ್ನದ ತಟ್ಟೆಯಲ್ಲಿ ಊಟ ಕೊಡ್ತೀವಿ ಅಂತಾ ಬರ್ತಾರೆ. ಅವರು ಮಾಡಿದ್ದು ಧರ್ಮ ಧರ್ಮ ಒಡೆಯೋ ಕೆಲಸ. ಈಡಿ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಮನುಷ್ಯ ಮನುಷ್ಯರ ನಡುವೆ ಗೋಡೆ ಕಟ್ಟಿ ವಿಶ್ವಾಸ ಹಾಳು ಮಾಡೋ ಕೆಲಸ ಮಾಡಿದರು ಎಂದು ಆರೋಪಿಸಿದರು.

  ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ನವರು ಸಾಕಷ್ಟು ಸಹಾಯ ಮಾಡಿದ್ದಾರೆ.  ನರೇಂದ್ರ ಮೋದಿಯವರು ನಯಾಪೈಸೆ ತೆಗೆದುಕೊಳ್ಳದೆ ಇಡೀ ದೇಶಕ್ಕೆ ಲಸಿಕೆ ಕೊಡಿಸಿದರು. ಕೋವಿಡ್ ಅನ್ನ ಅತ್ಯಂತ ಯಶಸ್ವಿಯಾಗಿ ಎದುರಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರಕಾರ. ಅಲ್ಲಿ‌‌ ಇಲ್ಲಿ ಮೂಲೆಯಲ್ಲಿ ನಿಂತು ಕೋವಿಡ್ ಸಮಯದಲ್ಲಿ ಬಹಳ ಸಹಾಯ ಮಾಡಿದ್ವಿ ಅಂತಿದ್ದಾನೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಎಂದರು.  ಬಡವರ ಅಕ್ಕಿಗೆ ಕೇಂದ್ರ ಮತ್ತು ರಾಜ್ಯದ ಹಣ ಕೊಡ್ತಿದೆ. ಅವರು ಸುಳ್ಳಿನ ಸರದಾರರು. ಗುಡಿ ಕಟ್ಟಿದವರನ್ನ ಬಿಟ್ಟು ಕಳಸ ಇಟ್ಟವರನ್ನ ನೆನೆಸಿಕೊಂಡಂಗಾಯ್ತು. ಅಲ್ಲಿ ಇಲ್ಲಿ ಕಿಟ್ ಕೊಟ್ಟವರಿಗೆ ಮತ ಕೊಡಬೇಡಿ. ಬೂಟಾಟಿಕೆಯ ಕಾಂಗ್ರೆಸ್ ಅನ್ನ ಮನೆಗೆ ಕಳಿಸಿ. ನೀರಾವರಿ ಅಭಿವೃದ್ಧಿ, ಕೋವಿಡ್ ಕಾಲದಲ್ಲಿ ನಿಮ್ಮನ್ನು ರಕ್ಷಣೆ ಮಾಡಿದ ಬಿಜೆಪಿಯವರಿಗೆ ಮತ ಕೊಡಿ. ಕಮಲದ‌ ಗುರ್ತಿಗೆ ಮತ ಕೊಟ್ಟು ನಿಮ್ಮ ಸೇವೆ ಮಾಡೋ ಅವಕಾಶ ಮಾಡಿಕೊಡಿ. ಸಿದ್ದರಾಮಣ್ಣ ಬಂದರೆ ನಮ್ಮ ತಾಲೂಕಿಗೆ ಏನು ಮಾಡಿದ್ದೀರಿ ಲೆಕ್ಕ ಕೊಟ್ಟು ಮಾತಾಡ್ರಿ‌ ಎಂದು ಕೇಳಿ. ಅವರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗಬೇಕು ಎಂದು ಹೇಳಿದರು.

  ಇದನ್ನು ಓದಿ: By Elections 2021: ಅದೇ ಇದ್ನಲ್ಲಾ... ಮಂಚದ ಜಾರಕಿಹೊಳಿ; ಹಾನಗಲ್ ಬಹಿರಂಗ ಸಭೆಯಲ್ಲಿ ಡಿಕೆಶಿ ಟೀಕೆ

  ಅಭ್ಯರ್ಥಿ ಶಿವರಾಜ ಸಜ್ಜನರ ಪರ ನಡೆದ ಪ್ರಚಾರ

  ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಮ ಹುರುಪು ನೋಡಿದರೆ ನಮ್ಮ ಅಭ್ಯರ್ಥಿ ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆಲ್ತಾರೆ. ಹಾನಗಲ್ ತಾಲೂಕಿನಲ್ಲಿ ಬಿಜೆಪಿಯ ಸುನಾಮಿಯೆ ಎದ್ದಿದೆ. ಸಿದ್ದರಾಮಯ್ಯ ಇಲ್ಲಿ ಬಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸ್ತೀನಿ ಅಂತಾ ಕನಸು ಕಂಡಿದ್ದೀರಿ. ಅವರಿಗೆ ಗೊತ್ತಾಗಿದೆ, ನಮ್ಮ ಕನಸು ನನಸಾಗೋದಿಲ್ಲ ಅಂತಾ. ಸಿದ್ದರಾಮಯ್ಯನವರ ಅಭ್ಯರ್ಥಿ ಗೆದ್ದು ಬರೋದಿಲ್ಲ ಎಂದು ಭವಿಷ್ಯ ನುಡಿದರು.

  ಫೋಟೋ ಇವರದು, ದುಡ್ಡು ನರೇಂದ್ರ ಮೋದಿಯವರದು. ಸುಳ್ಳಿನ‌ ಕಂತೆಯನ್ನ ಹೇಳ್ತಾರೆ, ಅದನ್ನ ನಂಬಬೇಡಿ. ಈ ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿ ಮಾಡಿದವರು ದಿವಂಗತ ಉದಾಸಿ. ಧರ್ಮಾ ಆಧುನೀಕರಣ ಎಲ್ಲವನ್ನ ಮಾಡಿದ್ದು ನಮ್ಮ ಸರಕಾರ. ಸಿದ್ದರಾಮಯ್ಯ ಐದು ವರ್ಷ ಸಿಎಂ ಇದ್ದಾಗ ಹಾನಗಲ್ ತಾಲೂಕಿನ ನೆನಪಿತ್ತಾ.? ಹಾವೇರಿ ಜಿಲ್ಲೆಗೆ ಉದಾಸಿಯವರು ಮತ್ತು ನಾವು ಸೇರಿ ಮೆಡಿಕಲ್ ಕಾಲೇಜು ತಂದಿದ್ವಿ. ಅದನ್ನೂ ಗದಗಗೆ ತೆಗೆದುಕೊಂಡು ಹೊಂಟಿದ್ರು. ಔದ್ಯೋಗಿಕ ಕ್ರಾಂತಿ ಆಗಬೇಕು, ಬರುವ ದಿನಗಳಲ್ಲಿ ನಿಮ್ಮ ಕೈಗೆ ಕೆಲಸ ಸಿಗೋ ಕೆಲಸವನ್ನ ನಮ್ಮ ಸರಕಾರ ಮಾಡುತ್ತದೆ. ನಮ್ಮ ಅಭ್ಯರ್ಥಿ ಸಜ್ಜನರ ದಿವಂಗತ ಉದಾಸಿಯವರ ಜೊತೆ ಸೇರಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಓಡಾಡಿದ್ದಾರೆ. ಹಾನಗಲ್ ತಾಲೂಕಿನಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ ಶಿವರಾಜ ಸಜ್ಜನರ ಗೆಲುವು ಅಷ್ಟೆ ಸತ್ಯ. ಎಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಕಮಲದ ಗುರ್ತಿಗೆ ಮತ ನೀಡಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ಕರೆ ನೀಡಿದರು.
  Published by:HR Ramesh
  First published: