ಬಾಗಲಕೋಟೆ(ಸೆ.5): ಭ್ರಷ್ಟಾಚಾರ ಹಾಗೂ ಕೋಟಿ ಕೋಟಿ ಹಣ ದುರ್ಬಳಕೆ ಆರೋಪದಿಂದ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ(Ranna Sugar Factory) ವಿಚಾರದಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಾಯಕರ ನಡುವಿನ ಕೆಸರೆರಚಾಟ ತಾರಕಕ್ಕೇರಿದೆ. ಸದ್ಯ ಕಾರ್ಖಾನೆಯ ವಿವಾದದ ಚೆಂಡು ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಅಂಗಳದಲ್ಲಿದ್ದು ಸದ್ಯದಲ್ಲೇ ಮಹತ್ವದ ನಿರ್ಧಾರ ಹೊರಬೀಳಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸದ್ಯ ಕಾರ್ಖಾನೆ ಪುನಾರಂಭ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಮತ್ತು ಕಾರ್ಮಿಕರು ಕಳೆದ 40 ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೋರಾಟ ಆರಂಭವಾಗಿ ತಿಂಗಳುಗಳೇ ಕಳೆದರೂ ಯಾವುದೇ ಜನಪ್ರತಿನಿಧಿಗಳು ಶುದ್ಧ ಮನಸ್ಸಿನಿಂದ ಕಾರ್ಖಾನೆ ಕಾರ್ಮಿಕರ ಮತ್ತು ರೈತರ ಹಿತ ಕಾಪಾಡಲು ಮುಂದೆ ಬರುತ್ತಿಲ್ಲ. ಬದಲಿಗೆ ರಾಜಕೀಯ ಲಾಭ ನಷ್ಟದ ಲೇಕ್ಕಾಚಾರದಲ್ಲಿ ಆರೋಪ ಪ್ರತ್ಯಾರೋಪಕ್ಕೆ ಮಾತ್ರ ಏನೂ ಕಮ್ಮಿಯಿಲ್ಲ ಎನ್ನುವಂತಾಗಿದೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕಾರ್ಖಾನೆ ಅಧ್ಯಕ್ಷರ ರಕ್ಷಣೆಗೆ ನಿಂತರಾ ಸಚಿವ ಕಾರಜೋಳ..?
ರನ್ನ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಳೆದ ಎರಡು ವರ್ಷಗಳಿಂದ ಬಂದ್ ಆಗಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ 400ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಂದಿದ್ದಾರೆ. 250 ಕೋಟಿಗೂ ಅಧಿಕ ಸಾಲದ ಹೊರೆ ಕಾರ್ಖಾನೆ ಮೇಲಿದೆ. ಕಾರ್ಖಾನೆಯನ್ನೇ ನಂಬಿದ್ದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ ರಾಮಣ್ಣ ತಳೆವಾಡ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿ ಕಠಿಣ ಕ್ರಮಕ್ಕೆ, ಹೋರಾಟಗಾರರು ಆಗ್ರಹಿಸುತ್ತಿದ್ದಾರೆ. ಇನ್ನು ಕಾರ್ಖಾನೆಯನ್ನ ಖಾಸಗಿಯವರಿಗೆ 40 ವರ್ಷ ಗುತ್ತಿಗೆ ನೀಡಲು ಮುಂದಾಗಿದ್ದ ಸರ್ಕಾರ, ಸಚಿವ ಮುರುಗೇಶ್ ನಿರಾಣಿ ಸಂಸ್ಥೆಯ ಬಿಡ್ ತಿರಸ್ಕರಿಸಿದೆ. ಹೊಸದಾಗಿ ಗುತ್ತಿಗೆ ಪ್ರಕ್ರಿಯೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಘೋಷಣೆ ಮಾಡಿದ ರಾಜ್ಯ ಸರ್ಕಾರ; ಯಾವ ತರಗತಿಗೆ ಎಷ್ಟು ಸಹಾಯಧನ ಸಿಗುತ್ತೆ? ಫುಲ್ ಡೀಟೆಲ್ಸ್
ಕಾರ್ಖಾನೆ ದಿವಾಳಿಯಾಗಲು ಗೋವಿಂದ ಕಾರಜೋಳ ಪಾಲು ಕೂಡ ಇದೆ: ಮಾಜಿ ಸಚಿವ ತಿಮ್ಮಾಪೂರ...!
ರನ್ನ ಕಾರ್ಖಾನೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಆರ್ ಬಿ ತಿಮ್ಮಾಪೂರ. ಸಚಿವ ಗೋವಿಂದ ಕಾರಜೋಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾರ್ಖಾನೆ ದಿವಾಳಿಯಾಗಲು ಕಾರಜೋಳ ಪಾಲಿದೆ. ಆದ್ರೆ ಕಾರಜೋಳ ಅವರು ನನ್ನನ್ನು ಈ ವಿಷಯದಲ್ಲಿ ಎಳೆದು ತರಬೇಡಿ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ಖಾನೆಯ ರೈತರ ಮತ್ತು ಕಾರ್ಮಿಕರ ಹಿತ ಕಾಪಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ತಿಮ್ಮಾಪೂರ ಆರೋಪಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್ ಟಿ ಪಾಟೀಲ ಸೇರಿದಂತೆ ಹಲವರು ಸುದ್ದಿಗೋಷ್ಠಿ ನಡೆಸದ್ದು, ತಿಮ್ಮಾಪೂರ ಅವರ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದೆ. ಈಗಾಗಲೇ ಸಚಿವ ಗೋವಿಂದ ಕಾರಜೋಳ ಅವರು, ಕಾರ್ಖಾನೆ ವಿಚಾರಾದಲ್ಲಿ ನನ್ನ ಎಳೆದು ತರಬೇಡಿ ಎಂದಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ಕಾರಜೋಳ ಹೆಸರು ತಳಕು ಹಾಕುತ್ತಿದ್ದಾರೆ ಎಂದಿದ್ದಾರೆ. ಇನ್ನು ಕಾರ್ಖಾನೆ ಆರಂಭಿಸುವ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳುವ ಮೂಲಕ ಕಾರಜೋಳ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಬಿಜೆಪಿ ಮುಖಂಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಖಾನೆ ಷೇರುದಾರ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾರಜೋಳ ಅವರಿಗೂ ಕಾರ್ಖಾನೆಗೂ ಸಂಬಂಧ ಇಲ್ಲ ಎನ್ನುವುದು ಬಿಜೆಪಿ ಮುಖಂಡರ ಮೂರ್ಖತನದ ಪರಮಾವಧಿ ಎಂದು ಕಾರ್ಖಾನೆ ಷೇರುದಾರ ವಿಶ್ವನಾಥ್ ಉದಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Road Accident: ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ; ತಾತ-ಮೊಮ್ಮಕ್ಕಳು ಸಾವು, ತಾಯಿ ಸ್ಥಿತಿ ಗಂಭೀರ
ಒಟ್ಟಿನಲ್ಲಿ ರನ್ನ ಸಕ್ಕರೆ ಕಾರ್ಖಾನೆ ವಿವಾದ ತಾರಕಕ್ಕೆ ಏರಿದ್ದು, ವಿವಾದದ ಚೆಂಡು ಸಿಎಂ ಬೊಮ್ಮಾಯಿ ಅಂಗಳಕ್ಕೆ ಬಂದು ನಿಂತಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಕಾರ್ಖಾನೆಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದು, ಪ್ರಸ್ತುತ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ರಾಜ್ಯಮಟ್ಟದಲ್ಲಿ ಕಾರ್ಖಾನೆಗೆ ಸಂಬಂಧಿಸಿದಂತೆ ಜಿಲ್ಲೆಯ ಇಬ್ಬರು ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು ಸಿಎಂ ಬಸವರಾಜ ಬೊಮ್ಮಾಯಿ ಈ ವಿವಾದ ಮತ್ತು ಸಮಸ್ಯೆಯನ್ನ ಹೇಗೆ ಇತ್ಯರ್ಥ ಮಾಡುತ್ತಾರೆ ಎನ್ನುವುದೇ ಕುತೂಹಲವಾಗಿದೆ.
(ವರದಿ: ಮಂಜುನಾಥ್ ತಳವಾರ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ