HOME » NEWS » District » CLASH BETWEEN SERICULTURE FARMERS AND MARKET OFFICERS FOR ONLINE PAYMENT RHHSN ATVR

ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಗಲಾಟೆ; ಆನ್​ಲೈನ್ ಪೇಮೆಂಟ್ ವಿಚಾರಕ್ಕೆ ಅಧಿಕಾರಿಗಳ ವಿರುದ್ಧ ರೈತರು ಗರಂ

ಮಾರುಕಟ್ಟೆಯಲ್ಲಿ ರೈತರು ತಮ್ಮ ಗೂಡನ್ನ ಮಾರಾಟ ಮಾಡುವಷ್ಟರಲ್ಲಿ ಹತ್ತಾರು ಜನರಿಗೆ ಲಂಚ ಕೊಡಬೇಕಿದೆ. ಹಾಗಾಗಿ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕಿದೆ, ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ರೇಷ್ಮೆ ಬೆಳೆಗಾರರು ಮನವಿ ಮಾಡಿದ್ದಾರೆ.

news18-kannada
Updated:February 9, 2021, 5:27 PM IST
ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಗಲಾಟೆ; ಆನ್​ಲೈನ್ ಪೇಮೆಂಟ್ ವಿಚಾರಕ್ಕೆ ಅಧಿಕಾರಿಗಳ ವಿರುದ್ಧ ರೈತರು ಗರಂ
ಅಧಿಕಾರಿಗಳು ಮತ್ತು ರೈತರ ನಡುವೆ ಜಟಾಪಟಿ
  • Share this:
ರಾಮನಗರ: ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರು ಮತ್ತು ಮಾರುಕಟ್ಟೆಯ ಆಡಳಿತ ಅಧಿಕಾರಿಗಳ ನಡುವೆ ಆನ್‌ಲೈನ್ ಪೇಮೆಂಟ್ ವಿಚಾರಕ್ಕೆ ಜಗಳ ನಡೆದಿದೆ. ಕೊರೋನಾ ಮಾರಿ ಎದುರಾದಾಗಿನಿಂದಲೂ ಸಹ ರೇಷ್ಮೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಸಾಕಷ್ಟು ಏರಿಳಿತಗಳು ಕಂಡುಬಂದಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ.

ಪ್ರತಿನಿತ್ಯವೂ ಮಾರುಕಟ್ಟೆಗೆ 30 ರಿಂದ 35 ಟನ್ ರೇಷ್ಮೆಗೂಡು ಬರುತ್ತಿದ್ದು ರಾಜ್ಯದ ವಿವಿಧ ಮೂಲಗಳಾದ ಬಳ್ಳಾರಿ, ದಾವಣಗೆರೆ, ರಾಯಚೂರು, ಸೇರಿದಂತೆ ಉತ್ತರಕರ್ನಾಟಕ ಭಾಗದ ಹಲವು ಜಿಲ್ಲೆಗಳಿಂದ ರೈತರು ತಾವು ಬೆಳೆದ ರೇಷ್ಮೆಗೂಡನ್ನು ರಾಮನಗರದ ಮಾರುಕಟ್ಟೆಗೆ ತರುತ್ತಾರೆ. ಆದರೆ ಆನ್‌ಲೈನ್ ಪೇಮೆಂಟ್ ವಿಚಾರಕ್ಕೆ ರೈತರು ಮತ್ತು ಮಾರುಕಟ್ಟೆಯ ಆಡಳಿತ ಮಂಡಳಿಯವರ ನಡುವೆ ಮೊದಲಿನಿಂದಲೂ ಸಹ ಹಗ್ಗಜಗ್ಗಾಟ ನಡೆಯುತ್ತಲೇ ಇದೇ. ರೈತರು ತಮ್ಮ ರೇಷ್ಮೆಗೂಡನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿದ ನಂತರ ಮೊದಲೆಲ್ಲ ಸ್ಥಳದಲ್ಲಿಯೇ ಮಾರಾಟದ ಹಣ ನೀಡಲಾಗುತ್ತಿತ್ತು. ಆದರೆ ಕಳೆದ ಕೆಲ ತಿಂಗಳುಗಳಿಂದ ರೈತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಆ ಖಾತೆಗೆ ಹಣವನ್ನು ಮಾರುಕಟ್ಟೆಯ ಅಧಿಕಾರಿಗಳು ಜಮೆ ಮಾಡುತ್ತಾರೆ. ಆದರೆ ಈ ವ್ಯವಸ್ಥೆಯೇ ಸರಿಯಿಲ್ಲದ ಕಾರಣದಿಂದಾಗಿ ರೈತರು ಮತ್ತೆ ಮಾರುಕಟ್ಟೆಯ ಅಧಿಕಾರಿಗಳ ನಡುವೆ ಜಗಳ ನಡೆಯುತ್ತಲೇ ಇದೇ. ಹಾಗಾಗಿ ನಮಗೆ ಮೊದಲಿನಂತೆ ಸ್ಥಳದಲ್ಲಿಯೇ ನಮ್ಮ ಹಣ ಕೊಡಿ ಎಂದು ರೈತರು ಒತ್ತಾಯಿಸಿದ್ದಾರೆ. ಆದರೆ ಮಾರುಕಟ್ಟೆಯ ಅಧಿಕಾರಿಗಳು ಹೇಳುವ ಪ್ರಕಾರ ಕೆಲ ಬ್ಯಾಂಕ್‌ಗಳು ಇತರೆ ಬ್ಯಾಂಕ್‌ಗಳೊಂದಿಗೆ ವಿಲೀನವಾಗಿದೆ. ಹಾಗಾಗಿ ತಾತ್ಕಾಲಿಕವಾಗಿ ಈ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ಅವ್ಯವಸ್ಥೆ ಸರಿಯಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಗಣರಾಜ್ಯೋತ್ಸವದ ದಿನ ಕೆಂಪುಕೋಟೆಯ ಹಿಂಸಾಚಾರದ ಬಗ್ಗೆ ಟ್ವೀಟ್, 6 ಪತ್ರಕರ್ತರು ಸೇರಿ ಶಶಿ ತರೂರ್ ಬಂಧನಕ್ಕೆ ಸುಪ್ರೀಂಕೋರ್ಟ್ ತಡೆ

ಇನ್ನು ರೈತರು ಹೇಳುವ ಪ್ರಕಾರ ನಾವು ನಮ್ಮ ಗೂಡನ್ನು ಮಾರಾಟ ಮಾಡಿ ಇಲ್ಲಿಂದ ಚೆಕ್ ಪಡೆದು ನಮ್ಮೂರಿಗೆ ಹೋಗ್ತೇವೆ. ಆದರೆ 1 ತಿಂಗಳು ಕಳೆದರೂ ಸಹ ನಮ್ಮ ಹಣ ನಮಗೆ ಬರಲ್ಲ. ಬ್ಯಾಂಕ್ ನಲ್ಲಿ ವಿಚಾರಣೆ ಮಾಡಿದರೆ ಹಣ ಬಂದಿಲ್ಲ ಅಂತಾರೆ. ಆದರೆ ಮಾರುಕಟ್ಟೆಯ ಅಧಿಕಾರಿಗಳ ಬಳಿ ವಿಚಾರಣೆ ಮಾಡಿದರೆ ನಾವು ಹಣ ಹಾಕಿದ್ದೇವೆ ಅಂತಾರೆ. ಆದರೆ ಕೊನೆಗೆ ನಾವು ಮಾರುಕಟ್ಟೆಯಲ್ಲಿ ಬಂದು ವಿಚಾರಣೆ ಮಾಡಿದ ನಂತರ ನಮಗೆ ಹಣ ಬರುತ್ತದೆ. ಹಾಗಾಗಿ ಆನ್ ಲೈನ್ ವ್ಯವಸ್ಥೆ ರೈತರಿಗೆ ಅನುಕೂಲವಾಗುತ್ತಿಲ್ಲ. ಬದಲಾಗಿ ರೈತರು ಮಾರುಕಟ್ಟೆಗೆ, ಊರಿಗೆ ತಿರುಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Youtube Video

ಜೊತೆಗೆ ಮಾರುಕಟ್ಟೆಯಲ್ಲಿ ರೈತರು ತಮ್ಮ ಗೂಡನ್ನ ಮಾರಾಟ ಮಾಡುವಷ್ಟರಲ್ಲಿ ಹತ್ತಾರು ಜನರಿಗೆ ಲಂಚ ಕೊಡಬೇಕಿದೆ. ಹಾಗಾಗಿ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕಿದೆ, ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ರೇಷ್ಮೆ ಬೆಳೆಗಾರರು ಮನವಿ ಮಾಡಿದ್ದಾರೆ.
  • ವರದಿ: ಎ.ಟಿ. ವೆಂಕಟೇಶ್

Published by: HR Ramesh
First published: February 9, 2021, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories