news18-kannada Updated:February 25, 2021, 6:26 PM IST
ಪೌರ ಕಾರ್ಮಿಕರ ಪ್ರತಿಭಟನೆ.
ತುಮಕೂರು (ಫೆಬ್ರವರಿ 25); ತಮ್ಮ ಸೇವೆಗಳನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮುನಿಸಿಪಲ್ ಕಾರ್ಮಿಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರ ಪಾಲಿಕೆಗಳಲ್ಲಿ ಗುತ್ತಿಗೆ, ಹೊರ ಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು, ಲೋಡರ್ ಗಳು, ವಾಟರ್ ಮ್ಯಾನ್ಗಳು, ಕಸದ ಅಟೋ ಚಾಲಕರು, ಚಾಲಕರು, ಕಂಪ್ಯೂಟರ್ ಅಪರೆಟರ್ಗಳು, ಯು.ಜಿ.ಡಿ ಕಾರ್ಮಿಕರು, ಎಲೆಕ್ಟ್ರಿಷಿಯನ್ ಕಚೇರಿ ಸಹಾಯಕರುಗಳ ಸೇವೆ ಅತ್ಯಗತ್ಯವಾದದ್ದಾಗಿದೆ. ಚಿಕ್ಕನ್ ಗುನ್ಯಾ, ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಸಹ ನಾಗರಿಕರಿಗೆ ಮೂಲಭೂತವಾಗಿ ಅಗತ್ಯವಾದ ಈ ಸೇವೆಗಳನ್ನು ನೀಡಲು ಮೇಲಿನ ಎಲ್ಲಾ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ.
ಲಾಕ್ ಡೌನ್, ಸಿಲ್ಡೌನ್ಗಳ ನಡುವೆಯೂ ಕೆಲಸ ನಿಂತಿಲ್ಲ, ಸುಮಾರು 23ಕ್ಕೂ ಹೆಚ್ಚು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರೀಕ ಸಮಾಜಕ್ಕೆ ಈ ಸೇವೆಗಳು ಅಗತ್ಯವೆಂಬುದು ಸಾಬೀತಾಗಿದೆ. ಹತ್ತಾರು ವರುಷಗಳಿಂದ ಈ ಸೇವೆಯಲ್ಲಿರುವ ಕಾರ್ಮಿಕರಿಗೆ ಸೇವಾ ಭದ್ರತೆ, ಸಾಮಾಜಿಕ ಭದ್ರತೆ ಇಲ್ಲದೆ ಗುತ್ತಿಗೆ, ಹೊರ ಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು, ಲೋಡರ್ಗಳು, ಹೆಲ್ಪರ್ಗಳು, ವಾಟರ್ ಮ್ಯಾನ್ಗಳು, ಕಸದ ಅಟೋ ಚಾಲಕರು, ಕಂಪ್ಯೂಟರ್ ಅಪರೆಟರ್ಗಳು, ಯು.ಜಿ.ಡಿ ಕಾರ್ಮಿಕರು, ಕಚೇರಿ ಸಹಾಯಕರಾಗಿ ದುಡಿಯುತ್ತಿದ್ದಾರೆ.
ಈ ಕಾರ್ಮಿಕ ಸೇವೆಗಳನ್ನು ಖಾಯಂಗೊಳಿಸುವುದು ಅಲ್ಲದೆ ಇತರೆ ಹಕ್ಕೊತ್ತಾಯಗಳನ್ನು ಪರಿಗಣಿಸಬೇಕು. ಈ ಎಲ್ಲರ ಖಾಯಂಮಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ 2021-22 ರ ಸಾಲಿನ ಬಜೆಟ್ನಲ್ಲಿ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಮುನಿಸಿಪಾಲ್ ಕಾರ್ಮಿಕರ ಸಂಘ, ಪೌರ ಕಾರ್ಮಿಕರ ಸಂಘ, ಪಾಲಿಕೆಯ ಕಸದ ಅಟೋಚಾಲಕರು ಮತ್ತು ಸಹಾಯಕರ ಸಂಘ, ಮಹಾ ನಗರ ಪಾಲಿಕೆ ನೀರು ಸರಬರಾಜು ನೌಕರರ ಸಂಘದಿಂದ ಒತ್ತಾಯಿಸಲಾಯಿತು.
ಇದನ್ನೂ ಓದಿ : ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ; ಇಂಗ್ಲೆಂಡ್ ನ್ಯಾಯಾಲಯ ತೀರ್ಪು
ಮೇಲಿನ ಎಲ್ಲ ಸೇವೆಗಳನ್ನು ಖಾಯಂಗೊಳಿಸುವವರೆಗೂ ಎಲ್ಲಾ ಕಾರ್ಮಿಕರಿಗೆ ನೇರ ಪಾವತಿಯಡಿಯಲ್ಲಿ ಸಂಬಳ ನೀಡಬೇಕು. ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಎಲ್ಲಾ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಪೌರ ಕಾರ್ಮಿಕರು, ಲೋಡರ್ ಹೆಲ್ಪರ್ಸ್ ಮತ್ತು ಕಸ ಸಾಗಿಸುವ ವಾಹನ ಚಾಲಕರು ಮತ್ತು ಸಹಾಯಕರನ್ನು ಯು.ಜಿ.ಡಿ ಕಾರ್ಮಿಕರನ್ನು ಸಫಾಯಿ ಕರ್ಮಚಾರಿಗಳೆಂದು ಪರಿಗಣಿಸ ಬೇಕು, ನಗರದ ಜನ ಸಂಖ್ಯೆಯ ಆಧಾರದಲ್ಲಿ ಪೌರ ಕಾರ್ಮಿಕರ ಸಂಖ್ಯೆಯನ್ನು ನಿಗದಿ ಪಡಿಸಿ ಲೋಡರ್, ಹೆಲ್ಪರ್ಸ್ ಮತ್ತು ಚಾಲಕರ ಸಂಖ್ಯೆ ನಿಗದಿ ಪಡಿಸ ಬೇಕು.
ಗುತ್ತಿಗೆ ಪದ್ಧತಿಯಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಶೇ. 25 ರಷ್ಟು ಆರ್ಥಿಕ ಹೊರೆಯಾಗುತ್ತಿದ್ದು, ಅದು ಮೂರು ತಿಂಗಳ ಸಂಬಳಕ್ಕೆ ಸರಿಹೋಗುತ್ತಿದೆ. ಆದಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ಕೈ ಬಿಡಬೇಕು. ಎಲ್ಲಾ ಕಾರ್ಮಿಕರಿಗೆ ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಟ್ರೀಯ ಹಬ್ಬಗಳ ರಜೆ ಹಬ್ಬಗಳ ರಜೆ, ಗಳಿಕೆ ರಜೆ, ಅನಾರೋಗ್ಯ ರಜೆಗಳ ಸಂಬಂದ ಸ್ಪಷ್ಟವಾದ ಆದೇಶ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Published by:
MAshok Kumar
First published:
February 25, 2021, 6:26 PM IST