HOME » NEWS » District » CHITRAPUR PEOLPE BUILTS BARRIER FOR OCEAN TO RESCUE THEIR HOUSES NEAR ARABIAN SEA HK

ಕಡಲ್ಕೊರೆತದಿಂದ ಸಮುದ್ರ ಪಾಲಾಗುವ ಭೀತಿ ; ಊರನ್ನೇ ನುಂಗಲು ಹೊರಟ ಕಡಲಿಗೆ ತಡೆಗೋಡೆ ಕಟ್ಟಿದ ಚಿತ್ರಾಪುರ ಜನ

ಪಣಂಬೂರು ಮೊಗವೀರ ಮಹಾಸಭಾದ ನೇತೃತ್ವದಲ್ಲಿ ಪ್ರತಿದಿನ 200 ಮಂದಿ ಒಂದು ತಿಂಗಳ ಕಾಲ ಶ್ರಮ ಪಟ್ಟು ಕೆಲಸ ಮಾಡಿದ್ದಾರೆ.

news18-kannada
Updated:June 19, 2020, 5:24 PM IST
ಕಡಲ್ಕೊರೆತದಿಂದ ಸಮುದ್ರ ಪಾಲಾಗುವ ಭೀತಿ ; ಊರನ್ನೇ ನುಂಗಲು ಹೊರಟ ಕಡಲಿಗೆ ತಡೆಗೋಡೆ ಕಟ್ಟಿದ ಚಿತ್ರಾಪುರ ಜನ
ತಾತ್ಕಾಲಿಕ ತಡೆಗೋಡೆ
  • Share this:
ಮಂಗಳೂರು(ಜೂ. 19): ಕಳೆದ ವರ್ಷ ಆರಂಭವಾಗಿದ್ದ ಕಡಲ್ಕೊರೆತವು ಈ ಬಾರಿ ತಮ್ಮ ಮನೆ ಕುಟುಂಬ ಸಮುದ್ರ ಪಾಲಾಗುವ ಭೀತಿ ಅವರಲ್ಲಿತ್ತು. ಜನಪ್ರತಿನಿಧಿಗಳನ್ನು ಹಲವು ಬಾರಿ ವಿನಂತಿಸಿದರೂ ಪರಿಹಾರ ಮಾತ್ರ ಮರೀಚಿಕೆಯಾಗಿತ್ತು. ಆದರೆ, ಈಗ ಆ ಊರಿನ ಜನರೇ ಸಮುದ್ರಕ್ಕೆ ತಡೆಗೋಡೆ ಕಟ್ಟಿದ್ದಾರೆ. ಮಕ್ಕಳು, ಹಿರಿಯರು, ಮಹಿಳೆಯರನ್ನೆದೇ ಊರಿನ ಉಳಿವಿಗಾಗಿ ಹೋರಾಡಿದ್ದಾರೆ.

ಕರಾವಳಿ ಇತಿಹಾಸದಲ್ಲಿ ಎಂದೂ ಆಗದ ಮಹಾಸಾಹಸ ಇದಾಗಿದೆ. ಊರನ್ನೇ ನುಂಗಿ ಬಿಡುತ್ತಿದ್ದ ಕಡಲಿಗೆ ಮೊಗವೀರರು ಸವಾಲು  ಹಾಕಿದ್ದಾರೆ. ಸಮುದ್ರ ಕೊರೆತವನ್ನು ತಪ್ಪಿಸಲು ಇಡೀ ಊರಿನ ಜನ ಒಂದಾಗಿದ್ದಾರೆ. ಮಂಗಳೂರು ನಗರ ಹೊರವಲಯದ ಚಿತ್ರಾಪುರ ಗ್ರಾಮದ ಜನ ತಮ್ಮ ಗ್ರಾಮವನ್ನು ಉಳಿಸುವ ಸಲುವಾಗಿ ಎಲ್ಲಾ ಕೆಲಸವನ್ನು ಬದಿಗೊತ್ತಿ, ಅಹರ್ನಿಶಿ ದುಡಿದು ಸಮುದ್ರಕ್ಕೆ ಗೋಡೆ ಹಾಕಿದ್ದಾರೆ. ಪಣಂಬೂರು ಮೊಗವೀರ ಮಹಾಸಭಾದ ನೇತೃತ್ವದಲ್ಲಿ ಪ್ರತಿದಿನ 200 ಮಂದಿ ಒಂದು ತಿಂಗಳ ಕಾಲ ಶ್ರಮ ಪಟ್ಟು ಕೆಲಸ ಮಾಡಿದ್ದಾರೆ.

ಚಿತ್ರಾಪುರ ಪ್ರದೇಶದಲ್ಲಿ ಕಡಲ್ಕೊರೆತದಿಂದಾಗಿ ಕಳೆದ ವರ್ಷ ತೆಂಗಿನ ಮರಗಳು ಧರಾಶಾಹಿ ಆಗಿದ್ದವು. ತೆಂಗಿನ ಮರದ ಜೊತೆಗೆ ಮೊಗವೀರ ಸಭಾ ಆವರಣದ ಗೋಡೆ, ಮೀನು ಒಣಗಿಸುವ ಚಾಪೆಗಳೂ ನೀರುಪಾಲಾಗಿದ್ದವು. ಈ ಬಾರಿಯೂ ಸುಮ್ಮನೆ ಕೂತರೆ ಕಷ್ಟಇದೆ ಎಂದು ಮನಗಂಡ ಚಿತ್ರಾಪುರದ ಜನತೆ ಸ್ವಂತ ಪರಿಶ್ರಮದಿಂದ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

200 ಮಂದಿ ಶಿಫ್ಟ್ ಪ್ರಕಾರ ಅಂದರೆ, ಬೆಳಗ್ಗೆ ಹಾಗೂ ಸಂಜೆ ತಲಾ ನೂರು ಮಂದಿಯಂತೆ ಕೆಲಸ ಮಾಡಿದ್ದಾರೆ. ಜೆಸಿಬಿ ಸಹಾಯದಿಂದ ಎಂಟು ಅಡಿ ಗುಂಡಿ ತೆಗೆಸಿ ಅದರಲ್ಲಿ ಮರಳು ತುಂಬಿದ ಜಂಬೋ ಗೋಣಿ ಹಾಕಿದ್ದಾರೆ. 11 ಅಡಿ ಎತ್ತರದಲ್ಲಿ ಸುಮಾರು 600 ಮೀಟರ್ ಉದ್ದಕ್ಕೆ ತಡೆಗೋಡೆ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ : ಉತ್ತರ ಕರ್ನಾಟಕ ಜನರಿಗೆ ಸಂತಸದ ಸುದ್ದಿ ; ಸುವರ್ಣ ಸೌಧದಲ್ಲಿ ಮೊದಲ ಸರ್ಕಾರಿ ಕಚೇರಿ ಕಾರ್ಯಾರಂಭ

ಈ ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಆದರೂ ಧೃತಿಗೆಡದ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಸ್ಥಳೀಯ ಶಾಸಕರು ಖರ್ಚಾದ ಹಣವನ್ನು ನೀಡುವ ಭರವಸೆ ನೀಡಿದ್ದಾರೆ. ಗ್ರಾಮಸ್ಥರು ಈ ಬಾರಿ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ 400 ಮನೆಗಳು ಸಮುದ್ರ ಪಾಲಾಗುವ ಆತಂಕ ಜನರಲ್ಲಿದೆ. ಈಗಾಗಲೇ 70 ರಿಂದ 75 ಅಡಿ ತೀರ ಪ್ರದೇಶ ಕೊಚ್ಚಿ ಹೋಗಿದ್ದು ಜನರು ಆತಂಕಗೊಳ್ಳುವಂತಾಗಿದೆ.
ಒಟ್ಟಿನಲ್ಲಿ ಜನಪ್ರತಿನಿಧಿಗಳನ್ನು ನಂಬದೆ ಗ್ರಾಮಸ್ಥರು ತಮ್ಮ ಊರನ್ನು ಉಳಿಸಲು ಹೋರಾಟ ಮಾಡಿದ್ದಾರೆ. ಸಮುದ್ರ ಶಕ್ತಿಯ ಎದುರು ಮಾನವನ ಶಕ್ತಿ ನಗಣ್ಯವಾದರೂ ಬದುಕು ಉಳಿಸಲು ಅಂತಿಮ ಹೋರಾಯವನ್ನು ಜನ ಮಾಡಿದ್ದಾರೆ.
First published: June 19, 2020, 5:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories