ಚಿತ್ರದುರ್ಗ: ಕೊರೋನಾ ಸೋಂಕಿನಿಂದ ಪೋಲೀಸ್ ಸಿಬ್ಬಂದಿಗಳ ರಕ್ಷಣೆಗಾಗಿ ಚಿತ್ರದುರ್ಗ ಎಸ್ಪಿ ರಾಧಿಕಾ ಬಿಸಿ ನೀರಿನ ಹಬೆ ಕೇಂದ್ರ ಸ್ಥಾಪಿಸಿ ಹೊಸ ಪ್ರಯೋಗವನ್ನ ಮಾಡಿದ್ದಾರೆ. ಕಳೆದ ಒಂದು ವರ್ಷ ಎರಡು ತಿಂಗಳಿಂದ ಇಡೀ ದೇಶ ಸೂತಕದ ಮನೆಯಾಗಿದೆ. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ನರಕ ದರ್ಶನ ಪಡೆದಿದ್ದು, ಬರೀ ಸಾವು ನೋವುಗಳಲ್ಲಿಯೇ ಕಾಲ
ಕಳೆಯುವಂತಾಗಿದೆ. ಯಾಕಂದ್ರೆ ಇಡೀ ದೇಶದ ಜನರನ್ನ ತಲ್ಲಣಗೊಳಿಸಿರೋ ಮಹಾಮಾರಿ ಕೊರೋನಾ ಸೋಂಕು ಯಾರನ್ನೂ ಬಿಟ್ಟಿಲ್ಲ.
ಎಷ್ಟೆ ಸಂಪತ್ತು ಹೊಂದಿದ್ದ ಸಿರಿವಂತರೂ ಇದಕ್ಕೆ ತಲೆಬಾಗಿ ಶರಣಾಗಿ ಪ್ರಾಣ ತೆತ್ತು ಬಲಿಯಾಗಿದ್ದಾರೆ. ಇದರಿಂದ ಅದೆಷ್ಟೋ ಕುಟುಂಬಗಳು ಅಸ್ತಿತ್ವವನ್ನೂ ಕಳೆದುಕೊಂಡು ಬೀದಿಗೆ ಬಂದಿವೆ. ಇವೆಲ್ಲವನ್ನೂ ಕಣ್ಣಾರೆ ಕಂಡು, ಅನುಭವಿಸಿರೋ ಪೋಲೀಸರು ಮಾತ್ರ ಧೈರ್ಯ ಕೆಡದೆ ಕರ್ತವ್ಯ ಪಾಲನೆಯಲ್ಲಿ ತೊಡಗಿದ್ದಾರೆ. ಆದರೇ ದೇಶದಲ್ಲಿ ಬಿರುಗಾಳಿಯಂತೆ ಎದ್ದಿರೋ ಕೊರೋನಾ ಎರಡನೇ ಅಲೆಯ ಅಬ್ಬರಕ್ಕೆ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಆದರಿಂದಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಜೀವ ರಕ್ಷಣೆಗೆ ಹರ ಸಾಹಸವನ್ನೇ ಪಡುತ್ತಿದೆ. ಅಲ್ಲದೇ ಕರ್ನಾಟಕದಲ್ಲಿ ಕೊರೋನಾ ಸೋಂಕಿತ ಎರಡನೇ ಅಲೆಯ ಚೈನ್ ಲಿಂಕ್ ತುಂಡರಿಸಲು ಅಘೋಷಿತ ಲಾಕ್ ಡೌನ್ ಮಾಡಿದೆ. ಜನರು ಬೇಕಾ ಬಿಟ್ಟಿ ಓಡಾಡದಂತೆ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶ ಮಾಡಿದೆ.
ಇದನ್ನ ನಿಭಾಯಿಸಲು ಪೋಲೀಸರ ಪಾತ್ರ ದೊಡ್ಡದು. ಕೋರೋನಾ ಸೋಂಕಿನ ಸಂಕಷ್ಟದ ಸಮಯದಲ್ಲಿ ಪ್ರಾಣದ ಹಂಗು ತೊರೆದು ಪೋಲೀಸರು ನಿತ್ಯ ಕರ್ತವ್ಯ ನಿರ್ವಹಸುತ್ತಿದ್ದಾರೆ. ಹೀಗೆ ಕರ್ತವ್ಯ ನಿರ್ವಹಿಸೋ ಪ್ರತಿಯೊಬ್ಬ ಪೋಲೀಸರ ಆರೋಗ್ಯ ರಕ್ಷಣೆಗೆ ಹಿತ ಕಾಯ್ದಿರುವ ಚಿತ್ರದುರ್ಗ ಎಸ್ಪಿ ರಾಧಿಕಾ, ಪೋಲೀಸರಿಗಾಗಿ ನಗರದ ಡಿಎಆರ್ ಕಚೇರಿ ಆವರಣದಲ್ಲಿ ಬಿಸಿ ನೀರಿನ ಹಬೆ ಕೇಂದ್ರ ಸ್ಥಾಪಿಸಿ, ಪ್ರಾಯೋಗಿಕ ಪರೀಕ್ಷೆ ಮಾಡಿದ್ದಾರೆ. ಇದನ್ನ ತಯಾರಿಸಲು ಅತೀ ಕಡಿಮೆ ಕರ್ಚು ಮಾಡಿ, ಕೇವಲ ಎರಡು ಕುಕ್ಕರ್, ಪೈಪ್ ಬಳಸಿ ಆರು ಹಬೆ ಪೈಪುಗಳನ್ನ ಅಳವಡಿಸಿದ್ದು, ಸಾಮಾಜಿಕ ಆಂತರ ಕಾಯ್ದುಕೊಂಡು ಏಕ ಕಾಲದಲ್ಲಿ ಆರು ಸಿಬ್ಬಂದಿ ಹಬೆ ಪಡೆಯಲು ಅವಕಾಶವಿದೆ.
ಕಡಿಮೆ ಕರ್ಚಿನಲ್ಲಿ ನಿರ್ಮಿಸಿರುವ ಈ ಹಬೆ ಕೇಂದ್ರವನ್ನ ಜಿಲ್ಲೆಯ ಎಲ್ಲಾ ಪೋಲೀಸ್ ಠಾಣೆಗಳಲ್ಲಿ ನಿರ್ಮಿಸಲು ಎಸ್ಪಿ ರಾಧಿಕಾ ತೀರ್ಮಾನಿಸಿದ್ದು, ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳುವ ಮಾರ್ಗಗಳಲ್ಲಿ ಒಂದಾದ ಬಿಸಿ ನೀರಿನ ಹಬೆ ಕೇಂದ್ರದ ಉಪಯೋಗವನ್ನ ಕೈಗೆಟುಕುವ ಹಾಗೆ ಮಾಡಿದ್ದಾರೆ. ಎಸ್ಪಿ ರಾಧಿಕಾರ ಈ ಕಾರ್ಯ ಪೋಲೀಸ್ ಸಿಬ್ಬಂಧಿ ಅಧಿಕಾರಿಗಳಿಗೆ ಅತ್ಯಂತ ಅನುಕೂಲವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ