ಶೂಟೌಟ್ ಪ್ರಕರಣ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಹುಡುಕಿ ಹಿಡಿದ ಚಿತ್ರದುರ್ಗ ಪೊಲೀಸರು

Chitradurga Shootout Incident- ಬಟ್ಟೆ ವ್ಯಾಪಾರಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈಯಲಾದ ಪ್ರಕರಣವನ್ನು ಚಿತ್ರದುರ್ಗದ ಪೊಲೀರು ಭೇದಿಸಿದ್ದಾರೆ. ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಹಂತಕರನ್ನ ಅಲ್ಲಿಗೇ ಹೋಗಿ ಹಿಡಿದು ಜೈಲಿಗಟ್ಟಿದ್ದಾರೆ.

ಶೂಟೌಟ್ ಆರೋಪಿಯನ್ನ ಹಿಡಿದ ಚಿತ್ರದುರ್ಗ ಪೊಲೀಸ್

ಶೂಟೌಟ್ ಆರೋಪಿಯನ್ನ ಹಿಡಿದ ಚಿತ್ರದುರ್ಗ ಪೊಲೀಸ್

  • Share this:
ಚಿತ್ರದುರ್ಗ: ತಂದೆ ಕೊಂದಿದ್ದ ಶತ್ರುವಿನ ಸಂಹಾರಕ್ಕೆ ಮೂರು ವರ್ಷಗಳ ಕಾಲ ಕಾದಿದ್ದ ಮಗ ಮುವತ್ತೇ ಸೆಕಂಡ್​ನಲ್ಲಿ ಗುಂಡು ಹಾರಿಸಿ ಶತೃವಿನ  ಪ್ರಾಣ ಪಕ್ಷಿ ಹಾರಿಸಿದ್ದ. ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದ ಈ ಶೂಟೌಟ್ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿತ್ತು. ಅಲ್ಲದೇ ರೌಡೀಸಂ, ಪುಂಡ ಪೋಕರಿಗಳ ಅಟ್ಟಹಾಸದ ಸದ್ದಿಲ್ಲದೆ ಶಾಂತವಾಗಿದ್ದ ಜಿಲ್ಲೆಯಲ್ಲಿ ಬಟ್ಟೆ ವ್ಯಾಪಾರಿ ಹತ್ಯೆ ಮಾಡಿದ್ದ ಗುಂಡಿನ ಶಬ್ದ ಪೋಲೀಸರ ನಿದ್ದೆಗೆಡಿಸಿತ್ತು. ಹಗಲು ರಾತ್ರಿ ಎನ್ನದೇ ನಿದ್ದೆಗೆಟ್ಟು ಹುಡುಕಾಟ ನಡೆಸಿದ ಪೋಲೀಸರು ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಶೂಟೌಟ್ ಆರೋಪಿಗಳನ್ನ 13 ದಿನಗಳಲ್ಲಿ ಹೆಡೆಮುರಿಕಟ್ಟಿ ಬಂಧಿಸಿ ಜೈಲಿಗಟ್ಟಿದ್ದಾರೆ.

ಆಗಸ್ಟ್ 17 ರಾತ್ರಿ 9 ಗಂಟೆ ಸಮಯಕ್ಕೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ಆ ಶೂಟೌಟ್ ನಡೆದದ್ದು. ಪಟ್ಟಣದ ಹೊಸದುರ್ಗ ರಸ್ತೆಯ ಪ್ರಿಯದರ್ಶಿನಿ ಬಟ್ಟೆ ಅಂಗಡಿ ಮಾಲೀಕ ಮೂಲ್ ಸಿಂಗ್ ಗುಂಡಿನ ದಾಳಿಗೆ ಬಲಿಯಾಗಿ ನೆತ್ತರು ಸುರಿಸಿಕೊಂಡು ಬೀದಿ ಹೆಣವಾಗಿ ಬಿದ್ದಿದ್ದ. ಅದೆಲ್ಲಿಂದಲೋ ಬಂದಿದ್ದ ದುಷ್ಕರ್ಮಿಗಳು ಮೂಲ್ ಸಿಂಗ್ ಅಂಗಡಿ ಹೊರಗೆ ಪೂಜೆ ಮಾಡುತ್ತಿದ್ದಾಗ ಹಿಂದಿನಿಂದ ಬಂದು ಬಂದೂಕಿನ ಗುಂಡು ಹಾರಿಸಿ ಕತ್ತು ಸೀಳಿ ಕೇವಲ ಮುವತ್ತೇ ಸೆಕೆಂಡ್​ನಲ್ಲಿ ಪರಾರಿ ಆಗಿದ್ರು. ಆದರೆ ಆ ಘಟನೆ ನಡೆದ ದಿನ ಕಿಲ್ಲರ್​ಗಳ ಚಲನವಲನ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು.  ಅಷ್ಟೆ ಅಲ್ಲದೇ ಕೊಲೆ ಮಾಡಿದವರು ಯಾರು ಅನ್ನೋದರ ಬಗ್ಗೆ ಕೊಂಚ ಸುಳಿವೂ ಕೂಡಾ ಸಿಕ್ಕಿಬಿಟ್ಟಿತ್ತು.  ಅದಾಗಲೇ ಮೂಲ್ ಸಿಂಗ್ ಹತ್ಯೆ ನಡೆದಿರೋದು ಹಳೆ ಕೊಲೆ ವೈಷಮ್ಯಕ್ಕೆ ಅನ್ನೋ ಶಂಕೆ ಕೂಡಾ ತಿಳಿದಿತ್ತು.

ಘಟನೆಯ ಹಿನ್ನಲೆ ಹಾಗೂ ಕೊಲೆಯಾದ ಮೂಲ್ ಸಿಂಗ್, ಮತ್ತು ಸಹೋದರರ ಹಿನ್ನೆಲೆ ತಿಳಿದುಕೊಂಡ ಚಿತ್ರದುರ್ಗ ಎಸ್​ಪಿ ರಾಧಿಕಾ, ಪ್ರಕರಣ ಭೇದಿಸೋಕೆ ಒಂದೊಳ್ಳೆ ಟೀಂ ರೆಡಿ ಮಾಡಿದ್ದರು. ಅದರಂತೆ ಹೊಳಲ್ಕೆರೆ ಪೋಲೀಸ್ ಠಾಣೆಯ ಸಿಪಿಐ ರವೀಶ್, ಪಿಎಸ್ಐ ವಿಶ್ವನಾಥ್ ಸೇರಿ, ಅಧಿಕಾರಿ ಸಿಬ್ಬಂದಿ ಒಳಗೊಂಡು ಬರೋಬ್ಬರಿ ಇಪ್ಪತ್ತೈದು ಜನರ ಟೀಂ ತನಿಖೆ ಪ್ರಾರಂಭ ಮಾಡಿದ್ದರು. ಅಂದಿನಿಂದ ಪ್ರಕರಣದ ಆರೋಪಿಗಳ ಬೆನ್ನು ಹತ್ತಿದ ಪೋಲೀಸರು ಹಗಲು ರಾತ್ರಿ ಎನ್ನದೇ, ಊಟ ತಿಂಡಿ ಎನ್ನದೇ ಚಿತ್ರದುರ್ಗ ದಿಂದ ರಾಜಸ್ಥಾನದವರೆಗೆ ಕಾರ್ಯಾಚರಣೆಯ ಪ್ರಯಾಣ ಬೆಳೆಸಿ ಶೂಟೌಟ್ ಮಾಡಿ ಪರಾರಿಯಾಗಿದ್ದ ಸಂಜೀತ್ ಸಿಂಗ್, ಪೃಥ್ವಿರಾಜ್ ಸಿಂಗ್ ಎಂಬ ಇಬ್ಬರು ಆರೋಪಿಗಳನ್ನ ಹೆಡೆಮುರಿಕಟ್ಟಿ ಬಂಧಿಸಿ ತಂದು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: Karnataka Weather Today: ಸೆ.5ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

ಇನ್ನು, ಆರೋಪಿಗಳನ್ನ ಬಂದಿಸುತ್ತಿದ್ದಂತೆ ಶೂಟೌಟ್ ನಡೆದದ್ದು ತಂದೆ ಕೊಂದಿದ್ದ ಕೊಲೆಗಾರನನ್ನ ಕೊಲ್ಲೋಕೆ ಮಗನ ಸೇಡು ಕಾರಣ ಅನ್ನೋ ಕಟು ಸತ್ಯ ಬಯಲಾಗಿದೆ. ಕಳೆದ 2018 ರಲ್ಲಿ ಇದೇ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ ಚಿನ್ನದ ಅಂಗಡಿ ವ್ಯಾಪಾರಿ ಕಲ್ಯಾಣ್ ಸಿಂಗ್ ಅನ್ನ ಈ ಕೊಲೆಯಾಗಿರೋ ಮೂಲ್ ಸಿಂಗ್ ಕ್ಷುಲ್ಲಕ ಕಾರಣಕ್ಕೆ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ‌. ಮೂಲತಃ ರಾಜಸ್ಥಾನದ ಕಲ್ಯಾಣ್ ಸಿಂಗ್, ಕಳೆದ ಇಪ್ಪತ್ತು ವರ್ಷಗಳ ಹಿಂದೆ ರಾಮಗಿರಿ ಗ್ರಾಮಕ್ಕೆ ಬಂದು ತನ್ನ ವ್ಯಾಪಾರ ಶುರು ಮಾಡಿದ್ದ. ದುಡಿಮೆ ಚನ್ನಾಗಿ ಆಗುತ್ತಿದ್ದ ಕಾರಣ ರಾಜಸ್ಥಾನದ ಮೂಲದ ಪರಿಚಯಸ್ಥ ಮೂಲ್ ಸಿಂಗ್ ಹಾಗೂ ಸಹೋದರನ್ನ ರಾಮಗಿರಿಗೆ ಕರೆತಂದು ವ್ಯಾಪರಕ್ಕೆ ಸಾಥ್ ನೀಡಿದ್ದರು. ಅಲ್ಲದೇ ತನ್ನದೇ ಕಟ್ಟಡದಲ್ಲಿ ಅಂಗಡಿ ನಡೆಸೋಕೆ ಬಾಡಿಗೆ ನೀಡಿದ್ದರು.

ಆದರೆ ಇವರ ಈ ಬಾಂಧವ್ಯ ಬಹಳ ದಿನಗಳವರೆಗೆ ಇರಲಿಲ್ಲ. ಮೂಲ್ ಸಿಂಗ್ ಸಹೋದರ ಶೇರ್ ಸಿಂಗ್ ಹಾಗೂ ಮಳಿಗೆ ಮಾಲಿಕ ಕಲ್ಯಾಣ್ ಸಿಂಗ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಕೊನೆಗೆ ಕಲ್ಯಾಣ್ ಸಿಂಗ್​ನ ಹತ್ಯೆಯ ಹಂತಕ್ಕೆ ಪ್ಲಾನ್ ನಡೆದಿತ್ತು. ಅದರಂತೆ ಮೂಲ್ ಸಿಂಗ್ ಹಾಗೂ ಶೇರ್ ಸಿಂಗ್, ಸಹೋದರರು ಸೇರಿ ನಡುಮನೆಯಲ್ಲಿ ಕಲ್ಯಾಣ್ ಸಿಂಗ್ ನನ್ನ ಬೀಕರವಾಗಿ ಕೊಚ್ಚಿ ಕೊಂದಿದ್ದರು. ಬಳಿಕ ಜೈಲು ಸೇರಿ ಬೇಲ್ ಮೆಲೆ ಹೊರಗೆ ಬಂದು ಮತ್ತೆ ಬಟ್ಟೆ ಅಂಗಡಿ ವ್ಯಾಪಾರ ಮುಂದುವರೆಸಿದ್ದರು. ಆದರೆ, ಕಲ್ಯಾಣ್ ಸಿಂಗ್ ಪುತ್ರ ತನ್ನ ತಂದೆಯ ಕೊಲೆ ಸೇಡು ತೀರಿಸಿಕೊಳ್ಳೋಕೆ ಹಾತೊರೆದಿದ್ದ. ಸುದೀರ್ಘ ಮೂರು ವರ್ಷಗಳ ಕಾಲ ಕಾದಿದ್ದ. ಇದೀಗ ಅವನು ಅಂದುಕೊಂಡಂತೆ ಮೂಲ್ ಸಿಂಗ್ ನನ್ನ ಗುಂಡು ಹಾರಿಸಿ ಕೊಂದು ತಂದೆಯ ಸಾವಿನ ಸೇಡು ತೀರಿಸಿಕೊಂಡಿದ್ದಾನೆ.

ಇದನ್ನೂ ಓದಿ: Love-murder & suicide: 8 ವರ್ಷ ಪ್ರೀತಿಸಿ ಮದುವೆಗೆ ಒಲ್ಲೆ ಎಂದವಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಲವರ್​​​

ಒಟ್ಟಾರೆ ತನ್ನ ವ್ಯಾಪಾರ ದುಡಿಮೆ ಉಳಿಸಿಕೊಳ್ಳೋಕೆ ಕಲ್ಯಾಣ್ ಸಿಂಗನ ಕೊಲೆ ಮಾಡಿದ್ದ ಮೂಲ್ ಸಿಂಗ್ ಮೇಲೆ ಕಲ್ಯಾಣ್ ಸಿಂಗ್ ಮಗನಿಗೆ ಇದ್ದ ಮೂರು ವರ್ಷದ ಸೇಡು ಮುವತ್ತೆ ಸೆಕಂಡಲ್ಲಿ ಬಂದೂಕಿನ ಗುಂಡಿನ ಮೂಲಕ ತೀರಿದೆ. ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು ಅನ್ನೋ ಗಾದೆ ಮಾತಿನಂತೆ ಕೊಲೆ ಮಾಡಿ ಹಾಯಾಗಿದ್ದ ಮೂಲ್ ಸಿಂಗ್ ಬಲಿಯಾಗಿದ್ದು ಸೇಡಿನ ಕೊಲೆಗೆ. ಆದರೆ, ಯಾರು ಏನೇ ಮಾಡಿದ್ರು ಕಾನೂನು ಮಾತ್ರ ಒಂದೇ. ಅಪರಾಧಿ ಯಾರೇ ಆಗಿದ್ದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ. ಕಾನೂನು ಯಾರ‌ನ್ನೂ ಸುಮ್ಮನೆ ಬಿಡೋದಿಲ್ಲ ಅನ್ನೋದಕ್ಕೆ ಜೈಲು ಸೇರಿರೋ ಅರೋಪಿಗಳೇ ಸಾಕ್ಷಿ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: