ಚಿತ್ರದುರ್ಗದಲ್ಲಿ ಬಿಗ್ ಗಾಂಜಾ ರೇಡ್; 5 ಎಕರೆ ಜಮೀನಿನಲ್ಲಿ ಗಾಂಜಾ ಬೆಳೆ ಪತ್ತೆ

ಚಿತ್ರದುರ್ಗದ ಮೊಳಕಾಲ್ಮೂರಿನ ವಡೇರಹಳ್ಳಿಯಲ್ಲಿ 4 ಎಕರೆ 20 ಕುಂಟೆ ಜಮೀನಿನಲ್ಲಿ ಗಾಂಜಾ ಬೆಳೆ ಪತ್ತೆಯಾಗಿದೆ. ಮಾಲೀಕರಿಂದ ಜಮೀನು ಪಡೆದು ಗಾಂಜಾ ಬೆಳೆ ಹಾಕಿದ ಕಿಂಗ್ ಪಿನ್ ನಾಪತ್ತೆಯಾಗಿದ್ದಾನೆನ್ನಲಾಗಿದೆ.

ಚಿತ್ರದುರ್ಗದಲ್ಲಿ ಪತ್ತೆಯಾದ ಗಾಂಜಾ ಬೆಳೆಯ ಜಮೀನಿನ ಮಾಲೀಕ ಮಂಜುನಾಥ್

ಚಿತ್ರದುರ್ಗದಲ್ಲಿ ಪತ್ತೆಯಾದ ಗಾಂಜಾ ಬೆಳೆಯ ಜಮೀನಿನ ಮಾಲೀಕ ಮಂಜುನಾಥ್

  • Share this:
ಚಿತ್ರದುರ್ಗ: ರಾಜ್ಯದ ಸ್ಯಾಂಡಲ್​ವುಡ್​ನಲ್ಲಿ ಗಾಂಜಾ  ಗೌಜಲು ದಿನೇ ದಿನೇ ಜಾಸ್ತಿ ಆಗುತ್ತಲೇ ಇದೆ. ಡ್ರಗ್ಸ್ ತನಿಖೆಯಿಂದ ಕನ್ನಡ ಚಿತ್ರರಂಗದ ಕೆಲ ನಟ-ನಟಿಯರ ನಿದ್ದೆ ಕೆಟ್ಟದೆ.  ನಟಿ ರಾಗಣಿ ಬಂಧನವಾಗಿದ್ದಾರೆ. ಈ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದಲ್ಲಿ ಗಾಂಜಾದ ಐದು ಎಕರೆ ತೋಟವೇ ಪತ್ತೆಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನ ವಡೇರಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಜಂಬೂನಾಥ್ ಸಹೋದರರಿಗೆ ಸೇರಿದ 4 ಎಕರೆ 20 ಕುಂಟೆಯಲ್ಲಿ ಜಮೀನಿನಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ  ಗಾಂಜಾ ಪತ್ತೆಯಾಗಿದೆ. ಗಾಂಜಾ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ರಾಂಪುರ ಪೊಲೀಸರು, ಗಾಂಜಾ ತೋಟ ಸೀಜ್ ಮಾಡಿದ್ದಾರೆ. ಅಷ್ಟೆ ಅಲ್ಲದೇ ನಾಲ್ಕು ಮಂದಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಗಾಂಜಾ ಬೆಳೆದ ಕಿಂಗ್ ಪಿನ್​ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ರಾಂಪುರ ಮೂಲದ ಜಂಬೂನಾಥ್ ಸಹೋದರರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಅಂತಪುರ ನಿವಾಸಿ ರುದ್ರೇಶ್ ಅವರಿಗೆ, ಸುಮನ್ ಗೌಡ ಎಂಬ ಮಧ್ಯವರ್ತಿ ಮೂಲಕ ಜಮೀನು ಗುತ್ತಿಗೆ ನೀಡಿದ್ದರು. ಐದು ಎಕರೆ ಜಮೀನಿಗೆ ಪ್ರತೀ ವರ್ಷಕ್ಕೆ ಒಂದು ಲಕ್ಷ ರೂ. ನಂತೆ ಒಪ್ಪಂದ ಮಾಡಿಕೊಂಡಿದ್ದರು. ಜಮೀನು ಗುತ್ತಿಗೆ ಪಡೆದಿದ್ದ ಕಿಂಗ್ ಪಿನ್ ರುದ್ರೇಶ್ 4 ಎಕರೆ 20 ಗುಂಟೆ ಭೂಮಿಯಲ್ಲಿ ಗಾಂಜಾ ಬೆಳೆ ಹಾಕಿದ್ದಾನೆ. ಗಾಂಜಾ ಬೆಳೆ ಹಾಕಿ ಐದು ತಿಂಗಳುಗಳ ಬಳಿಕ ಇದೀಗ ಈ ಪ್ರಕರಣ  ಬೆಳಕಿಗೆ ಬಂದಿದೆ. ಪೊಲೀಸರು ದಾಳಿ ನಡೆಸಿ ಗಾಂಜಾ ಹಾಗೂ ಆರೋಪಿಗಳಾದ ಮಂಜುನಾಥ್, ಜಂಬೂನಾಥ್, ಸುಮನ್ ಗೌಡ, ಹಾಗೂ ಮಂಜುನಾಥ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಗಾಂಜಾ ಬೆಳೆದಿದ್ದ ಕಿಂಗ್​ಪಿನ್ ರುದ್ರೇಶ್ ತಲೆ ಮರೆಸಿಕೊಂಡಿದ್ದಾನೆ. ಪ್ರಮುಖ ಆರೋಪಿ ರುದ್ರೇಶ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಎರಡು ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ “ಮಿಸ್ಸಿಂಗ್ ಬಾಯ್”; ಕೊಪ್ಪಳದಲ್ಲೊಂದು ಅಚ್ಚರಿಯ ಘಟನೆ

ಚಿತ್ರದುರ್ಗದಲ್ಲಿ ನಿನ್ನೆ ನಡೆದದ್ದು ರಾಜ್ಯದಲ್ಲೇ ಅತ್ಯಂತ ದೊಡ್ಡ ಗಾಂಜಾ ರೇಡ್ ಎನ್ನಲಾಗುತ್ತಿದೆ. ಇದೀಗ ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಕುರಿತು ಕೂಡಾ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಹಿಂದೆಂದೂ ಇಷ್ಟು ದೊಡ್ಡ ಮಟ್ಟದಲ್ಲಿ ಗಾಂಜಾ ಬೆಳೆ ನೋಡಿರದ ಜನರು ಗಾಂಜಾ ಗಿಡ ನೋಡಲು ಮುಗಿಬಿದ್ದಿದ್ದರು. ಸ್ಥಳಕ್ಕೆ ಎಎಸ್​ಪಿ ಮಹಾಲಿಂಗ ನಂದಗಾವಿ, ಮೊಳಕಾಲ್ಮೂರು ತಹಶಿಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲದೆ, ಗಾಂಜಾ ತೋಟದ ಸಂಪೂರ್ಣ ನಾಶಕ್ಕೆ ಸುತ್ತಮುತ್ತಲಿನ ಹಳ್ಳಿ ಜನರನ್ನ ಕರೆಸಿದ ಪೊಲೀಸರು, ಗಾಂಜಾ ಗಿಡಗಳನ್ನ ಕೀಳಿಸಲು ಹರಸಾಹಸ ಪಟ್ಟರು. ಇನ್ನು, ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಗಾಂಜಾ ಕಿಂಗ್​ಪಿನ್ ರುದ್ರೇಶ್​ನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Ragini Dwivedi - ರಾಗಿಣಿ ವಿರುದ್ಧ ಕಠಿಣ ಸೆಕ್ಷನ್ ಅಡಿ ಪ್ರಕರಣ ದಾಖಲು; 20 ವರ್ಷ ಜೈಲುಶಿಕ್ಷೆ ಆದೀತು

ಒಂದೆಡೆ ಸ್ಯಾಂಡಲ್ವುಡ್​ನಲ್ಲಿ ಡ್ರಗ್ಸ್ ಗಾಂಜಾ ವಾಸನೆ ಜೋರಾಗುತ್ತಿದ್ದು, ನಟ ನಟಿಯರನ್ನ ನಿದ್ದೆಗೆಡಿಸಿದರೆ, ಕೋಟೆನಾಡಲ್ಲಿ ಬರೋಬ್ಬರಿ ಐದು ಎಕರೆ ಗಾಂಜಾ ಸೊಪ್ಪು ಪತ್ತೆ ಪ್ರಕರಣ, ಜಿಲ್ಲೆಯ ಜನರಲ್ಲಿ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ,  ಗಾಂಜಾ ಜಾಲವನ್ನ ಪತ್ತೆ ಹಚ್ಚಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: