ಚಿತ್ರದುರ್ಗ: ಈ ಸರ್ಕಾರದ ಸಚಿವ ಸಂಪುಟದಲ್ಲಿ ನೂರಕ್ಕೆ ನೂರು ಸಾಮಾಜಿಕ ನ್ಯಾಯವಿಲ್ಲ. ಸಚಿವ ಸಂಪುಟದಲ್ಲಿ ಗಂಭೀರ ಆರೋಪ ಇರುವ ಸಾಕಷ್ಟು ಜನರಿದ್ದಾರೆ. ನಿಜವಾಗಿಯೂ ನನಗೆ ಅನ್ಯಾಯವಾಗಿದೆ. ನನ್ನ ಕ್ಷೇತ್ರ, ಜಿಲ್ಲೆಯ ಜನರು ಬೆಸರಗೊಂಡಿದ್ದಾರೆ. ನಮ್ಮ ಜಿಲ್ಲೆಗೆ ಯಾವಾಗಲೂ ಹೊರಗಿನವರೇ ಮಂತ್ರಿಗಳು. ಜಿಲ್ಲೆಗೆ ಸಚಿವರಿಂದ ಯಾವ ಅಭಿವೃದ್ದಿ ಆಗಿದೆ ಹೇಳಿ? ನಮ್ಮ ಸರ್ಕಾರದಿಂದ ನಮ್ಮ ಜಿಲ್ಲೆಗೆ ಕೊಡುಗೆ ಏನು? ಇಷ್ಟು ನಿರಾಸೆ, ಜಿಗುಪ್ಸೆ ನನ್ನ ಜೀವನದಲ್ಲಿ ಎಂದೂ ಆಗಿರಲಿಲ್ಲ ಎಂದು ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ನೂತನ ಸರ್ಕಾರದ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.
ಸತತ ಆರು ಬಾರಿ ಶಾಸಕರಾಗಿರುವ ಜಿಹೆಚ್ ತಿಪ್ಪಾರೆಡ್ಡಿ, ಈಗಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗೋ ನಿರೀಕ್ಷೆ ಇಟ್ಟುಕೊಂಡಿದ್ರು. ಆದರೆ ಪಕ್ಷ ಅವರನ್ಮ ಸಚಿವರನ್ನಾಗಿಸಲು ಹಿಂದೇಟು ಹಾಕಿದ್ದು ಶಾಸಕ ತಿಪ್ಪಾರೆಡ್ಡಿ ಯವರ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ತನಗಾಗಿರುವ ಅನ್ಯಾಯದ ಕುರಿತು ಮಾಧ್ಯಮಗಳ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಚಿತ್ರದುರ್ಗದಲ್ಲಿ ನ್ಯೂಸ್18 ಗೆ ಮನದಾಳದ ನೋವು ಹೇಳಿದ ತಿಪ್ಪಾರೆಡ್ಡಿ, ನನಗೆ ಈ ಸಾರಿ ನೂರಕ್ಕೆ ನೂರು ಸಚಿವ ಸ್ಥಾನದ ಅವಕಾಶ ಆಗುತ್ತೆ ಅನ್ನೋ ಭಾವನೆ ಇತ್ತು. ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯವಿಲ್ಲ, ಕೇಂದ್ರ ಸಚಿವ ಸಂಪುಟದಲ್ಲಿ ಮೋದಿ ಹಿರಿಯ, ಕಿರಿಯರಿಗೂ ಸಚಿವಸ್ಥಾನ ನೀಡಿದ್ದಾರೆ. ನನಗೆ ನೋವು ಅನ್ನೋದಕ್ಕಿಂತ ಜಿಗುಪ್ಸೆ ಆಗಿದೆ, ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಬೆಲೆ ಸಿಗಲಿಲ್ಲ. ಆದರೆ ಜನರು ನನ್ನನ್ನ ರೆಕಗ್ನೈಸ್ ಮಾಡಿದ್ದಾರೆ. ಅವರ ಋಣ ನನ್ನ ಮೇಲಿದೆ. ಜನರ ಋಣವನ್ನ ನಾನು ಮರೆಯೋಕೆ ಆಗೋದಿಲ್ಲ ಎಂದಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ನನಗೆ ಮೊದಲಿಂದ ಆತ್ಮೀಯ ಸ್ನೇಹಿತರು, ನಮ್ಮ ಕುಟುಂಬದ ಪೂರ್ಣ ಮಾಹಿತಿ ಅವರಿಗೆ ಇದೆ. 1972 ರಿಂದ ನಾನು ನಮ್ಮಣ್ಣ ವಿಧಾನ ಸಭೆಯಲ್ಲಿದ್ದೇವೆ. ನಾನು ಆರು ಬಾರಿ, ನಮ್ಮಣ್ಣ ಏಳು ಬಾರಿ ಶಾಸಕರಾಗಿದ್ದೆವೆ. ನಾವೆಂದೂ ಜಾತಿ ಆಧಾರದಲ್ಲಿ ಚುನಾವಣೆ ಮಾಡಿದವರಲ್ಲ. ಜಾತಿ ಫೀಲಿಂಗ್ ಇಟ್ಟುಕೊಂಡು ಮತ ಕೇಳಲ್ಲ, ರಾಜಕೀಯ ಮಾಡಲ್ಲ. ನಾನು ಯಾವ ಜಾತಿಯ ಕೆಟಗೆರಿಗೆ ಸೇರುತ್ತೇನೆಂದು ಮೊನ್ನೆ ತಿಳಿಯಿತು. ಜಾತಿ ಆದಾರದಲ್ಲಿ ಜನರು ನನಗೆ ಮತ ಹಾಕಿದ್ದರೆ ಪಕ್ಷೇತರನಾಗಿ ಗೆಲ್ಲುತ್ತಿರಲಿಲ್ಲ ಎಂದು ತಿಪ್ಪಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ; ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೈಸೂರು ವಿವಿ ಪ್ರಾಧ್ಯಾಪಕ
ಅಲ್ಲದೇ ರಾಜ್ಯ ಬಿಜೆಪಿ ಶಾಸಕರಲ್ಲಿ ಆರು ಬಾರಿ ಶಾಸಕನಾಗಿ ಸಚಿವ ಸ್ಥಾನ ಸಿಗದಿರುವವ ನಾನೊಬ್ಬನೆ. ಆದ್ದರಿಂದ ಸಚಿವ ಸ್ಥಾನ ಸಿಗದೆ ಉಳಿದದ್ದು ನನಗೆ ನಾಚಿಕೆ ಆಗುತ್ತದೆ. 50-60 ವರ್ಷಗಳಿಂದ ರಾಜಕೀಯದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಹಾಗೇನಾದರೂ ಇದೆಯಾ ಎಂದು ವಿರೋಧ ಪಕ್ಷದವರನ್ನ ಕೇಳಿನೋಡಿ. ಕಪ್ಪಚುಕ್ಕೆ ಇದೆ ಎಂದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಚಿತ್ರದುರ್ಗ ಶಾಸಕರು ಸವಾಲು ಹಾಕಿದ್ದಾರೆ.
ಇನ್ನು, ನನಗಿಂತ ಕಿರಿಯರು, ಹಿರಿಯರಿಗೂ ಸಚಿವಸ್ಥಾನ ನೀಡಿ ನನಗೆ ಎರಡು ಬಾರಿ ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಾರೆ. ಮೋದಿ, ಬಿಎಸ್ವೈ ನಾಯಕತ್ವ ನೋಡಿ ಬಿಜೆಪಿಗೆ ಅನೇಕ ಜನ ಮತ ಹಾಕಿದ್ದಾರೆ. ಅವರೆಲ್ಲರೂ ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ನಾವೆಲ್ಲಾ ಬರಿ ಮತ ಹಾಕೋಕೆ ಮಾತ್ರ ಇದೇವಾ ಎಂಬ ಭಾವನೆ ಇದೆ. ಮತಗಳನ್ನ ತಗಳೋಕೆ ನಾವು, ಅಧಿಕಾರ ಕೆಲವೇ ವರ್ಗದ ಜನರಿಗಾ
ಎಂದು ಜಿ ಎಚ್ ತಿಪ್ಪಾರೆಡ್ಡಿ ಪ್ರಶ್ನಿಸಿದ್ದಾರೆ.
ಈ ಸರ್ಕಾರದ ಸಚಿವ ಸಂಪುಟದಲ್ಲೂ ನೂರಕ್ಕೆ ನೂರು ಸಾಮಾಜಿಕ ನ್ಯಾಯವಿಲ್ಲ. ಸಚಿವ ಸಂಪುಟದಲ್ಲಿ ಗಂಭೀರ ಆರೋಪ ಇರುವ ಸಾಕಷ್ಟು ಜನರಿದ್ದಾರೆ. ಪಕ್ಷದ ದೃಷ್ಟಿಯಿಂದ ಅದನ್ನ ನಾನು ಹೇಳಲಾರೆ. ನಿಜವಾಗಿಯೂ ನನಗೆ ಅನ್ಯಾಯವಾಗಿದೆ. ನನ್ನ ಕ್ಷೇತ್ರ, ಜಿಲ್ಲೆಯ ಜನರು ಬೆಸರಗೊಂಡಿದ್ದಾರೆ. ನಮ್ಮ ಜಿಲ್ಲೆಗೆ ಯಾವಾಗಲೂ ಹೊರಗಿನವರೇ ಮಂತ್ರಿಗಳು. ಸಂಘಪರಿವಾರ, ಬಿಎಸ್ವೈ, ಕಟೀಲ್ ಎಲ್ಲರೂ ನನಗೆ ಬೆಂಬಲ ನೀಡಿದ್ದರು. ಆದರೂ ಸಚಿವ ಸ್ಥಾನ ಸಿಗಲಿಲ್ಲ. ಈಗ ನನ್ನ ಕ್ಷೇತ್ರದ ಜನರಿಗೆ ಕೆಲಸ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ನನಗೆ ಸಚಿವ ಸ್ಥಾನ ಯಾವ ಕಾರಣಕ್ಕೆ ಹೋಯ್ತು ಎಂದು ಕೇಳುವ ಪ್ರಯತ್ನ ಮಾಡಲ್ಲ, ಮತ್ತೆ ಅದನ್ನ ಪೋಸ್ಟ್ ಮಾರ್ಟಂ ಮಾಡಲು ನನಗೆ ಇಷ್ಟವಿಲ್ಲ. ನನ್ನ ಕಾರ್ಯವೈಖರಿ, ಪಕ್ಷ ಸಂಘಟನೆ ಕುರಿತು ಸಿಎಂ ಗಮನಕ್ಕೆ ಬರಬೇಕಿತ್ತು. ಪಕ್ಷದ ನಾಯಕರು ಮತ್ತು ಸಿಎಂ ಬಳಿ ಹೋಗಿ ದಿನ ನಿತ್ಯ ಚಾಡಿ ಹೇಳೋ ಸ್ವಭಾವ ನನಗಿಲ್ಲ. ನಾನು ಹಲವು ಏಳುಬೀಳು ನೋಡಿ, ಗೌರವಯುತವಾಗಿ ಬಂದ ರಾಜಕಾರಣಿ. ಅತೀ ವಿನಯ ತೋರಿ ಅಧಿಕಾರ ಕೇಳುವ ಹವ್ಯಾಸ ನನ್ನಲ್ಲಿಲ್ಲ ಎಂದು ಜಿ ಎಚ್ ತಿಪ್ಪಾರೆಡ್ಡಿ ಅಳಲು ತೋಡಿಕೊಂಡಿದ್ದಾರೆ.
ವರದಿ: ವಿನಾಯಕ ತೊಡರನಾಳ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ