ಚಿತ್ರದುರ್ಗದಲ್ಲಿ ಅಪ್ರಾಪ್ತೆ ಅತ್ಯಾಚಾರ-ಕೊಲೆ: 10 ಮಂದಿ ಪೊಲೀಸರ ತಂಡದಿಂದ ತನಿಖೆ

ಚಿತ್ರದುರ್ಗದ ಇಸಾಮುದ್ರ ಗ್ರಾಮದಲ್ಲಿ 13 ವರ್ಷದ ಬಾಲಕಿಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ಇದೆ.

ಚಿತ್ರದುರ್ಗ ಪೊಲೀಸರು

ಚಿತ್ರದುರ್ಗ ಪೊಲೀಸರು

  • Share this:
ಚಿತ್ರದುರ್ಗ: ಬಹಿರ್ದೆಸೆಗೆ ಹೋಗಿದ್ದ ಹದಿಮೂರು ವರ್ಷದ ಪುಟ್ಟ ಬಾಲಕಿಯನ್ನ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಏನೂ ಅರಿಯದ ಪುಟ್ಟ ಕಂದನ ಮೇಲೆ ಕಾಮಾಂಧರ ಪೈಶಾಚಿಕ ಕೃತ್ಯ ಕಂಡು ಪೋಷಕರ ಎದೆ ನಡುಗಿದೆ. ಈ ಅಮಾನವೀಯ ಘಟನೆ ಕಂಡ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೋಲೀಸರು, 10 ವಿಶೇಷ ತಂಡಗಳನ್ನ ರಚಿಸಿ ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿ ತನಿಖೆ ಪ್ರಾರಂಭಿಸಿದ್ದಾರೆ.

ಆಕೆ ಏನೂ ಅರಿಯದ ಪುಟ್ಟ ಬಾಲಕಿ. ಈ ವರ್ಷ ಏಳನೇ ತರಗತಿ ಮುಗಿಸಿ ಮೊನ್ನೆ ತಾನೆ 8ನೇ ತರಗತಿಗೆ ದಾಖಲಾಗಿ ಬಂದಿದ್ದಳು. ಚೆನ್ನಾಗಿ ಓದಿ ಸಾಧನೆ ಮಾಡಬೇಕು ಅನ್ನೋ ಗುರಿ ಹೊಂದಿದ್ದಳು. ಆದರೆ ಆಕೆ ಯಾರೋ ಕಾಮಾಂಧರ ಕಾಮದಾಹಕ್ಕೆ ಬಲಿಯಾಗಿ ಕೊಲೆಯಾಗಿ ಹೋಗಿದ್ದಾಳೆ. ಚಿತ್ರದುರ್ಗ ತಾಲ್ಲೂಕಿನ ಇಸಾಮುದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆ ನತದೃಷ್ಟ ಬಾಲಕಿ ಗ್ರಾಮದ ನಾಗಮ್ಮ, ಮಹಂತೇಶ್ ದಂಪತಿ 13 ವರ್ಷದ  ಪುತ್ರಿ ಶಶಿಕಲಾ ಎಂದು ಗುರುತಿಸಲಾಗಿದೆ.

ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಹಿರ್ದೆಸೆಗೆ ತೆರಳಿದ್ದ ಆ ಬಾಲಕಿ ಮನೆಗೆ ವಾಪಾಸ್ ಆಗಿರಲಿಲ್ಲ. ಬಳಿಕ ಮನೆಗೆ ಬಂದ ತಂದೆ ತಾಯಿ ತಮ್ಮ ಮಗಳನ್ನ ಹುಡುಕಿ ನೋಡುತ್ತಾರೆ. ಗ್ರಾಮದ ಬಳಿಯ ಮೆಕ್ಕೆಜೋಳ ದ ಜಮೀನಿನಲ್ಲಿ ಬಾಲಕಿ ವಿವಸ್ತ್ರವಾಗಿ, ಕೊಲೆಯಾಗಿ ಕೆಸರಿನಲ್ಲಿ ಬಿದ್ದದ್ದು ಕಂಡು ಬಂದಿದೆ. ಅತ್ಯಾಚಾರದ ಬಳಿಕ, ಕತ್ತು ಹಿಸುಕಿ, ಉಸಿರುಗಟ್ಟಿಸಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಗಳ ಈ ಸ್ಥಿತಿಯಲ್ಲಿನ ಮೃತದೇಹ ಕಂಡ ತಂದೆ ತಾಯಿಯ ಗೋಳು ಮುಗಿಲು ಮುಟ್ಟಿದೆ.

ಇನ್ನು, ಘಟನೆ ತಿಳಿಯುತ್ತಿದ್ದಂತೆ ಭರಮಸಾಗರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣದ ಗಂಭೀರತೆ ಅರಿತು ಚಿತ್ರದುರ್ಗ ಎಸ್​ಪಿ ರಾಧಿಕಾ ಅವರಿಗೆ ಮಾಹಿತಿ ತಿಳಿಸಿದ್ದಾರೆ‌‌. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಸ್​ಪಿ ರಾಧಿಕಾ ಸ್ಥಳ ಪರಿಶೀಲನೆ ಮಾಡಿ ದಾವಣಗೆರೆ ಐಜಿಯವರಿಗೆ ಪ್ರಕರಣದ ಮಾಹಿತಿ ನೀಡಿದ್ದು ಅವರೂ ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ತನಿಖೆಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಸ್ಥಾನ ತ್ಯಜಿಸಿದರೆ ಈಶ್ವರಪ್ಪಗೆ ಪಟ್ಟ ಕಟ್ಟಿ: ರಾಯಣ್ಣ ಬ್ರಿಗೇಡ್ ನಾಯಕರ ಆಗ್ರಹ

ಭರಮಸಾಗರ ಠಾಣೆ ಪ್ರಕರಣ ದಾಖಲಾಗಿದ್ದು, ಎಸ್​ಪಿ ರಾಧಿಕಾ, ಎಸ್​ಪಿ ನಂದಗಾವಿ, ಸೇರಿದಂತೆ ಡಿವೈಎಸ್​ಪಿ ಪಾಂಡುರಂಗ, ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಇಂಚಿಂಚು ಮಾಹಿತಿಯನ್ನ ಕಲೆ ಹಾಕಿದ್ದಾರೆ‌. ಅಲ್ಲದೇ ಪ್ರಕರಣ ಭೇದಿಸಿ ಆರೋಪಿಯನ್ನ ಎಡಮುರಿ ಕಟ್ಟೋಕೆ ಹತ್ತು ವಿಶೇಷ ತಂಡಗಳನ್ನ ರಚಿಸಿದ್ದಾರೆ. ಅಲ್ಲದೇ ಪ್ರತೀ ತಂಡದಲ್ಲಿ ಇಬ್ಬರು ಪೋಲೀಸ್ ಇನ್ಸ್​ಪೆಕ್ಟರ್, ಪಿಎಸ್ಐ ಸೇರಿದಂತೆ ಹತ್ತು ಮಂದಿಯ ತಂಡ ತನಿಖೆ ಪ್ರಾರಂಭ ಮಾಡಿದ್ದಾರೆ. ಅಲ್ಲದೇ ಘಟನೆ ನಡೆದ ದಿನ ಆ ಗ್ರಾಮದಲ್ಲಿ ಯಾರು ಇದ್ದರು ಅನ್ನೋ ಮೂಲ ಮಾಹಿತಿ ಪಡೆಯೊಕೆ ಪ್ರತೀ ಮನೆಯನ್ನ ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ನೂರಾರು ಕನಸು ಹೊತ್ತು ಬದುಕಿ ಬಾಳಬೇಕಿದ್ದ ಪಟ್ಟ ಬಾಲಕಿ ದುಷ್ಟರ ಕಾಮದಾಹಕ್ಕೆ ಬಲಿಯಾಗಿದ್ದಾಳೆ. ಘಟನೆ ಬಳಿಕ ತಲೆ ಮರೆಸಿಕೊಂಡಿರುವ ಆರೋಪಿಗಳ ಸೆರೆಗೆ ಪೋಲೀಸರು ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ. ಇತ್ತ ಘಟನೆ ಸುದ್ದಿ ತಿಳಿದ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದು, ಅರೋಪಿಗಳ ಸೆರೆ ಹಿಡಿದು ಶಿಕ್ಷಿಸುವಂತೆ ಹಿಡಿ ಶಾಪ ಹಾಕಿದ್ದಾರೆ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: