news18-kannada Updated:January 16, 2021, 7:54 AM IST
ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಮಾಡಲಾಗಿರುವ ಜಾಗ.
ಚಿತ್ರದುರ್ಗ: ಸರ್ಕಾರ ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ನೀಡುತ್ತಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಅಧಿಕಾರಿಗಳು ಮಾತ್ರ ಸರ್ಕಾರದ ಹಣ ಲೂಟಿ ಮಾಡೋಕೆ ನಿಂತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಈ ಗ್ರಾಮ ಪಂಚಾಯತಿಯಲ್ಲಿ ನರೇಗಾ ಅನುದಾನವನ್ನ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ನುಂಗಿ ನೀರು ಕುಡಿದಿದ್ದಾರೆಂಬ ಗಂಭೀರ ಕೇಳಿ ಬಂದಿದೆ. ಬರದನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಆಂದ್ರ ಗಡಿಯಂಚಿನ ಗ್ರಾಮ ಮನ್ನೇಕೋಟೆ. ಈ ಗ್ರಾಮ ಕಳೆದ ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ಹಳ್ಳಿಯಾಗಿತ್ತು. ಇಲ್ಲಿನ ನಿರುದ್ಯೋಗ ನಿರ್ಮೂಲನೆಗಾಗಿ ಸರ್ಕಾರ ನರೇಗಾ ಯೋಜನೆಯಲ್ಲಿ ಲಕ್ಷಾಂತರ ಹಣ ಬಿಡುಗಡೆ ಮಾಡಿತ್ತು. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಪಂಚಾಯತಿ ಪಿಡಿಓ ಉಮಾಕಾಂತ್ ಹಾಗೂ ಕಂಪ್ಯೂಟರ್ ಆಪರೇಟರ್ ಮಂಜುನಾಥ್ ಆ ಹಣವನ್ನ ಅಕ್ರಮ ಎಸಗಿ ಗುಳುಂ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಇನ್ನೂ ಇದೇ ಗ್ರಾಮದ ಹಲವೆಡೆ ಬದು ನಿರ್ಮಾಣ, ಚೆಕ್ ಡ್ಯಾಂ,ವಾಟರ್ ಪೂಲ್ ಕಾಮಗಾರಿ ಮಾಡಿದ್ದು, ಈ ಕಾಮಗಾರಿಗಳಲ್ಲಿ ಸ್ಥಳ ಬದಲಾವಣೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇಷ್ಟೇ ಅಲ್ಲದೇ ಈ ಪಂಚಾಯತಿ ಕಂಪ್ಯೂಟರ್ ಆಫರೇಟರ್ ಮಂಜುನಾಥ್, ಗ್ರಾಮ ಪಂಚಾಯತಿ ಪಿಡಿಓ ಉಮಾಕಾಂತ್ ಅವರ BFT & GPS ಲಾಗಿನ್ ಬಳಸಿದ್ದಾರೆಂಬ ಆರೋಪವೂ ಕೇಳಿ ಬಂದಿದ್ದು, ಮಂಜುನಾಥನೇ ಕಳಪೆ ಕಾಮಗಾರಿಯ ಸೂತ್ರಧಾರಿ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನೂ ಕಾಮಗಾರಿ ಸ್ಥಳ ಬದಲಾವಣೆ ಮಾತ್ರವಲ್ಲದೇ, ಹಳೆ ಕಾಮಗಾರಿಗಳಿಗೆ ಹೊಸ ಬೋರ್ಡ್ ಹಾಕಿ ಬಿಲ್ ಮಾಡಿದ್ದು, ಲಕ್ಷಾಂತರ ಹಣ ಗುಳುಂ ಮಾಡಿದ್ದು, ಜನರಿಗೆ ಉದ್ಯೋಗ ಖಾತ್ರಿ ಕೆಲಸ ನೀಡದೆ 40 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಗ್ರಾಮಕ್ಕೆ ಸಂಬಂಧಿಸಿದ 18-19ನೇ ಸಾಲಿನ ಕಾಮಗಾರಿ ಕಳಪೆ ಮಾಡಿದ್ದು, ಸರ್ಕಾರದ ನಿಯಮ ಮೀರಿ 40-50 ಲಕ್ಷ ಹಣ ಲೂಟಿ ಮಾಡಿದ್ದಾರೆಂದು ಮನ್ನೇಕೋಟೆ ಗ್ರಾಮಸ್ಥರು, ಪಿಡಿಓ ಹಾಗೂ ಕಂಪ್ಯೂಟರ್ ಆಫರೇಟರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಗ್ರಾಮದ ಯುವಕರು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರು,ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹಾಗೂ, ಸಿಇಓಗೂ ದೂರು ನೀಡಿ,ತನಿಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ, ಈ ಆಹಾರಗಳಿಂದ ದೂರವಿರಿ
ಈ ಬಗ್ಗೆ ಚಿತ್ರದುರ್ಗ ಸಿಇಓ ನಂದಿನಿದೇವಿ ಅವರನ್ನ ಕೇಳಿದ್ರೆ, ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪತ್ರ ಬಂದಿದ್ದು, ಕಳಪೆ ಕಾಮಗಾರಿ ಕುರಿತು ತನಿಖೆ ನಡೆಯುತ್ತಿದೆ,ಚಳ್ಳಕೆರೆ ಇಓ ವರದಿ ಸಲ್ಲಿಕೆ ಬಳಿಕ ತಪ್ಪಿತಸ್ಥರ ವಿರುದ್ದ,ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಅಂತಿದ್ದಾರೆ.
ಒಟ್ಟಾರೆ ಸರ್ಕಾರ ನಿರುದ್ಯೋಗ ನಿರ್ಮೂಲನೆಗಾಗಿ ಬಿಡುಗಡೆ ಮಾಡಿದ್ದ,ಲಕ್ಷಾಂತರ ರೂಪಾಯಿ ಹಣ,ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಜೇಬಿಗಿಳಿಸಿದ್ದು,ಈ ಸಂಬಂಧ ಸೂಕ್ತ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಅನ್ನೋದು ಗ್ರಾಮಸ್ಥರ ಒತ್ತಾಯವಾಗಿದೆ. ಅದರಂತೆ ಅಧಿಕಾರಿಗಳೂ ಕೂಡಾ ಎಚ್ಚೆತ್ತು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಿದೆ.
Published by:
MAshok Kumar
First published:
January 16, 2021, 7:54 AM IST