Thrips Insects- ಹೂಬೆಳೆಗೆ ಥ್ರಿಪ್ಸ್ ಕೀಟ ಬಾಧೆ; ಲಕ್ಷಾಂತರ ವೆಚ್ಚದ ಬೆಳೆ ನಾಶ ಮಾಡಿದ ರೈತ

ಕೊರೋನಾ ಕಡಿಮೆ ಆಗುತ್ತಿದ್ದಂತೆ ಲಾಭದ ಕನಸು ಕಂಡಿದ್ದ ಹೂ ಬೆಳೆಗಾರರಿಗೆ ಥ್ರಿಪ್ಸ್ ಕೀಟಾಣು ಇನ್ನಿಲ್ಲದಂತೆ ಕಾಡಿದೆ. ಇದ್ರಿಂದ ಮನನೊಂದ ದುರ್ಗದ ರೈತನೊಬ್ಬ ತಾನೇ ಬೆಳೆದ ಸೇವಂತಿ ಹೂ ಬೆಳೆಯನ್ನ ನಾಶ ಮಾಡಿದ್ದಾನೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರದುರ್ಗದಲ್ಲಿ ಹೂ ಬೆಳೆ

ಚಿತ್ರದುರ್ಗದಲ್ಲಿ ಹೂ ಬೆಳೆ

  • Share this:
ಚಿತ್ರದುರ್ಗ: ಟ್ರಾಕ್ಟರ್ ಮೂಲಕ ಶ್ರಮದ  ಬೆಳೆಯನ್ನ ನಾಶ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಬರದನಾಡು ಚಿತ್ರದುರ್ಗದ ದಂಡಿನ ಕುರುಬರಹಟ್ಟಿ ಗ್ರಾಮದಲ್ಲಿ. ಗ್ರಾಮದ ರೇಣುಕಾ ರಾಜ್ ತನ್ನ ಮೂರು ಎಕರೆ ಜಮೀನಿನಲ್ಲಿ ಸೇವಂತಿ ಹೂ ಬೆಳೆದು ಫಸಲು ಕೈಗೆ ಬಂದರೂ ಕಳೆದ ವರ್ಷದಿಂದ ಕೋವಿಡ್ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿದ್ದ. ಕೋವಿಡ್ ಸೋಂಕು ಕಡಿಮೆ ಆಗುತ್ತಿದ್ದಂತೆ ಛಲ ಬಿಡದೆ ಮತ್ತೆ ತನ್ನ ಜಮೀನಿನಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಸೇವಂತಿ ಹೂ ಬೆಳೆದಿದ್ದಾನೆ. ಇನ್ನೇನು ಹೂ ಕಟಾವು ಮಾಡುವ ಹಂತಕ್ಕೆ ಬರುತ್ತಿದ್ದಂತೆ ರೈತ ರೇಣುಕಾ ರಾಜ್​ಗೆ ಥ್ರೀಪ್ಸ್ ಕೀಟಾಣು (Thrips Insect) ಶಾಕ್ ನೀಡಿದೆ. ಮಾರಾಟದ ಹಂತಕ್ಕೆ ಬಂದ ಹೂವಿಗೆ ಥ್ರೀಪ್ಸ್  ರೋಗ ಬಿದ್ದಿದೆ. ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೂ ಬೆಳೆ ನುಸಿರೋಗಕ್ಕೆ ತುತ್ತಾಗಿದೆ.

ಅಲ್ಲದೆ, ಮಾರುಕಟ್ಟೆಯಲ್ಲಿ ಏಕಾಏಕಿ ಹೂವಿನ ಬೆಲೆ ಕುಸಿದಿದ್ದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೇಣುಕಾ ರಾಜ್ ಟ್ರಾಕ್ಟರ್ ಮೂಲಕ ರೋಟಾವೇಟರ್ ಹೊಡೆದು ಬೆಳೆಯನ್ನ ಕೈಯಾರೆ ನಾಶ ಮಾಡಿದ್ದಾನೆ. ಬೆಳೆಯೋಕೆ ಲಕ್ಷಾಂತರ ಹಣ ಖರ್ಚು ಮಾಡಿದ್ದ ರೇಣುಕ ರಾಜ್, ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಲ್ಲಿ ಲಾಭದ ನಿರೀಕ್ಷಯಲ್ಲಿದ್ದ. ಆದರೆ ರೈತ ರೇಣುಕಾಗೆ ಥ್ರಿಪ್ಸ್ ಕೀಟ ಎಡೆಬಿಡದೆ ಕಾಡಿದ್ದು, ರೈತ ತತ್ತರಿಸಿ ಹೋಗಿದ್ದಾನೆ. ಇವರಷ್ಟೆ ಅಲ್ಲದೇ ಇತರೇ ಹೂ ಬೆಳೆಗಾರರೂ ತುಂಬ ಸಂಕಷ್ಟಕ್ಕೆ ಸಿಲುಕಿದ್ದು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡುವಂತೆ ರೈತ ಒತ್ತಾಯಿಸಿದ್ದಾನೆ.

ಇದನ್ನೂ ಓದಿ: Bombay Clay Ganesha- ಬಾಂಬೆ ಕ್ಲೇನಿಂದ ಗಣೇಶನ ಮೂರ್ತಿ ತಯಾರಿಸುವ ವಸ್ತ್ರದ ಕುಟುಂಬ

ಇನ್ನು, ಈ ಸಮಸ್ಯೆ ಇರೋದು ಕೇವಲ ದಂಡಿನ ಕುರುಬರಹಟ್ಟಿ ಗ್ರಾಮದಲ್ಲಿ ಮಾತ್ರವಲ್ಲ. ಸುಮಾರು 400 ಹೆಕ್ಟರ್​ಗೂ ಅಧಿಕ ಹೂ ಬೆಳೆ ಹಾಕಿದ್ದ ರೈತರು ಈ ಬಾರಿ ಕೀಟ ಬಾಧೆಗೆ ತತ್ತರಿಸಿದ್ದಾರೆ. ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡ ಹಲವು ಹಳ್ಳಿಯಿಂದ ಪ್ರತಿ ವರ್ಷ ಬೆಂಗಳೂರು, ಮಹಾರಾಷ್ಟ್ರ, ಕೇರಳ, ಸೇರಿ ಅನ್ಯ ರಾಜ್ಯಕ್ಕೂ ಹೂ ರಫ್ತಾಗುತ್ತಿತ್ತು. ಆದರೆ ಈ ಬಾರಿ ಕೀಟಬಾಧೆ ಮತ್ತು ಬೆಲೆ ಕುಸಿತಕ್ಕೆ ಜಿಲ್ಲೆಯ ಹೂ ಬೆಳೆಗಾರರು ತತ್ತರಿಸಿ, ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಈ ಬಗ್ಗೆ ಮಾತನಾಡಿರುವ ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಕುಮಾರ್, ರಾಜ್ಯ ಮಟ್ಟದ ಅಧಿಕಾರಿಗಳಿಂದ ಹೂ ಬೆಳೆಗಾಗರಿಗೆ ಮಾಹಿತಿ ನೀಡಿದ್ದೇವೆ. ಒಂದೇ ಕ್ರೀಮಿನಾಶಕ ಪದೇ ಪದೇ ಸಿಂಪಡಣೆಯಿಂದ ಈ ರೀತಿಯಾಗಿದೆ ಎನ್ನುತ್ತಾರೆ. ರೈತರ ಕೃಷಿ ಪದ್ದತಿ ಹಾಗೂ ಔಷಧಿ ಬಳಕೆಯ ಕ್ರಮ ಬದಲಾಗಬೇಕು ಎಂಬುದು ಅವರ ಅಭಿಪ್ರಾಯ.

ಒಟ್ಟಾರೆ ಶ್ರಾವಣ ಮಾಸದ ಲಾಭದಲ್ಲಿ ಹೂ ಬೆಳೆಗಾರರಿಗೆ ಥ್ರೀಪ್ಸ್ ಕೀಟಾಣು ಶಾಕ್ ನೀಡಿದೆ. ಇದರ ಹೊಡೆತಕ್ಕೆ ಈ ವರ್ಷ ಲಕ್ಷಾಂತರ ಹಣ ಖರ್ಚು ಮಾಡಿ ಹೂ ಬೆಳೆದಿದ್ದ ಹಲವು ರೈತರು ನಷ್ಟಕ್ಕೆ ಸಿಲುಕಿದಂತಾಗಿದೆ. ರ ಕಷ್ಟ ಅರಿತು ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಅನ್ನದಾತರ ಕೈಹಿಡಿಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: