• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಂಪುಟದಲ್ಲಿ ಸಮಾನತೆ ಇಲ್ಲ; ಬೆಂಗಳೂರು, ಬೆಳಗಾವಿಗೇ ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್: ತಿಪ್ಪಾರೆಡ್ಡಿ ಬೇಸರ

ಸಂಪುಟದಲ್ಲಿ ಸಮಾನತೆ ಇಲ್ಲ; ಬೆಂಗಳೂರು, ಬೆಳಗಾವಿಗೇ ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್: ತಿಪ್ಪಾರೆಡ್ಡಿ ಬೇಸರ

ಜಿ.ಹೆಚ್. ತಿಪ್ಪಾರೆಡ್ಡಿ

ಜಿ.ಹೆಚ್. ತಿಪ್ಪಾರೆಡ್ಡಿ

ಹಿಂದೆಲ್ಲಾ ಬಿಜೆಪಿಯ ಮುಖಂಡರು ಎಲ್ಲರನ್ನೂ ಗುರುತಿಸಿ ಅವಕಾಶ ಮಾಡಿಕೊಡುತ್ತಿದ್ದರು. ಈ ಬಾರಿ ಬಿಎಸ್​ವೈ ಸಂಪುಟದಲ್ಲಿ ಅಂಥ ಸಮಾನತೆ ಕಾಣುತ್ತಿಲ್ಲ. ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಮಂತ್ರಿಸ್ಥಾನ ಕೊಡಲಾಗಿದೆ ಎಂದು ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಬೇಸರಪಟ್ಟಿದ್ದಾರೆ.

ಮುಂದೆ ಓದಿ ...
  • Share this:

ಚಿತ್ರದುರ್ಗ: ಕರ್ನಾಟಕದಲ್ಲಿ ಮೂರು ಬಾರಿ ಬಿಜೆಪಿ ಸರ್ಕಾರ ಬಂದ್ರು ಚಿತ್ರದುರ್ಗ ಜಿಲ್ಲೆಯ ಶಾಸಕರಿಗೆ ಸಚಿವಸ್ಥಾನದ ಅವಕಾಶ ಸಿಕ್ಕಿಲ್ಲ. ಕೇವಲ ಬೆಳಗಾವಿ, ಬೆಂಗಳೂರಿನಲ್ಲಿ ಅರ್ಧಕ್ಕಿಂತ ಹೆಚ್ಚು ಕ್ಯಾಬಿನೆಟ್ ಇದೆ. ಚುನಾವಣೆ ವೇಳೆ ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರಿಗೆ ಕ್ಯಾಬಿನೆಟ್​ನಲ್ಲಿ ಅವಕಾಶ ನೀಡಿರುವುದು ಆಶ್ಚರ್ಯ ತಂದಿದೆ ಎಂದು ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿಎಸ್​ವೈ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.


ಆರು ಬಾರಿ ಶಾಸಕರಾಗಿ ಆಯ್ಕೆಯಾದ ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಈ ಸಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ದಿನದಿಂದಲೂ ಸಚಿವಸ್ಥಾನ ಸಿಗುತ್ತದೆ ಅನ್ನೋ ಆಶಾಬಾವದಿಂದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಮೊನ್ನೆಯ ಸಚಿವ ಸಂಪುಟ ವಿಸ್ತರಣೆ ವೇಳೆ ಅವರ ಹೆಸರು ಕೈಬಿಟ್ಟಿದ್ದು ಬೇಸರ ಉಂಟುಮಾಡಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಹೆಚ್ ತಿಪ್ಪಾರೆಡ್ಡಿ, ನಾನು ರಾಜಕೀಯಕ್ಕೆ ಸುಮ್ಮನೆ ಒಂದು ಜನರೇಷನ್ ವೇಸ್ಟ್ ಮಾಡಿದ್ದೇನೆ. ಇನ್ನೂ ನೂರು ವರ್ಷ ಬದುಕುತ್ತೇವೆ ಎಂದರೆ ಏನೋ ಮಾಡಬಹುದಿತ್ತು, ಈ ಬಾರಿಯಾದ್ರೂ ಅವಕಾಶ ಸಿಗುತ್ತೆ ಎಂದು ನಿರೀಕ್ಷೆ ಮಾಡಿದ್ದೆ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.


ಹಿರಿಯರ ಪಟ್ಟಿಯಲ್ಲಿ ಅಂಗಾರ - ಕತ್ತಿಗೆ ಸಚಿವಸ್ಥಾನ ಸಿಕ್ಕಿದೆ. ಆದರೆ, ಸಿಪಿ ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ್ದು ತುಂಬಾ ಆಶ್ಚರ್ಯ. ಅವರು ಸರ್ಕಾರ ಬರಲು ಸಹಾಯ ಮಾಡಿದ್ದಾರೆ ಎನ್ನುತ್ತಾರೆ. ಏನೂ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಎಂಟಿಬಿ ನಾಗರಾಜ್, ಶಂಕರ್ ಸರ್ಕಾರ ಬರಲು ಸಹಾಯ ಮಾಡಿದ್ರು ಎಂದಿದ್ದಾರೆ. ಕರ್ನಾಟಕದಲ್ಲಿ ಮೂರು ಬಾರಿ ಬಿಜೆಪಿ ಸರ್ಕಾರ ಬಂದರೂ ಚಿತ್ರದುರ್ಗ ಜಿಲ್ಲೆ ಶಾಸಕರಿಗೆ ಸಚಿವಸ್ಥಾನದ ಅವಕಾಶ ಸಿಕ್ಕಿಲ್ಲ ಎಂದು ತಿಪ್ಪಾರೆಡ್ಡಿ ಕಿಡಿಕಾರಿದ್ದಾರೆ.


ಇದನ್ನೂ ಓದಿ: ಸಾಲ ಮಾಡಿ ನಮ್ಮನ್ನು ಒಗ್ಗೂಡಿಸುವುದು ಏನಿತ್ತು? ಸಿಪಿವೈ ಪರ ರಮೇಶ್ ಜಾರಕಿಹೊಳಿ ಸಮರ್ಥನೆ


ಹಿಂದೆಲ್ಲಾ ಬಿಜೆಪಿ ಕೇಂದ್ರದ ನಾಯಕರು, ನಮ್ಮ ರಾಜ್ಯದ ನಾಯಕರು ಮೊದಲಿಂದ ಎಲ್ಲರನ್ನೂ ಗುರ್ತಿಸುವ ಕೆಲಸ ಮಾಡಿ, ಎಲ್ಲರಿಗೂ ಅವಕಾಶ ಮಾಡಿಕೊಡುತ್ತಿದ್ದರು. ಈ ಬಾರಿ ಸಚಿವ ಸಂಪುಟದಲ್ಲಿ ಆ ರೀತಿಯ ಸಮಾನತೆ ಕಾಣುತ್ತಿಲ್ಲ ಎಂದು ಸರ್ಕಾರ ಹಾಗೂ ಸಿಎಂ ವಿರುದ್ದ ಅವರು ಕೋಪ ವ್ಯಕ್ತಪಡಿಸಿದ್ದಾರೆ.


ಅಲ್ಲದೇ 51 ವರ್ಷ ರಾಜಕೀಯದಲ್ಲಿ ಕಳೆದು ಸಾರ್ವಜನಿಕ ಜೀವನ ಮುಗಿಯುತ್ತಿದೆ. ಕೇವಲ ಶಾಸಕನಾಗಿ ಕ್ಷೇತ್ರದ ಜನರ ಸೇವೆ ಮಾಡಿದೆ. ರಾಜ್ಯ, ಜಿಲ್ಲೆಯ ಜನರ ಸೇವೆಗೆ ಅವಕಾಶ ಸಿಗಲಿಲ್ಲ. ಕೇವಲ ಶಾಸಕನಾಗಿ ಅಧಿಕಾರ ಸಿಗದೇ ಇರೋದು ನಿರಾಸೆಯಾಗಿದೆ ಎಂದು ಅವರು ಖೇದ ವ್ಯಕ್ಥಪಡಿಸಿದ್ದಾರೆ.


ಆದರೆ, ನಾವು ಇದನ್ನ ಪ್ರಶ್ನೆ ಮಾಡುವ ಅವಶ್ಯಕತೆ ಬರಲ್ಲ. ರಾಜ್ಯದ ಮತ್ತು ಕೇಂದ್ರದ ನಾಯಕರ ತೀರ್ಮಾನ ಇದಾಗಿದೆ. ಉತ್ತಮ ಸರ್ಕಾರ ಕೊಡಲು ಸಿಎಂ ಕೈ ಬಲಪಡಿಸಿ, ನಾನೂ  ಕೂಡ ಅವರ ಜೊತೆ ಶಾಸಕನಾಗಿ ಸಹಕಾರ ಕೊಡ್ತಿನಿ ಎಂದೂ ಚಿತ್ರದುರ್ಗದ ಹಿರಿಯ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.


ವರದಿ: ವಿನಾಯಕ ತೊಡರನಾಳ್

Published by:Vijayasarthy SN
First published: