news18-kannada Updated:January 20, 2021, 4:32 PM IST
ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು.
ಕಲಬುರ್ಗಿ; ಕಲಬುರ್ಗಿ ಜಿಲ್ಲೆಯಲ್ಲಿ ಅಧಿಕಾರಿಯೊಬ್ಬರ ಮೇಲೆ ಪುರಸಭೆ ಸದಸ್ಯ ಗುಂಡಾಗಿರಿ ಮಾಡಿದ ಘಟನೆ ನಡೆದಿದೆ. ಪುರಸಭೆ ಸದಸ್ಯನ ಗುಂಡಾಗಿರಿ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಪುರಸಭೆಯ ಮುಖ್ಯಾಧಿಕಾರಿ ಮೇಲೆ ಸದಸ್ಯನೋರ್ವ ಹಲ್ಲೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಪುರಸಭಾ ಕಚೇರಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್ ಮೇಲೆ ಹಾಡಹಗಲೇ ಜನರ ಸಮ್ಮುಖದಲ್ಲಿ ಹಲ್ಲೆ ಮಾಡಲಾಗಿದೆ. ಪುರಸಭೆ ಕಚೇರಿಯಲ್ಲಿಯೇ ಸದಸ್ಯ ಆನಂದ್ ಟೈಗರ್ ಎಂಬಾತ ಹಲ್ಲೆ ಮಾಡಿದ್ದಾನೆ. ಆನಂದ್ ಟೈಗರ್ ಚಿಂಚೋಳಿ ಪುರಸಭೆ ಯ ಸದಸ್ಯನಾಗಿದ್ದಾನೆ. ಭಾರತೀಯ ರಿಪಬ್ಲಿಕನ್ ಪಕ್ಷದಿಂದ ಸದಸ್ಯನಾಗಿ ತನ್ನ ಬೆಂಬಲಿಗ ಶಶಿಕುಮಾರ್ ಜೊತೆ ಆಗಮಿಸಿ ಹಲ್ಲೆ ಮಾಡಿದ್ದಾನೆ. ನಕಲಿ ಬಿಲ್ ಗಳಿಗೆ ಸಹಿ ಮಾಡಿ, ಚೆಕ್ ನೀಡುವಂತೆ ಆನಂದ್ ಟೈಗರ್ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ. ಅಧಿಕಾರಿ ಮೇಲೆ ಒತ್ತಡ ಹಾಕಿದ್ದ ಪುರಸಭೆ ಸದಸ್ಯ ಆನಂದ್, ಸಹಿ ಮಾಡದೇ ಇರೋದಕ್ಕೆ ಹಲ್ಲೆ ಮಾಡಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಅಲ್ಲಿದ್ದವರು ಎಷ್ಟೇ ಸಮಾಧಾನ ಮಾಡಿದರೂ ಕೇಳದೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಮಾಡಿ, ಕೆಳಗೆ ಹಾಕಿ ಒದ್ದಿದ್ದಾನೆ. ಹಾಡಹಗಲೇ, ಜನರ ಸಮ್ಮುಖಲ್ಲಿಯೇ ಈ ಕೃತ್ಯ ನಡೆದಿದೆ. ಮುಖ್ಯಾಧಿಕಾರಿ ಅಭಯ್ ಗೆ ಕೈ, ಹಣೆ, ಮುಖದ ಕೆಲವೆಡೆ ರಕ್ತದ ಗಾಯಗಳಾಗಿವೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಗೆ ಅಭಯ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ: ನಾನು ಬಂದಿದ್ದಿನಿ ಅಂದ್ರೆ ಕಾರಣ ಇರುತ್ತೆ, ಕೀಪ್ ಇಟ್ ಇನ್ ಯುವರ್ ಮೈಂಡ್: ಡಿವೈಎಸ್ಪಿಗೆ ಮಾಜಿ ಶಾಸಕ ಸುರೇಶ್ ಗೌಡ ಆವಾಜ್
ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಲಬುರ್ಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಈ ಕುರಿತು ಮಾಹಿತಿ ನೀಡಿರೋ ಸಿಮಿ ಮರಿಯಮ್ ಜಾರ್ಜ್, ನಿನ್ನೆ ಪುರಸಭೆ ಮುಖ್ಯಾಧಿಕಾರಿ ಅಭಯ್ ಮೇಲೆ ಹಲ್ಲೆ ಮಾಡಲಾಗಿತ್ತು. ಪುರಸಭೆ ಕಚೇರಿಯಲ್ಲಿಯೇ ಸದಸ್ಯ ಆನಂದ್ ಟೈಗರ್ ಮತ್ತು ಆತನ ಸಹಚರರು ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಮುಖ್ಯಾಧಿಕಾರಿ ಅಭಯ್ ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಮುಖ್ಯಾಧಿಕಾರಿ ಡುಪ್ಲಿಕೇಟ್ ಬಿಲ್ ಮಾಡಿ ಕೊಡಲು ನಿರಾಕರಿಸಿದ್ದರಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುಖ್ಯಾಧಿಕಾರಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ. ಪುರಸಭೆ ಸದಸ್ಯ ಆನಂದ್ ಟೈಗರ್ ಹಾಗೂ ಶಶಿಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.
ಪುರಸಭೆ ಕಚೇರಿ ಆವರಣದಲ್ಲಿಯೇ ಸದಸ್ಯನೋರ್ವ ಅನುಚಿತವಾಗಿ ವರ್ತಿಸಿದ್ದಲ್ಲದೆ, ತನ್ನ ಅಕ್ರಮ ಚಟುವಟಿಕೆಗಳಿಗೆ ಸಹಕರಿಲಿಲ್ಲವೆಂದು ಹಲ್ಲೆ ಮಾಡಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಿಷ್ಠಾವಂತ ಅಧಿಕಾರಿಗಳಿಗೆ ಸೂಕ್ತ ಭದ್ರತೆಯೇ ಇಲ್ಲದಂತಾಗಿದೆ ಎಂಬ ಮಾತು ಕೇಳಿ ಬಂದಿದೆ. ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ರೀತಿಯ ಹಲ್ಲೆ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ರಾಜ್ಯ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ.
Published by:
HR Ramesh
First published:
January 20, 2021, 4:32 PM IST