ಮಂಡ್ಯ (ಜೂನ್ 07); ಬಾಲ್ಯ ವಿವಾಹ ಅಪರಾಧವೆಂಬ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಬಹುತೇಕ ಅಪ್ರಾಪ್ತರ ಮದುವೆಗಳಿಗೆ ಪೊಲೀಸರೇ ಪೌರೋಹಿತ್ಯ ವಹಿಸುತ್ತಿದ್ದಾರೆ.ಹೌದು! ಆಶ್ಚರ್ಯವೆನಿಸಿದರೂ ಸತ್ಯ ಇದು, ಬಾಲ್ಯವಿವಾಹ ತಡೆ ಕಾನೂನು ಪಾಲಿಸಬೇಕಾದ ಪೊಲೀಸರೇ,ಕಾನೂನು ಉಲ್ಲಂಘನೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಹೋಬಳಿ ಮಹದೇವಪುರ ಗ್ರಾಮದಲ್ಲಿ ನೆನ್ನೆ ರಾತ್ರೋ ರಾತ್ರಿ ನಡೆದ ಮೂವರು ಅಪ್ರಾಪ್ತರ ಮದುವೆಗಳೇ ಇದಕ್ಕೆ ತಾಜಾ ನಿದರ್ಶನವಾಗಿದೆ. ಮಹದೇವಪುರದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ, 7 ನೇ ತರಗತಿ ಓದುತ್ತಿದ್ದ ಸೌಮ್ಯ(ಹೆಸರು ಬದಲಾಯಿಸಲಾಗಿದೆ) ಮತ್ತು 9 ನೇ ತರಗತಿ ಓದುತ್ತಿದ್ದ ರಮ್ಯಾ (ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕಿಯರ ವಿವಾಹ ನಡೆಯುತ್ತಿದೆ ಅಂತಾ ಸಾರ್ವಜನಿಕರು ಮಕ್ಕಳ ರಕ್ಷಣಾ ಸಹಾಯವಾಣಿಗೆ ದೂರುನೀಡಿದ್ದರು.
ಸುದ್ದಿ ತಿಳಿದು ಮದುವೆ ಮನೆಗೆ ಭೇಟಿ ನೀಡಿದ ಶ್ರೀರಂಗಪಟ್ಟಣ ಮತ್ತು ಅರಕೆರೆ ಠಾಣಾ ಪೊಲೀಸರು ಪರಿಶೀಲಿಸಿದರು. ವಧುವಿನ ಅಪ್ಪ, ಅಮ್ಮಾ ಮತ್ತು ಹುಡುಗ ಹುಡುಗಿಯನ್ನು ರಾತ್ರಿ9 ಕ್ಕೆ ಠಾಣೆಗೆ ಕರೆದೊಯ್ದು ಬೆಳಗಾಗುವಷ್ಟರಲ್ಲಿ ವಧುವಿಗೆ ತಾಳಿ ಕಟ್ಟಿಸಿ ವರನ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಎರಡೂ ಮದುವೆಗಳ ಪೈಕಿ ಒಂದು ಹುಡುಗಿ ಕುಣಿಗಲ್ ಮೂಲದ ವರನ ಮನೆ ಕಡೆಗೆ ಮತ್ತೊಂದು ಮೈಸೂರು ಬಳಿಯ ರಮ್ಮನಹಳ್ಳಿಯ ವರನ ಮನೆಗೆ ಸೇಫಾಗಿ ಕಾರ್‌ನಲ್ಲಿ ಕಳುಹಿಸಿ ಕೊಡುವ ಕೆಲಸವನ್ನು ಅಚ್ಚುಕಟ್ಟಾಗಿ ಪೊಲೀಸರೇ ಮಾಡಿ ಮುಗಿಸಿದ್ದಾರೆ.
ಮದುವೆಗೂ ಮುನ್ನವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಹಾಜರ್, ಆದರೂ ಮದುವೆ ನಡೆದದ್ದು ಹೇಗೆ.?:
ಮದುವೆ ಹುಡುಗ-ಹುಡುಗಿಯನ್ನು ಕರೆದೊಯ್ಯುವ ವೇಳೆ ಮಂಡ್ಯದ ಮಕ್ಕಳ ಕಲ್ಯಾಣ ಸಮಿತಿಯವರು ಸ್ಥಳದಲ್ಲೇ ಹಾಜರಿದ್ದರು. ಗ್ರಾಮದಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಮಾಹಿತಿ ತಿಳಿದ ಕೂಡಲೇ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಆದರೂ, ದಿನ ಬೆಳಗಾಗುವಷ್ಟರಲ್ಲೇ ಹುಡುಗ - ಹುಡುಗಿಯರ ಮದುವೆಯಾಗಿ ಸುಸೂಕ್ತವಾಗಿ ಇಬ್ಬರೂ ವಧುಗಳು ವರನ ಮನೆ ಸೇರಿದ್ದಾರೆ. ಈ ಎರಡು ಬಾಲ್ಯವಿವಾಹ ಕಾರ್ಯಕ್ರಮಗಳು ತಮ್ಮ ಕಣ್ಣೇದುರಿಗೇ ನಡೆದರೂ ಮಕ್ಕಳ ಕಲ್ಯಾಣ ಸಮಿತಿ ಕಂಡರೂ ಕಾಣದಂತೆ ಮೌನಕ್ಕೆ ಶರಣಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಲ್ಲದೆ, ಅನೇಕ ಪ್ರಶ್ನೆಗಳಿಗೂ ಕಾರಣವಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಈವರೆಗೆ 30,000 ಮಕ್ಕಳು ಕೊರೋನಾದಿಂದಾಗಿ ಅನಾಥರಾಗಿದ್ದಾರೆ: ಸುಪ್ರೀಂಗೆ ಮಕ್ಕಳ ಆಯೋಗ ಮಾಹಿತಿ
ಇನ್ನೂ ಈ ಅಪ್ರಾಪ್ತ ಮದುವೆಗಳೆರಡಕ್ಕೂ ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯ ಮತ್ತು ಮುಖಂಡರೇ ನೇತೃತ್ವ ವಹಿಸಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತರ ಮದುವೆ ದೂರಿನ ಡೀಲ್ ಮುಗಿಸಿ ಬೆಳಗಾಗುವಷ್ಟರಲ್ಲೇ ಮದುವೆ ಕಾರ್ಯ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಾದ ಬಾಲ್ಯ ವಿವಾಹ:
ಇನ್ನು ಇದೇ ರೀತಿ ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್.ಪೇಟೆ, ಬಸರಾಳು, ಮದ್ದೂರು, ಮಳವಳ್ಳಿ ಸೇರಿದಂತೆ ಹಲವೆಡೆ ಬಾಲ್ಯ ವಿವಾಹಗಳು ಅವ್ಯಾಹತವಾಗಿ ನಡೆಯುತ್ತಿವೆ, ಲಾಕ್ ಡೌನ್ ಜಾರಿಗೊಂಡ ಬಳಿಕವಂತೂ ಅಪ್ರಾಪ್ತರ ಮದುವೆಗಳು ರಾತ್ರೋ ರಾತ್ರಿ ಎಗ್ಗಿಲ್ಲದೆ ನಡೆಯುತ್ತಿವೆ. ಒಟ್ಟಾರೆ ಮಂಡ್ಯದಲ್ಲಿ ಬಾಲ್ಯವಿವಾಹಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿಯೇ ಬಾಲ್ಯ ವಿವಾಹ ಮಾಡುವವರೊಂದಿಗೆ ಶಾಮೀಲಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ