ಚಾಮರಾಜನಗರ ಜಿಲ್ಲೆಯಲ್ಲಿ ನಿಂತಿಲ್ಲ ಬಾಲ್ಯ ವಿವಾಹ ; ಕೇವಲ ಐದು ತಿಂಗಳಲ್ಲಿ 33 ಬಾಲ್ಯ ವಿವಾಹಗಳಿಗೆ ತಡೆ

ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಕಳೆದ ಸಾಲಿನಲ್ಲಿ ಮೂರು ಎಫ್.ಆರ್. ಐ ದಾಖಲಿಸಲಾಗಿದೆ. ಈ ಸಾಲಿನಲ್ಲಿ ಒಂದು ಎಫ್.ಐ.ಆರ್ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ (ಅಕ್ಟೋಬರ್.16): ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಎಷ್ಟೆ ಅರಿವು ಮೂಡಿಸಿದರೂ ಬಾಲ್ಯವಿವಾಹಗಳು ನಿಂತಿಲ್ಲ, ಕದ್ದು ಮುಚ್ಚಿ ಬಾಲ್ಯವಿವಾಹಗಳು ನಡೆಯುತ್ತಲೇ ಇವೆ. ಹೀಗೆ ಬಾಲ್ಯದಲ್ಲೆ ವಿವಾಹವಾಗುವುದರಿಂದ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿಗೆ ಗರ್ಭಿಣಿಯಾಗಿ ನಾನಾ ರೀತಿಯ ಸಮಸ್ಯೆಗಳಿಗೆ ಸಿಲುಕುವ ಅಪಾಯವು ಎದುರಾಗಿದೆ. ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಹಲವಾರು ಅನಿಷ್ಟ ಪದ್ದತಿಗಳಲ್ಲಿ ಬಾಲ್ಯ ವಿವಾಹವೂ ಒಂದು. ಅದರಲ್ಲು ಇದು ಹೆಣ್ಣು ಮಕ್ಕಳ ಬದುಕಿಗೆ ಮಾರಕವಾಗಿ ಪರಿಣಿಮಿಸಿದೆ. ಸಾಮಾಜಿಕ  ಪಿಡುಗಾಗಿರುವ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಎಷ್ಟೆ ಅರಿವು ಮೂಡಿಸಿದರು ಬಾಲ್ಯ ವಿವಾಹಗಳು ಮಾತ್ರ ನಿಂತಿಲ್ಲ. ಅನಕ್ಷರತೆ, ಅರಿವಿನ ಕೊರತೆ, ತಮ್ಮ ಮಕ್ಕಳು ದಾರಿ ತಪ್ಪುವ ಭಯ ಹೀಗೆ ಹಲವಾರು ಕಾರಣಗಳಿಂದ ಪೋಷಕರು ಚಿಕ್ಕ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಬಿಡುತ್ತಿರುವುದು ಕಂಡುಬರುತ್ತಿದೆ. ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಕಳೆದ ಸಾಲಿನಲ್ಲಿ ಅಂದರೆ 2019ರ  ಏಪ್ರಿಲ್ ನಿಂದ  2020ರ ಮಾರ್ಚ್ ಅವಧಿಯಲ್ಲಿ 22 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿತ್ತು. ಆದರೆ, ಈ ವರ್ಷ ಅಂದರೆ 2020 ರ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಕೇವಲ ಐದೇ ತಿಂಗಳ ಅವಧಿಯಲ್ಲಿ 33 ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆಗಟ್ಟಿದ್ದಾರೆ.

ಇನ್ನು ಯಾರ ಗಮನಕ್ಕು ಬಾರದೆ ಅನಧಿಕೃತವಾಗಿ 90ಕ್ಕು ಹೆಚ್ಚು ಬಾಲ್ಯ ವಿವಾಹಗಳು ಈ  ಅವಧಿಯಲ್ಲಿ ನಡೆದು ಹೋಗಿರುವ ಸಾಧ್ಯತೆಗಳಿವೆ. ಅಧಿಕಾರಿಗಳ ತಂಡ ಬಾಲ್ಯವಿವಾಹ ತಡೆಗಟ್ಟಲು ಹೋದರೆ ವಿವಾಹವಾಗುವ ಮಕ್ಕಳನ್ನೆ ಬಚ್ಚಿಟ್ಟು ಅಧಿಕಾರಿಗಳು ಹೋದ ನಂತರ ಕದ್ದುಮುಚ್ಚಿ ವಿವಾಹ ಮಾಡುವ ಪ್ರಸಂಗಗಳು ನಡೆಯುತ್ತಿವೆ

ಕಳೆದ ಸಾಲಿನಲ್ಲಿ ಮೂರು ಎಫ್.ಆರ್. ಐ ದಾಖಲಿಸಲಾಗಿದೆ. ಈ ಸಾಲಿನಲ್ಲಿ ಒಂದು ಎಫ್.ಐ.ಆರ್ ದಾಖಲಿಸಲಾಗಿದೆ. ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಹಾಗು ಮಕ್ಕಳ ಹಕ್ಕುಗಳ ಬಗ್ಗೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂತೆ, ಜಾತ್ರೆ ಹಾಗು ಬಾಲ್ಯ ವಿವಾಹ ಹೆಚ್ಚಾಗಿ ಕಂಡುಬರುವ ಹಳ್ಳಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದರೂ ಎಲ್ಲರ ಕಣ್ತಪ್ಪಿಸಿ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು ಹೇಳುತ್ತಾರೆ.

ಹಿಂದುಳಿದ ಸಮುದಾಯಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ಕಂಡುಬರುತ್ತಿವೆ. ಬಾಲ್ಯವಿವಾಹ ತಪ್ಪು ಎಂಬ ಅರಿವಿದ್ದರೂ  ಸಂಪ್ರದಾಯದ ಹೆಸರಿಲ್ಲಿ ಬಾಲ್ಯ ವಿವಾಹ ಮಾಡಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಲಾಗುತ್ತಿದೆ.  ಬಾಲ್ಯದಲ್ಲೆ ವಿವಾಹವಾಗುವುದರಿಂದ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿಗೆ ಗರ್ಭಿಣಿಯಾಗುತ್ತಿರುವ ಅಘಾತಕಾರಿ ಬೆಳವಣಿಗೆಗಳು ಕಂಡು ಬರುತ್ತಿವೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಶೂಟೌಟ್; ಬನ್ನಂಜೆ ರಾಜ, ರವಿ ಪೂಜಾರಿ ಸಹಚರ ಮನೀಶ್ ಶೆಟ್ಟಿ ಹತ್ಯೆ

ಅಪ್ರಾಪ್ತ  ವಯಸ್ಸಿಗೆ ಗರ್ಭಿಣಿಯಾಗುತ್ತಿರುವುದರಿಂದ  ರಕ್ತಹೀನತೆ, ರಕ್ತಸ್ರಾವ,  ಅಪೌಷ್ಠಿಕತೆ, ಲೈಂಗಿಕ ರೋಗಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗು ಈ ಅಮಾಯಕ ಹೆಣ್ಣುಮಕ್ಕಳು ತುತ್ತಾಗುತ್ತಾರೆ. ಇವರಿಗೆ ಜನಿಸುವ ಮಕ್ಕಳು ಸಹ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತವೆ. ಅಪ್ರಾಪ್ತ ವಯಸ್ಸಿಗೆ ಗರ್ಭಿಣಿಯಾಗುವುದರಿಂದ ಹೆರಿಗೆ ಸಂದರ್ಭದಲ್ಲಿ ಸಾವನ್ನಪ್ಪುವ ಸಂದರ್ಭಗಳು ಉಂಟು ಎಂದು ಪ್ರಸೂತಿ ತಜ್ಷ ಡಾ.ಪ್ರದೀಪ್ ಹೇಳುತ್ತಾರೆ.

ಇದಕ್ಕೆಲ್ಲ  ಶಿಕ್ಷಣವೇ ಮದ್ದಾಗಿದೆ. ಎಲ್ಲಿಯವರೆಗೆ  ಅನಕ್ಷರತೆ ಇರುತ್ತೋ ಅಲ್ಲಿಯವರೆಗೂ ಇಂತಹ ಪಿಡುಗುಗಳು ಸಮಾಜವನ್ನು ಬಾಧಿಸುತ್ತಲೇ ಇರುತ್ತವೆ. ಆಯಾ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ತಮ್ಮದೇ ವೇದಿಕೆಗಳಲ್ಲಿ ಈ ಅನಿಷ್ಠ ಪದ್ದತಿಗಳಿಗೆ ಕೊನೆ ಹಾಡಲು ಜನರ ಮನವೊಲಿಸುವ ಕಾರ್ಯವನ್ನು ನಡೆಸಬೇಕಿದೆ.
Published by:G Hareeshkumar
First published: