HOME » NEWS » District » CHILD LABOR NUMBER INCREASED IN KODAGU DISTRICT AFTER LOCKDOWN RHHSN RSK

ಲಾಕ್ ಡೌನ್ ಬಳಿಕ ಕೊಡಗು ಜಿಲ್ಲೆಯಲ್ಲಿ ಹೆಚ್ಚಿದ ಬಾಲಕಾರ್ಮಿಕ ಪದ್ಧತಿ 

ಮೂರು ತಿಂಗಳಲ್ಲಿ ರಕ್ಷಣೆ ಮಾಡಿರುವ 6 ಬಾಲ ಕಾರ್ಮಿಕರ ಪೈಕಿ 5 ಬಾಲ ಕಾರ್ಮಿಕರು ಕಾಫಿ ತೋಟಗಳಲ್ಲಿಯೇ ದುಡಿಯುತ್ತಿದ್ದವರು, ಒಬ್ಬ ವಿದ್ಯಾರ್ಥಿ ಮನೆಯಲ್ಲಿ ದುಡಿಯುತ್ತಿದ್ದ. ಐದು ಮಕ್ಕಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಒಬ್ಬ ವಿದ್ಯಾರ್ಥಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

news18-kannada
Updated:June 23, 2021, 8:11 PM IST
ಲಾಕ್ ಡೌನ್ ಬಳಿಕ ಕೊಡಗು ಜಿಲ್ಲೆಯಲ್ಲಿ ಹೆಚ್ಚಿದ ಬಾಲಕಾರ್ಮಿಕ ಪದ್ಧತಿ 
ಪ್ರಾತಿನಿಧಿಕ ಚಿತ್ರ
  • Share this:
ಕೊಡಗು: ಕೋವಿಡ್ ಮಹಾಮಾರಿ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಲಕ್ಷಾಂತರ ಜನರ ಮೈಯೊಕ್ಕಿರುವ ಕೊರೋನಾ ಸೋಂಕನ್ನು ನಿಯಂತ್ರಿಸಲು ಸರ್ಕಾರವೇನೋ ಎರಡೆರಡು ಬಾರಿ ಲಾಕ್ ಡೌನ್ ಜಾರಿ ಮಾಡಿತ್ತು. ಇದೀಗ ಸೋಂಕಿನ ಪ್ರಮಾಣ ಕಡಿಮೆಯಾದ ಕಾರಣ ಅನ್​ಲಾಕ್​ ಪ್ರಕ್ರಿಯೆ ಆರಂಭಿಸಿದೆ. ಅಲ್ಲದೇ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಸೋಂಕಿನಿಂದ ಮಕ್ಕಳನ್ನು ಬಚಾವ್ ಮಾಡಲು ಶಾಲೆ ಕಾಲೇಜುಗಳನ್ನು ತೆರೆಯುವ ಗೋಜಿಗೆ ಇನ್ನೂ ಹೋಗಿಲ್ಲ.  ಹೀಗಾಗಿ ಎರಡು ವರ್ಷಗಳಿಂದ ಶಾಲೆಗಳ ಬಾಗಿಲು ತೆರೆದಿಲ್ಲ. ಶಾಲೆಗಳ ಮುಚ್ಚಿ ಆನ್‌ಲೈನ್ ತರಗತಿಗಳ ಮೂಲಕ ಕಲಿಸುತ್ತಿರುವುದಾಗಿ ಹೇಳುತ್ತಿರುವ ಸರ್ಕಾರ ಮಕ್ಕಳ ಸಮಸ್ಯೆಗಳೇನು?, ಅವರ ಪೋಷಕರ ಸ್ಥಿತಿಗತಿ ಏನು, ನಿಜವಾಗಿಯೂ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಭಾಗವಹಿಸುತಿದ್ದಾರಾ ಇದ್ಯಾವುದನ್ನೂ ಗಮನಹರಿಸಿದಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿ ಕಳೆದ ಮೂರೂವರೆ ತಿಂಗಳಲ್ಲಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ 6 ಬಾಲ ಕಾರ್ಮಿಕ ಪ್ರಕರಣಗಳೇ ಸಾಕ್ಷಿ.

ಹೌದು, ಶಾಲೆಗಳು ಇಲ್ಲದ ಪರಿಣಾಮ ಕೊಡಗಿನಲ್ಲಿ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗಿ ಮಾರ್ಪಾಡಾಗುತ್ತಿದ್ದಾರೆ. ಕಳೆದ 3 ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ 6 ಬಾಲ ಕಾರ್ಮಿಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಇವು ಇಲಾಖೆ ಅಧಿಕಾರಿಗಳು ರೈಡ್ ಮಾಡಿದ ಬಳಿಕ ಬೆಳಕಿಗೆ ಬಂದಿರುವ ಪ್ರಕರಣಗಳು. ಇನ್ನು ಬೆಳಕಿಗೆ ಬಾರದಿರುವ ಪ್ರಕರಣಗಳು ಸಾಕಷ್ಟು ಇವೆ. ಕೊಡಗಿನಲ್ಲಿ ಬುಡಕಟ್ಟು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಬಾಲಕಾರ್ಮಿಕರಾಗಿ ಕಾಫಿ ತೋಟಗಳಲ್ಲಿ ದುಡಿಯಲು ಹೋಗುತ್ತಿದ್ದಾರೆ. ಎಷ್ಟೋ ಪೋಷಕರೇ ತಮ್ಮೊಂದಿಗೆ ತೋಟಗಳಿಗೆ ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ ಎನ್ನುತ್ತಾರೆ. ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ರಕ್ಷಣಾ ಘಟಕಗಳ ಸಿಬ್ಬಂದಿ ಆತಂಕದ ಮಾಹಿತಿ ನೀಡಿದ್ದಾರೆ. ಮೊದಲ ಬಾರಿಗೆ ಲಾಕ್ ಡೌನ್ ಆದಾಗ ಅಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಬಾಲ ಕಾರ್ಮಿಕರಾಗಿರಲಿಲ್ಲ. ಆದರೆ ಎರಡನೇ ಲಾಕ್ ಡೌನ್ ಬಳಿಕ ಬಾಲ ಕಾರ್ಮಿಕರಾಗುವವರ ಸಂಖ್ಯೆ ಹೆಚ್ಚು. ಮಕ್ಕಳಿಗಾದರೆ ಕಡಿಮೆ ಸಂಬಳ ನೀಡಿ ದುಡಿಸಿಕೊಳ್ಳಬಹುದು ಎಂಬ ದುರುದ್ದೇಶದಿಂದ ಮಕ್ಕಳನ್ನು ಕಾರ್ಮಿಕರಾಗಿ ದುಡಿಸಿಕೊಳ್ಳುತ್ತಿದ್ದಾರೆ ಎನ್ನೋದು ಬಾಲ ನ್ಯಾಯ ಮಂಡಳಿ ಸದಸ್ಯ ಲತೀಫ್ ಅವರ ಅಭಿಪ್ರಾಯ.

ಬಹುತೇಕ ಸ್ಥಳೀಯ ವಿದ್ಯಾರ್ಥಿಗಳು ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆರ್ಥಿಕವಾಗಿ ತೀರಾ ಕೆಳಮಟ್ಟದಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಹಣದ ಆಮಿಷ ತೋರಿಸಿ ಕಡಿಮೆ ಕೂಲಿಗೆ ತೋಟದ ಮಾಲೀಕರು ದುಡಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: ಎಂಟಿಬಿಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ; ತನ್ನ ಅಭ್ಯಂತರವಿಲ್ಲ ಎಂದು ಸಿಎಂಗೆ ಪತ್ರ ಬರೆದ ಆರ್. ಅಶೋಕ್

ಒಟ್ಟು ಕಳೆದ ಮೂರು ತಿಂಗಳಲ್ಲಿ ರಕ್ಷಣೆ ಮಾಡಿರುವ 6 ಬಾಲ ಕಾರ್ಮಿಕರ ಪೈಕಿ 5 ಬಾಲ ಕಾರ್ಮಿಕರು ಕಾಫಿ ತೋಟಗಳಲ್ಲಿಯೇ ದುಡಿಯುತ್ತಿದ್ದವರು, ಒಬ್ಬ ವಿದ್ಯಾರ್ಥಿ ಮನೆಯಲ್ಲಿ ದುಡಿಯುತ್ತಿದ್ದ. ಐದು ಮಕ್ಕಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಒಬ್ಬ ವಿದ್ಯಾರ್ಥಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಿಸಿರುವ ಅಷ್ಟು ವಿದ್ಯಾರ್ಥಿಗಳನ್ನು ಸದ್ಯ ರಿಮ್ಯಾಂಡ್ ಹೋಂಗಳಲ್ಲಿ ಇರಿಸಲಾಗಿದೆ. ಆರು ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ. ಇನ್ನು ವಿದ್ಯಾರ್ಥಿಗಳ ಪೋಷಕರು ಇದ್ದಾರೆಯೇ ಅಂತ ಪರಿಶೀಲಿಸಲಾಗುತ್ತಿದೆ ಎಂದು ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಹೇಳಿದ್ದಾರೆ.
Youtube Video

ನ್ಯೂಸ್​​​ 18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: HR Ramesh
First published: June 23, 2021, 8:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories