HOME » NEWS » District » CHILD DEATH AT KALBURGI PRISON OPPOSITION LEADERS DEMAND SACKING OF PSI SAKLB SNVS

ಕಲಬುರ್ಗಿ ಕಾರಾಗೃಹದಲ್ಲಿ ಮಗು ಸಾವು ಪ್ರಕರಣ – ಪಿಎಸ್​ಐ ವಜಾಕ್ಕೆ ಒತ್ತಾಯಿಸಿ ಶವ ಇಟ್ಟು ಪ್ರತಿಭಟನೆ

ಕಲಬುರ್ಗಿಯ ಗ್ರಾ.ಪಂ. ಚುನಾವಣೆ ವೇಳೆ ಸೋತ ಅಭ್ಯರ್ಥಿಗಳ ಮೇಲೆ ಗೆದ್ದ ಅಭ್ಯರ್ಥಿಗಳಿಂದ ಹಲ್ಲೆ ನಡೆದ ಘಟನೆಯಲ್ಲಿ ಹಲ್ಲೆಗೊಳಗಾದವರನ್ನೇ ಪೊಲೀಸರು ಲಾಕಪ್​ಗೆ ಹಾಕಿದ್ದಾರೆ. ಈ ವೇಳೆ ಮೂರು ವರ್ಷದ ಹೆಣ್ಣುಮಗು ಸಾವನಪ್ಪಿದೆ. ಇದು ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

news18-kannada
Updated:January 3, 2021, 6:38 PM IST
ಕಲಬುರ್ಗಿ ಕಾರಾಗೃಹದಲ್ಲಿ ಮಗು ಸಾವು ಪ್ರಕರಣ – ಪಿಎಸ್​ಐ ವಜಾಕ್ಕೆ ಒತ್ತಾಯಿಸಿ ಶವ ಇಟ್ಟು ಪ್ರತಿಭಟನೆ
ಕಾಂಗ್ರೆಸ್ ಮುಖಂಡ ಅಜಯ್ ಸಿಂಗ್
  • Share this:
ಕಲಬುರ್ಗಿ(ಜ. 03): ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಮೂರು ವರ್ಷ ಬಾಲಕಿ ಸಾವು ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿದೆ. ಬಾಲಕಿ ಸಾವು ಪ್ರಕರಣಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆ ಖಂಡಿಸಿ ಕಲಬುರ್ಗಿಯಲ್ಲಿ ರಸ್ತೆಯಲ್ಲಿ ಮಗುವಿನ ಶವ ಇಟ್ಟು ಪ್ರತಿಭಟಿಸಲಾಯಿತು. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ಸೇರಿ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ಪಿ.ಎಸ್.ಐ. ಮಂಜುನಾಥ ಹೂಗಾರ್ ವಜಾಕ್ಕೆ ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಎಸ್.ಪಿ. ಯೇ ಬಂದು ಮನವೊಲಿಕೆಗೆ ಯತ್ನಿಸಿದರೂ ಹೋರಾಟಗಾರರು ಪಟ್ಟು ಬಿಡಲಿಲ್ಲ. 

ಏನಿದು ಘಟನೆ?: ಜೇವರ್ಗಿ ತಾಲೂಕಿನ ಜೈನಾಪುರದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಸೋತ ಅಭ್ಯರ್ಥಿಗಳ ಮೇಲೆ ಹಲ್ಲೆ ಎಸಗಿದ ಪ್ರಕರಣ ವಿಕೋಪಕ್ಕೆ ಹೋಗಿದೆ. ಹಲ್ಲೆ ಮಾಡಿದವರೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಲ್ಲೆಗೆ ಒಳಗಾದವರನ್ನು ಬಂಧಿಸಿ ಲಾಕಪ್​ಗೆ ಹಾಕಲಾಗಿದೆ. ಸಂತೋಷ್ ಮತ್ತು ಆತನ ಕುಟುಂಬದ ಸದಸ್ಯರನ್ನು ಬಂಧಿಸಲಾಗಿದೆ. ಈ ವೇಳೆ ತಾಯಂದಿರ ಜೊತೆ ಕರೆದೊಯ್ಯಲಾದ ಮೂವರು ಮಕ್ಕಳ ಪೈಕಿ ಮೂರು ವರ್ಷದ ಭಾರತಿ ಸಾವನಪ್ಪಿರೋದು ವಿವಾದಕ್ಕೆ ಕಾರಣವಾಗಿದೆ.

ಮಗುವಿನ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಜೈನಾಪುರ ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಬಾಲಕಿಯ ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಕಲಬುರ್ಗಿಯ ಎಸ್.ಪಿ. ಕಛೇರಿಗೆ ಶವ ಒಯ್ಯಲು ಯತ್ನಿಸಿದಾಗ ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಪೊಲೀಸ್ ಭವನಕ್ಕೆ ಹೋಗೋ ಮಾರ್ಗ ಮಧ್ಯದಲ್ಲಿ ಜಿಮ್ಸ್ ಆಸ್ಪತ್ರೆ ಬಳಿ ರಸ್ತೆಯ ಮೇಲೆ ಶವ ಇಟ್ಟು ಪ್ರತಿಭಟನೆ ನಡೆಸಲಾಯಿತು. ದೊಡ್ಡವರನ್ನು ಬಂಧಿಸಿದ ವೇಳೆ ಮಕ್ಕಳನ್ನೂ ಕರೆದೊಯ್ಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ. ಈ ವೇಳೆ ಮಗುವಿಗೂ ಪೆಟ್ಟು ಬಿದ್ದಿದ್ದು, ಆಕೆ ಕೇಂದ್ರ ಕಾರಾಗೃಹದಲ್ಲಿ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಮನಿವಾದ ಅನುಸರಿಸುತ್ತಿರುವ ಬಿಜೆಪಿಗರೆಲ್ಲರೂ ಡೋಂಗಿಗಳೇ; ರಾಮಲಿಂಗಾ ರೆಡ್ಡಿ ವಾಗ್ದಾಳಿ

ಮಗುವಿನ ಸಾವನ್ನು ಕೊಲೆ ಎಂದು ಪರಿಗಣಿಸಬೇಕು. ಪಿ.ಎಸ್.ಐ. ಮಂಜುನಾಥ ಹೂಗಾರನ ವಜಾಗೊಳಿಸುವಂತೆ ಜೇವರ್ಗಿ ತಾಲೂಕಿನ ಮುಖಂಡ ಶೌಕತ್ ಅಲಿ ಆಲೂರ ಆಗ್ರಹಿಸಿದ್ದಾರೆ. ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದ್ದು, ಘಟನಾ ಸ್ಥಳಕ್ಕೆ ಜೇವರ್ಗಿ ಶಾಸಕ, ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ಭೇಟಿ ನೀಡಿದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್, ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಮನವೊಲಿಕೆಗೆ ಬಗ್ಗದ ಹೋರಾಟಗಾರರು ಪಿ.ಎಸ್.ಐ. ವಜಾಗೊಳಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಅಜಯ್ ಸಿಂಗ್, ಪಿ.ಎಸ್.ಐ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತೋಶ್ ಮೇಲೆ ಮೊದಲಿನಿಂದಲೂ ಪಿ.ಎಸ್.ಐ. ಹೂಗಾರ ವೈರತ್ವವಿದೆ. ಅದೇ ಕಾರಣಕ್ಕಾಗಿ ಸಂತೋಷ್ ಜೊತೆ ಅವರ ಮನೆಯಲ್ಲಿದ್ದ ಮಹಿಳೆಯರನ್ನೂ ಬಂಧಿಸಿದ್ದಾನೆ. ನಾನೇ ಖುದ್ದು ಫೋನ್ ಮಾಡಿ ಪುರುಷರನ್ನು ಬೇಕಿದ್ದರೆ ಬಂಧಿಸಿ. ಆದ್ರೆ ಅಮಾಯಕ ಮಹಿಳೆಯರನ್ನು ಬಂಧಿಸಬೇಡಿ ಎಂದಿದ್ದೆ. ನಾನು ಎಷ್ಟು ಬಾರಿ ದೂರವಾಣಿ ಕರೆ ಮಾಡಿ ಹೇಳಿದ್ದರೂ ಕೇಳದೆ ಪಿ.ಎಸ್.ಐ. ಉದ್ಧಟತನ ತೋರಿದ್ದಾರೆ. ಮಹಿಳೆಯರನ್ನು ಬಂಧಿಸೋ ಜೊತೆಗೆ ಮಕ್ಕಳನ್ನೂ ಕರೆದೊಯ್ದೋ ಅವಶ್ಯಕತೆ ಇರಲಿಲ್ಲ. ಮಗುವಿಗೆ ಆರೋಗ್ಯ ಸರಿಯಿಲ್ಲವೆಂದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋ ಸೌಜನ್ಯ ತೋರಿಲ್ಲ. ಇದೀಗ ಅಮಾಯಕ ಮಗು ಸಾವನ್ನಪ್ಪಿದ್ದು, ಮಗು ಸಾವಿಗೆ ಪಿ.ಎಸ್.ಐ. ಹೂಗಾರ ಕಾರಣ. ಕೂಡಲೇ ಮಂಜುನಾಥ ಹೂಗಾರರನ್ನು ವಜಾಗೊಳಿಸಬೇಕು.ಮೃತ ಮಗುವಿನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಅಜಯಸಿಂಗ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಎಫ್ಐಆರ್ಪೊಲೀಸರು ಮತ್ತು ಹೋರಾಟಗಾರರ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ರಾತ್ರಿಯಾದರೂ ಪಟ್ಟು ಬಿಡದೆ ರಸ್ತೆಯ ಮೇಲೆ ಕುಳಿತು ಹೋರಾಟ ಮುಂದುವರೆಸಿದ್ದಾರೆ. ಜೇವರ್ಗಿ ತಾಲೂಕಿನ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ತಿಕ್ಕಾಟಕ್ಕೆ ಮಗುವಿನ ಶವ ದಾಳವಾಗಿ ಪರಿಣಮಿಸಿದೆ. ಬಹುತೇಕ ಕಾಂಗ್ರೆಸ್ ನಾಯಕರು ಹೋರಾಟದಲ್ಲಿ ಭಾಗಿಯಾಗಿದ್ದು, ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ತಿರೋ ಪಿ.ಎಸ್.ಐ. ವಿರುದ್ಧ ಕ್ರಮಕ್ಕೆ ಒಕ್ಕೂರಲಿನಿಂದ ಆಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ವರದಿ: ಶಿವರಾಮ ಅಸುಂಡಿ
Published by: Vijayasarthy SN
First published: January 3, 2021, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories