ಬೆಂಗಳೂರಿಗೆ ಕಂಟಕವಾಗಿದೆ ಚಿಕ್ಕಪೇಟೆ; ಲೆಕ್ಕವಿಲ್ಲದಷ್ಟು ಜನರಿಗೆ ಸೋಂಕು ಹಬ್ಬಿಸುತ್ತಿದೆಯಾ ಈ ಕಮರ್ಷಿಯಲ್ ಏರಿಯಾ?

ಚಿಕ್ಕಪೇಟೆ, ಮಾಮೂಲ್ ಪೇಟೆ, ತಿಗಳರ ಪೇಟೆ, ಕಿಲಾರಿ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೆ ಬಂದು ಹೋದವರಲ್ಲಿ ಸಾಕಷ್ಟು ಜನರಿಗೆ ಕೊರೋನಾ ಸೋಂಕು ಇದ್ದಿರಬಹುದು ಎಂದು ಬಿಬಿಎಂಪಿ ಅಂದಾಜಿಸಿದೆ.

news18-kannada
Updated:July 10, 2020, 2:46 PM IST
ಬೆಂಗಳೂರಿಗೆ ಕಂಟಕವಾಗಿದೆ ಚಿಕ್ಕಪೇಟೆ; ಲೆಕ್ಕವಿಲ್ಲದಷ್ಟು ಜನರಿಗೆ ಸೋಂಕು ಹಬ್ಬಿಸುತ್ತಿದೆಯಾ ಈ ಕಮರ್ಷಿಯಲ್ ಏರಿಯಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ರಾಜ್ಯ ರಾಜಧಾನಿಗೆ ಕೊರೋನಾ ಕಾಲಿಟ್ಟ ಆರಂಭದ ದಿನಗಳಲ್ಲಿ ಪಾದರಾಯನಪುರ, ಶಿವಾಜಿನಗರ ಮತ್ತು ಹೊಂಗಸಂದ್ರ ಪ್ರದೇಶಗಳು ದೊಡ್ಡ ತಲೆನೋವಾಗಿ ಕಾಡಿದ್ದವು. ಬೆಂಗಳೂರಿನ ಆಡಳಿತ ಹೈರಾಣಾಗಿ ಹೋಗಿತ್ತು. ಈಗ ಇವೆಲ್ಲಕ್ಕಿಂತ ಅತಿ ಹೆಚ್ಚು ಕಾಡುತ್ತಿರುವುದು ಚಿಕ್ಕಪೇಟೆ. ನಗರದ ಪ್ರಮುಖ ವಾಣಿಜ್ಯ ಪ್ರದೇಶದ ಭಾಗವಾಗಿರುವ ಚಿಕ್ಕಪೇಟೆ ಈಗ ದೊಡ್ಡ ಹಾಟ್​ಸ್ಪಾಟ್ ಆಗಿದೆ. ಚಿಕ್ಕಪೇಟೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶದಲ್ಲಿ ಜನರನ್ನು ಕೊರೋನ ವೈರಸ್ ಎಡಬಿಡದೆ ಕಾಡುತ್ತಿದೆ.

ರಾಜಧಾನಿ ಬೆಂಗಳೂರಿನ ಅತಿ ಜನದಟ್ಟಣೆ ಹಾಗೂ ವ್ಯಾಪಾರ ಕೇಂದ್ರಿತ ಪ್ರದೇಶಗಳಲ್ಲಿ ಚಿಕ್ಕಪೇಟೆ ಕೂಡ ಒಂದು. ಜೂನ್ 21 ರಂದು ಇಲ್ಲಿ ಸ್ಫೋಟವಾದ ಕೊರೋನಾ ಈ ಕ್ಷಣದವರೆಗೂ ಕೊಡ 200 ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಲು ಕಾರಣವಾಗಿದೆ. ವ್ಯಾಪಾರ ಕೇಂದ್ರಿತ ಪ್ರದೇಶವಾಗಿರುವುದರಿಂದ ಸಹಜವಾಗಿಯೇ ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಸಾಕಷ್ಟು ಜನ ಇಲ್ಲಿಗೆ ಬಂದು ಹೋಗುತ್ತಿದ್ದರು. ಆದರೆ ಕೊರೋನಾ ತನ್ನ ವಿಧ್ವಂಸಕತೆಯನ್ನು ಮೆರೆಯಲು ಆರಂಭಿಸಿದ ಸಂದರ್ಭದಲ್ಲಿ ಈ ಪ್ರದೇಶಗಳಿಂದ ಬಂದಂತಹ ಜನರಿಂದಲೇ ಕೊರೋನಾ ವ್ಯಾಪಕವಾಗಿ ಹರಡಿದೆ ಎನ್ನುವಂಥ ಅನುಮಾನಗಳನ್ನು ಸರ್ಕಾರವೇ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಸಿಎಂ ಗೃಹ ಕಚೇರಿಯಲ್ಲಿ ಕೊರೋನಾ ಪತ್ತೆ; ಇಂದಿನಿಂದ ಕೆಲವು ದಿನ ಸಿಎಂ ಯಡಿಯೂರಪ್ಪ ಮನೆಯಿಂದಲೇ ಕೆಲಸ

ಸೀರೆ, ಸಿದ್ಧ ಉಡುಪು ಹಾಗೂ ಬಂಗಾರದ ಉದ್ಯಮಕ್ಕೆ ಚಿಕ್ಕಪೇಟೆ ಬಹಳ ಹೆಸರುವಾಸಿ. ಈ ಒಂದು ಪ್ರದೇಶವೇ ತನ್ನ ವಹಿವಾಟಿನ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ಪ್ರತಿ ತಿಂಗಳು ನೂರು ಕೋಟಿಯಷ್ಟು ಹೆಚ್ಚಿನ ಹಣವನ್ನು ಸಂದಾಯ ಮಾಡುತ್ತದೆ ಎಂದರೆ ನೀವು ನಂಬುವುದು ಕಷ್ಟ. ಇದು ಎಷ್ಟರಮಟ್ಟಿಗೆ ಸಂತೋಷದ ವಿಷಯವೋ ಕೊರೋನಾ ಸಾಂಕ್ರಾಮಿಕತೆ ಹರಡಲು ಕಾರಣವಾಯಿತೆನ್ನುವುದು ಅಷ್ಟೇ ದುರಂತದ ವಿಷಯ. ವ್ಯಾಪಾರ ಕೇಂದ್ರಿತ ಪ್ರದೇಶವಾಗಿರುವುದರಿಂದ ದಿನಕ್ಕೆ ಲಕ್ಷಾಂತರ ಜನ ಈ ಚಿಕ್ಕಪೇಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಬಂದು ವ್ಯಾಪಾರ ಮಾಡಿಕೊಂಡು ಹೋಗುತ್ತಾರೆ.ಹಾಗೆ ಬಂದವರಲ್ಲಿ ಎಷ್ಟು ಆರೋಗ್ಯವಂತರೋ, ಅದೆಷ್ಟು ಸೋಂಕಿತರೋ ಪತ್ತೆ ಮಾಡಲು ಸಾಧ್ಯವಿಲ್ಲ. ಸಾಮೂಹಿಕವಾಗಿ ಬೆರೆಯುವ  ಸಂದರ್ಭದಲ್ಲೇ ಕೊರೋನಾ ಸೋಂಕು  ಪರಸ್ಪರರಲ್ಲಿ ಹರಡಿರುವ ಸಾಧ್ಯತೆಗಳಿವೆ.

ಚಿಕ್ಕಪೇಟೆ, ಮಾಮೂಲ್ ಪೇಟೆ, ತಿಗಳರ ಪೇಟೆ, ಕಿಲಾರಿ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೆ ಬಂದು ಹೋದವರಲ್ಲಿ ಸಾಕಷ್ಟು ಜನರಿಗೆ ಕೊರೋನಾ ಸೋಂಕು ಇದ್ದಿರಬಹುದು ಎಂದು ಬಿಬಿಎಂಪಿ ಅಂದಾಜಿಸಿದೆ. ಸೋಂಕಿನಿಂದ ದೂರವಿರಲು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬಿಬಿಎಂಪಿ ಸೂಚಿಸಿದ್ದರೂ, ಅದಕ್ಕೆ ಆದ್ಯತೆ ನೀಡದಿರುವುದೇ ಸೋಂಕು ವ್ಯಾಪಿಸಲು ಕಾರಣವಾಯಿತೆನ್ನುವುದನ್ನು ಎಲ್ಲೋ ಒಂದೆಡೆ ಒಪ್ಪಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಬಿ.ಎಸ್. ಯಡಿಯೂರಪ್ಪಗೂ ಕೊರೋನಾ ಭೀತಿ; ಸಿಎಂ ಮನೆ, ಗೃಹ ಕಚೇರಿಯ 10 ಸಿಬ್ಬಂದಿಗೆ ಸೋಂಕು ಪತ್ತೆ

ಚಿಕ್ಕಪೇಟೆಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಾದ ಕಾರಣಕ್ಕೆ ಬಿಬಿಎಂಪಿ ಚಿಕ್ಕಪೇಟೆ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸೀಲ್ ಡೌನ್ ಮಾಡುವ ನಿರ್ಧಾರ ಕೈಗೊಂಡಿತ್ತು. ನಂತರ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸ್ವತಃ ವ್ಯಾಪಾರಸ್ಥರೇ ಸ್ವಯಂ ಲಾಕ್​ಡೌನ್ ಹೇರಿಕೊಂಡಿದ್ದನ್ನು ನೋಡಿದ್ದೇವೆ. ಆದರೂ ವ್ಯಾಪಾರಸ್ಥರು ಲಾಭಕ್ಕಾಗಿ ಸುರಕ್ಷತೆ ನಿರ್ಲಕ್ಷ್ಯಿಸಿದ್ದರಿಂದಲೇ ಸೋಂಕು ಹೆಚ್ಚಾಗಲು ಕಾರಣವಾಯಿತೆನ್ನುತ್ತಾರೆ ಮಾಜಿ ಕಾರ್ಪೊರೇಟರ್ ಎಲ್. ಶಿವಕುಮಾರ್.

ಚಿಕ್ಕಪೇಟೆ ವ್ಯಾಪ್ತಿಯಲ್ಲಿ ಕೊರೋನದ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವುದರಿಂದ ಈ ಗಂಭೀರ ಸಮಸ್ಯೆಗೆ ಹೇಗೆ ಕಡಿವಾಣ ಹಾಕಬೇಕು ಎನ್ನುವುದು ಈಗ ದೊಡ್ಡ ಪ್ರಶ್ನೆ. ಬಿಬಿಎಂಪಿ ಈ ನಿಟ್ಟಿನಲ್ಲಿ ಏನೇ ಪ್ರಯತ್ನಗಳನ್ನು ಮಾಡಿದರೂ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ  ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮಸ್ಯೆ ಹೀಗೆಯೇ ಇರುತ್ತೆ. ಚಿಕ್ಕಪೇಟೆಯಿಂದ ವೈರಸ್ ಬೇರೆ ಏರಿಯಾಗಳಿಗೂ ವ್ಯಾಪಿಸುವ ಆತಂಕ ಇದ್ದೇ ಇದೆ.
Published by: Vijayasarthy SN
First published: July 10, 2020, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading