ಚಿಕ್ಕಮಗಳೂರು (ನವೆಂಬರ್ 20): ಬಗರ್ ಹುಗುಂ ಜಾಗದ ಉಮೇದುವಾರಿಕೆಗಾಗಿ ಎರಡು ಗುಂಪುಗಳ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆಸಿ, ಪಿಡಿಓ ಕಾರಿಗೆ ಬೆಂಕಿ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಸವಾಪುರ ಗ್ರಾಮದಲ್ಲಿ ನಡೆದಿದೆ. ಬಸವಾಪುರ ಗ್ರಾಮದ ಸವೇ ನಂಬರ್ 41 (ಪಿ 1) ನಾಲ್ಕುವರೆ ಎಕರೆ ಜಮೀನಿಗಾಗಿ ಎರಡು ಪಂಗಡದ ಜನ ಅರ್ಜಿ ಹಾಕಿದ್ದರು. ಸರ್ಕಾರಿ ಜಾಗವಾಗಿದ್ದರಿಂದ ಜಮೀನು ಯಾರ ಹೆಸರಿಗೂ ಮಂಜೂರು ಆಗಿರಲಿಲ್ಲ. ಆದರೆ, ಬಗರ್ ಹುಕ್ಕುಂ ಜಾಗಕ್ಕಾಗಿ ಅರ್ಜಿ ಹಾಕಿದ್ದ ಕಲ್ಲೇಶ್ ಎಂಬುವರು ಇದೇ ಜಾಗವನ್ನ ಮಂಜುನಾಥ್ ಹಾಗೂ ಅಣ್ಣಪ್ಪ ಎಂಬುವರಿಗೆ ರಾಗಿ ಬೆಳೆಯಲು ಗುತ್ತಿಗೆ ನೀಡಿದ್ದರು. ಅವರು ರಾಗಿ ಕೂಡ ಬೆಳೆದು ಕೊಯ್ಲಿಗೂ ಬಂದಿತ್ತು. ಆದರೆ, ಇದೇ ಜಮೀನಿಗೆ ಅರ್ಜಿ ಹಾಕಿದ್ದ ಪಿಡಿಓ ಹನುಮಂತಪ್ಪ ರಾಗಿ ಕೊಯ್ಯುವ ಯಂತ್ರ ತಂದು ರಾಗಿ ಕೊಯ್ದಿದ್ದಾರೆ. ಈ ವೇಳೆ ಪಿಡಿಓ ಹನುಮಂತಪ್ಪ, ಕಲ್ಲೇಶ, ತಿಪ್ಪೇಶ್, ಮಂಜುನಾಥ್ ಹಾಗೂ ಅಣ್ಣಪ್ಪ ಎಂಬುವರಿಗೆ ಜಮೀನಿನಲ್ಲೇ ಮಾರಾಮಾರಿ ನಡೆದಿದೆ.
ಒಬ್ಬರ ಮೇಲೊಬ್ಬರು ಕಲ್ಲು ತೂರಿದ್ದಾರೆ. ಹೊಡೆದಾಡಿದ್ದಾರೆ. ಈ ವೇಳೆ, ಶಿವಮೊಗ್ಗದ ಜಿಲ್ಲೆ ಭದ್ರಾವತಿ ತಾಲೂಕಿನಿಂದ ಹೆಂಡತಿ ಊರಿಗೆ ಬಂದಿದ ಪಿಡಿಓ ಹನುಮಂತಪ್ಪ ಎಂಬುವರ ಓಮಿನಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಪತ್ನಿ ಊರಿಗೆ ಬಂದ ಪಿಡಿಓ ಹನುಮಂತಪ್ಪ ಸರ್ಕಾರದಿಂದ ಮಂಜೂರಾಗದ ಜಮೀನಿಗೆ ಕಣ್ಣಿಟ್ಟಿದ್ದ, ಇದು ಉಳಿದವರ ಆಕ್ರೋಶಕ್ಕೆ ಕಾರಣವಾಗಿತ್ತು.
ಆಗ ಅದೇ ಸ್ಥಳದಲ್ಲಿದ್ದ ಪಿಡಿಓ ಓಮಿನಿ ಕಾರಿಗೆ ಆಕ್ರೋಶಿತರು ಬೆಂಕಿ ಹಾಕಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಓಮಿನಿ ಕಾರು ಹೊತ್ತು ಉರಿದಿದೆ. ಆದರೆ, ಓಮಿನಿ ಕಾರಿಗೆ ಬೆಂಕಿ ಹಾಕಿದವರು ಯಾರೆಂದು ಯಾರಿಗೂ ಗೊತ್ತಿಲ್ಲ. ಒಬ್ಬರ ಮೇಲೊಬ್ಬರು ಆರೋಪಿಸುತ್ತಿದ್ದಾರೆ. ಅಷ್ಟೆ ಅಲ್ಲದೆ, ಈ ಜಮೀನಿ ಪ್ರಕರಣ ಫೈಲ್ ತಾಲೂಕು ಅಧಿಕಾರಿಗಳ ಬಳಿ ಇದ್ದು ಜಮೀನು ಯಾರಿಗೂ ಮಂಜೂರಾಗಿಲ್ಲ.
ಆದರೆ, ಈಗಾಗಲೇ ಕಳೆದ ಆರು ತಿಂಗಳಲ್ಲಿ ನಾಲ್ಕೈದು ಬಾರಿ ಜಗಳ ನಡೆದಿದ್ದು, ಜಮೀನಿನ ಮಾಲೀಕತ್ವಕ್ಕಾಗಿ ಆಗ್ಗಾಗ್ಗೆ ನಡೆಯುತ್ತಲೇ ಇದ್ದ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಹೀಗಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಎಸ್ಪಿ ಅಕ್ಷಯ್ ಸ್ಥಳ ಪರಿಶೀಲನೆ ನಡೆಸಿ ತಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುಂತೆ ಆದೇಸಿದ್ದಾರೆ. ಘಟನೆ ಸಂಬಂಧ ಅಜ್ಜಂಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು 11 ಜನರನ್ನ ಬಂಧಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಪ್ರಕರಣ ಸಂಬಂಧ 3 ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಎರಡು ಗುಂಪಿನ 11 ಜನರ ಬಂಧನವಾಗಿದ್ದು ಗ್ರಾಮದಲ್ಲಿ ಸದ್ಯ ಶಾಂತಿಯುತ ವಾತಾವರಣ ಇದೆ ಎಂದರು. ಇನ್ನು ಇದು ಜಾತಿ ವಿಚಾರವಾಗಿ ಜಗಳವಾಗಿಲ್ಲ, ಆಸ್ತಿ ವಿಚಾರವಾಗಿ ಜಗಳವಾಗಿದೆ, ಪೊಲೀಸರು ಘಟನೆ ತಿಳಿದ ಬಳಿಕ ಸ್ಥಳಕ್ಕೆ ಧಾವಿಸಿದ ಪರಿಣಾಮ ದೊಡ್ಡ ಸಂಘರ್ಷ ತಪ್ಪಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ