Chikmagaluru: ಕಾಫಿನಾಡಿನ ನಗರಸಭೆ ಗದ್ದುಗೆ ಯಾರಿಗೆ..? ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿಗೆ ಅಧಿಕಾರ ದಕ್ಕುತ್ತಾ?

ಎಂಎಲ್ಸಿ ಚುನಾವಣೆಯಿಂದ ಪಾಠ ಕಲಿತಿರುವ ಬಿಜೆಪಿ, ನಗರಸಭೆಯ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು.

ಬಿಜೆಪಿ

ಬಿಜೆಪಿ

  • Share this:
ಚಿಕ್ಕಮಗಳೂರು(ಡಿ.30): ಕಾಫಿನಾಡಿನ ನಗರಸಭೆ ಗದ್ದುಗೆ ಯಾರಿಗೆ..?ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ(BJP) ಅಧಿಕಾರದ ಗದ್ದುಗೆ ಏರುತ್ತಾ..? ಎಂಎಲ್ಸಿ ಚುನಾವಣೆ(MLC Election)ಯಲ್ಲಿ ಕೂದಲೆಳೆ ಅಂತರದಲ್ಲಿ ಮಣ್ಣುಮುಕ್ಕಿದ ಕೈ ಪಡೆ, ನಗರಸಭೆ ಮೈ ಕೊಡವಿ ಏಳುತ್ತಾ..? ಹೌದು,  ಭಾರೀ ಕುತೂಹಲ ಕೆರಳಿಸಿರುವ ಕಾಫಿನಾಡಿನ ನಗರಸಭೆ ಫಲಿತಾಂಶ(Result)ಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಟ್ಟು ನಗರಸಭೆಯ 35 ವಾರ್ಡ್​​ಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿ 33, ಕಾಂಗ್ರೆಸ್ 32, ಜೆಡಿಎಸ್ 12, ಬಿಎಸ್ಪಿ 6, ಆಮ್ ಆದ್ಮಿ 6 ಸ್ಥಾನಗಳು ಸೇರಿದಂತೆ ಒಟ್ಟು 146 ಅಭ್ಯರ್ಥಿಗಳು ಕಣದಲ್ಲಿದ್ರು.

ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಬಿಜೆಪಿ

ಪರಿಷತ್ ಚುನಾವಣೆ(MLC Election)ಯಲ್ಲಿ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಬಿಜೆಪಿ ಗೆಲುವು ಸಾಧಿಸಿದ್ರೂ  ಗೆಲುವಿನ ಅಂತರ ಮಾತ್ರ ಲೆಕ್ಕಚಾರವನ್ನೇ ಬುಡಮೇಲು ಮಾಡಿತ್ತು. 4 ಶಾಸಕರು, ಓರ್ವ ಸಂಸದೆ, ಶೇಕಡಾ 60ರಷ್ಟು ಗ್ರಾಮ ಪಂಚಾಯ್ತಿ ಬಿಜೆಪಿ ಹಿಡಿತದಲ್ಲಿದ್ರೂ ಕೊನೆಗೂ ಕಮಲ ಪಡೆ ಗೆದ್ದಿದ್ದು ಕೇವಲ ಮೂರೇ ಮೂರು ಮತಗಳ ಅಂತರದಿಂದ. ಹೀಗಾಗಿ ಎಂಎಲ್ಸಿ ಚುನಾವಣೆಯಿಂದ ಪಾಠ ಕಲಿತಿರುವ ಬಿಜೆಪಿ, ನಗರಸಭೆಯ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಹೇಗಾದ್ರೂ ಮಾಡಿ ಈ ಬಾರಿ ಅಧಿಕಾರದ ಗದ್ದುಗೆ ಏರಲೇಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿತ್ತು.

ಇದನ್ನೂ ಓದಿ: Karnataka ULB Election Results: 58 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇಂದು

ಸಿಟಿ ರವಿ-ಶೋಭಾ ಕರಂದ್ಲಾಜೆ ಭರ್ಜರಿ ಪ್ರಚಾರ

ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರೋ ಸಿ.ಟಿ ರವಿ ಚುನಾವಣೆಯ ಉಸ್ತುವಾರಿ ಹೊತ್ತರು. ಇನ್ನೊಂದೆಡೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಫಿನಾಡಿನಲ್ಲೇ ಮೊಕ್ಕಾಂ ಹೂಡಿ ಪಕ್ಷದ ಅಭ್ಯರ್ಥಿಗಳ ಪರ, ಬೀದಿ ಬೀದಿ ಸುತ್ತಿ ಪ್ರಚಾರ ನಡೆಸಿದ್ರು. ಅಲ್ಲದೇ ಹಾಸನ ಸಚಿವ ಮುನಿರತ್ನ, ಭೈರತಿ ಬಸವರಾಜ್, ಶಾಸಕ ಪ್ರೀತಂಗೌಡ  ಸೇರಿದಂತೆ ಹಲವರು ಕಮಲ ಕಲಿಗಳ ಪರ ಬ್ಯಾಟಿಂಗ್ ನಡೆಸಿದ್ರು.

ಕಾಂಗ್ರೆಸ್​ ಕೂಡ ಶತ ಪ್ರಯತ್ನ

ಹಾಗಂತ ಕೈ ಪಡೆ ಕೂಡ ಕೈಕಟ್ಟಿ ಕೂರುವ ಕೆಲಸ ಮಾಡಲಿಲ್ಲ, ಚುನಾವಣೆ ಉಸ್ತುವಾರಿ ಹೊತ್ತ ಮಾಜಿ ಸಚಿವ ಕಿಮ್ಮನೆ ರತ್ನಾಕರ, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸೈಲೆಂಟ್ ಸ್ಕೆಚ್ ಹಾಕಿ ಕೆಲಸ ಮಾಡಿದ್ರು. ಕೈ ನಾಯಕರಾದ ಮೋಟಮ್ಮ, ಮಧು ಬಂಗಾರಪ್ಪ, ಬಿ.ಎಲ್ ಶಂಕರ್, ರಮಾನಾಥ ರೈ, ದೃವನಾರಾಯಣ್, ನಲಪಾಡ್ ಸೇರಿ ಹಲವರು ಪ್ರಚಾರ ನಡೆಸಿದ್ರು. ಹೀಗಿದ್ರೂ  ಈ ಬಾರಿ ಅಧಿಕಾರದ ಗದ್ದುಗೆ ನಮ್ಮದೇ ಎಂದಿದ್ದಾರೆ ಬಿಜೆಪಿ ನಾಯಕ ಸಿ.ಟಿ ರವಿ. ನಗರಸಭೆ ಚುನಾವಣೆಯಲ್ಲಿ ಮತದಾರ ಯಾರ ಕೈಹಿಡಿಯಲಿದ್ದಾನೆ ಎಂಬುಂದು ಇಂದು  ಹೊರಬೀಳಲಿದೆ.

ಬಿಜೆಪಿಗೆ ಢವ ಢವ

ಕಳೆದ ಬಾರಿ ಸರಳ ಬಹುಮತಕ್ಕೆ ಬೇಕಿದ್ದ 18 ಸ್ಥಾನಗಳನ್ನ ಗೆದ್ದು ಬಿಜೆಪಿ ಅಧಿಕಾರ ನಡೆಸಿತ್ತು. ಕೈ ಪಡೆ 12, ಪಕ್ಷೇತರರು 3, ಜೆಡಿಎಸ್ 2 ಸ್ಥಾನಗಳನ್ನ ಗೆಲ್ಲಲಷ್ಟೇ ಶಕ್ತರಾಗಿದ್ರು. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಬಿಜೆಪಿ ಅಧಿಕಾರದ ಅವಧಿ ಮುಗಿದಿದ್ರೂ ನಗರಸಭೆಗೆ ಚುನಾವಣೆ ನಡೆದಿರಲಿಲ್ಲ. ಚಿಕ್ಕಮಗಳೂರು ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಹಿನ್ನಡೆಯಾದಾಗ ಒಂದೊಂದೇ ನೆಪಗಳನ್ನ ಒಡ್ಡಿ ಬಿಜೆಪಿಯೇ ಚುನಾವಣೆ ನಡೆಸಲು ಅಡ್ಡಗಾಲು ಹಾಕಿಕೊಂಡು ಬಂದಿತ್ತು. ಕೊನೆಗೂ ಚುನಾವಣೆ ನಡೆಸಲು ಕೋರ್ಟ್ ಅಸ್ತು ಅಂದಾಗ ಬಿಜೆಪಿ ಬೇರೆ ದಾರಿ ಇಲ್ಲದೇ ಎಲೆಕ್ಷನ್ ಅಖಾಡಕ್ಕೆ ಇಳಿದಿತ್ತು. ಹೀಗಾಗಿಯೇ ಬಿಜೆಪಿಯೇ ಒಳಗೊಳಗೆ ಢವಢವ ಇರೋದಂತೂ ಸುಳ್ಳಲ್ಲ.

ಇದನ್ನೂ ಓದಿ: Power Cut: ಬೆಂಗಳೂರಲ್ಲಿ ಮುಗಿಯದ ವಿದ್ಯುತ್ ವ್ಯತ್ಯಯದ ಕಾಟ, ಇಂದು ಮತ್ತು ನಾಳೆ ಮತ್ತೆ ಪವರ್ ಶಾಕ್

ಅಭಿವೃದ್ಧಿ ಕಾರ್ಯಗಳು ಶೂನ್ಯ

ಚಿಕ್ಕಮಗಳೂರು ನಗರದಲ್ಲಿ ಜನರು ಬಯಸಿದ್ದ ಅಭಿವೃದ್ಧಿ ಕಾರ್ಯಗಳು ಕಳೆದ ಅವಧಿಯಲ್ಲಿ ನಡೆದಿಲ್ಲ ಅನ್ನೋದು ಸ್ಪಷ್ಟ. ಈ ಆಕ್ರೋಶ ಏನಾದ್ರೂ ಬಿಜೆಪಿಗೆ ಮುಳುವಾಗಿ, ಕಾಂಗ್ರೆಸ್ ಲಾಭವಾಗುತ್ತಾ ಅನ್ನೋ ಲೆಕ್ಕಾಚಾರ ಜನರಲ್ಲಿದೆ. ಆದ್ರೆ ಬಿಜೆಪಿಯ ವೈಫಲ್ಯಗಳನ್ನ ಕಾಂಗ್ರೆಸ್ ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲದೇ ಇರೋದು ಕೂಡ,ಕೈ ಪಡೆಯೂ ಅಧಿಕಾರದ ಗದ್ದುಗೆ ಏರೇ ಬಿಡುತ್ತೆ ಅನ್ನೋ ವಿಶ್ವಾಸ ಸ್ವತಃ ಪಕ್ಷದ ಮುಖಂಡರಲ್ಲೇ ಇಲ್ಲ. ಹೀಗಾಗಿ ಜೆಡಿಎಸ್ ಸೇರಿದಂತೆ ಪಕ್ಷೇತರರು ಕಿಂಗ್ ಮೇಕರ್ ಗಳಾಗುವ ಸಾಧ್ಯತೆಯನ್ನ ಈ ಬಾರಿ ಇಟ್ಟುಕೊಳ್ಳಲಾಗಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾಫಿನಾಡಿನ ಚುನಾವಣೆಯ ಕುತೂಹಲಕ್ಕೆ ತೆರೆಬೀಳಲಿದೆ..
Published by:Latha CG
First published: