ಚಿಕ್ಕಮಗಳೂರು(ಜೂ.17): ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮೊನ್ನೆ ರಾತ್ರಿಯಿಂದ ಮಲೆನಾಡಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದೆರಡು ವರ್ಷಗಳ ಮಳೆಯ ಅವಾಂತರಗಳಿಂದ ಜನರಿನ್ನೂ ಹೊರಗೇ ಬಂದಿಲ್ಲ. ಸೌಲಭ್ಯ-ಪರಿಹಾರವಿಲ್ಲದೆ ಅತಂತ್ರವಾಗಿದ್ದಾರೆ. ಇದೀಗ, ಮತ್ತೆ ಮಲೆನಾಡಿಗೆ ಡೆವಿಲ್ ರಿಟನ್ರ್ಸ್ ಆಗಿದ್ದು ಬೀಸುತ್ತಿರೋ ಗಾಳಿ, ಸುರಿಯುತ್ತಿರೋ ಮಳೆ ಕಂಡು ಭಯಗೊಂಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಮಳೆ ಆರಂಭವಾದ ಮೊದಲ ದಿನವೇ ಆದ ಅನಾಹುತ ಕಂಡು ಜನ ಹೈರಾಣಾಗಿ, ವರುಣದೇವನಿಗೆ ಶಾಂತವಾಗಿರಪ್ಪಾ ಅಂತ ಹರಕೆ ಕೊಟ್ಟಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಮಲೆನಾಡಲ್ಲಿ ಕಳೆದ 20 ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿತ್ತು. ಆದರೆ, ಮೊನ್ನೆ ರಾತ್ರಿಯಿಂದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ, ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೆಹೊನ್ನೂರು, ಬಣಕಲ್ ಭಾಗದಲ್ಲಿ ಸುರಿಯುತ್ತಿರೋ ರಣಮಳೆ, ಬೀಸುತ್ತಿರುವ ಭಾರೀ ಗಾಳಿಗೆ ಜನ ಭಯಭೀತರಾಗಿದ್ದಾರೆ. ಇಷ್ಟು ದಿನ ಮಳೆಗಾಗಿ ಆಕಾಶ ನೋಡ್ತಿದ್ದ ಮಲೆನಾಡಗರು ಈಗ ಆತಂಕದಲ್ಲಿ ಬದುಕುವಂತಾಗಿದೆ.
ಇದನ್ನೂ ಓದಿ:Tissue Paper: ಟಿಶ್ಯೂ ಪೇಪರ್ನಿಂದಲೂ ಮಾಸ್ಕ್ ತಯಾರಿಸಬಹುದು...! ಹೇಗೆ ಅಂತೀರಾ? ಇಲ್ನೋಡಿ
ಅತ್ತ ಮಳೆಯಿಂದ ಮಲೆನಾಡಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದರೆ ಇತ್ತ ಬಯಲುಸೀಮೆ ಭಾಗದಲ್ಲಿ ಮಳೆಗಾಗಿ ಜನ ಮುಗಿಲತ್ತ ಮುಖ ಮಾಡೋದನ್ನ ಬಿಟ್ಟಿಲ್ಲ. ತರೀಕೆರೆ-ಕಡೂರು ತಾಲೂಕಿನಲ್ಲಿ ನಿನ್ನೆ ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣವಿದೆ. ಮಲೆನಾಡಲ್ಲಿ ಮಳೆ ಮನಸ್ಸೋ ಇಚ್ಛೆ ಸುರಿಯುತ್ತಿದ್ರೆ, ಬಯಲುಸೀಮೆ ಭಾಗದಲ್ಲಿ ಒಂದನಿ ಮಳೆ ಇಲ್ಲದಂತಾಗಿದೆ. ಮಲೆನಾಡಲ್ಲಿ ಸುರಿಯುತ್ತಿರೋ ಮಳೆ ಕೂಡ ಜನರ ನಿದ್ದೆಗೆಡಿಸಿದೆ. ಹಗಲಲ್ಲಿ ಮನಸ್ಸೋ ಇಚ್ಛೆ ಸುರಿದು ಆಗಾಗ್ಗೆ ಬಿಡುವು ನೀಡುವ ವರುಣದೇವ ರಾತ್ರಿಯಾಗುತ್ತಿದ್ದಂತೆ ತನ್ನ ಸಾಮರ್ಥ್ಯವನ್ನ ಪ್ರದರ್ಶನಕ್ಕಿಡುತ್ತಿದ್ದಾನೆ.
ಇದರಿಂದ ಮಲೆನಾಡಿಗರ ಆತಂಕ ಇಮ್ಮಡಿಗೊಂಡಿದೆ. ಕಳೆದೆರಡು ವರ್ಷ ವರುಣದೇವ ಮಾಡಿದ ಅನಾಹುತಗಳಿಂದ ಜನರಿನ್ನೂ ಹೊರಗೇ ಬಂದಿಲ್ಲ. ಆದ ನಷ್ಟಕ್ಕೆ ಪರಿಹಾರವೂ ಸಮರ್ಪಕವಾಗಿ ಬಂದಿಲ್ಲ. ಮಲೆನಾಡಿಗರ ಪರಿಸ್ಥಿತಿ ಈಗಿರುವಾಗ ಈಗ ಮತ್ತೆ ಮಳೆ ಅಬ್ಬರ ಆರಂಭವಾಗಿರುವುದರಿಂದ ಮಲೆನಾಡಿಗರು ಈ ವರ್ಷ ವರುಣದೇವ ಮತ್ತಿನ್ನೇನು ಅವಾಂತರ ಸೃಷ್ಠಿಸುತ್ತಾನೋ ಎಂದು ಆತಂಕಗೊಂಡಿದ್ದಾರೆ.
ಇದನ್ನೂ ಓದಿ:ಕಡಿಮೆ ಬಜೆಟ್ನಲ್ಲಿ ಮದುವೆ ಮಾಡಿದ್ರೆ ಓಡಿ ಹೋಗ್ತೀನಿ; ತಂದೆ-ತಾಯಿಗೆ ಬೆದರಿಕೆ ಹಾಕಿದ ವಧು
ಒಟ್ಟಾರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಲೆನಾಡಿಗರು ಭವಿಷ್ಯವನ್ನ ನೆನೆದು ಆತಂಕಗೊಂಡಿದ್ದಾರೆ. ಭಾರೀ ಗಾಳಿ-ಮಳೆಯಿಂದ ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನ ಕತ್ತಲಲ್ಲಿ ಬದುಕುವಂತಾಗಿದೆ.
ಮಳೆರಾಯನ ಅಬ್ಬರ ಜೋರಾಗಿದ್ದು ಪಂಚನದಿಗಳು ಮೈದುಂಬಿ ಹರಿಯುತ್ತಿದೆ. ಮಳೆಯಿಂದ ಜನ ಮನೆಯಿಂದ ಹೊರಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಮಲೆನಾಡಿಗರ ಮೊಗದಲ್ಲಿ ಸಂತಸ-ಆತಂಕ ಎರಡನ್ನೂ ತಂದಿದೆ. ಆದ್ರೆ, ಕೊನೆಗೆ ಉಳಿಯುವುದ್ಯಾವುದು ಅನ್ನೋದು ಮಾತ್ರ ನಿಗೂಢ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ