ಚಿಕ್ಕಮಗಳೂರು : ಟೊಮ್ಯಾಟೋ ಫಾರಂನ ಮಧ್ಯೆ ಫ್ಲವರ್ ಪಾಟ್ನಲ್ಲಿ ಗಾಂಜಾವನ್ನು ಬೆಳೆದಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ. ಫ್ಲವರ್ ಪಾಟಿನಲ್ಲಿ ಗಾಂಜಾ ಬೆಳೆದರೆ ಸ್ಥಳೀಯರು ಹಾಗೂ ಪೊಲೀಸರನ್ನ ಆರಾಮಾಗಿ ಯಾಮಾರಿಸಬಹುದು ಎಂದು ಫ್ಲವರ್ ಪಾಟಿನಲ್ಲಿ ಸುಮಾರು ಎಂಟೂವರೆ ಕೆ.ಜಿ. ಗಾಂಜಾ ಬೆಳೆದಿದ್ದ ಇಬ್ಬರು ವ್ಯಕ್ತಿಗಳು ಪೊಲೀಸರು ಬಂಧಿಸಿದ್ದಾರೆ. ತರೀಕೆರೆ ಮೂಲದ ಶಕೀಲ್ ಹಾಗೂ ಭದ್ರಾವತಿ ಮೂಲದ ರೋಷನ್ ಎಂಬುವವರನ್ನ ಬಂಧಿಸಲಾಗಿದೆ.
ಎತ್ತರವಾಗಿ ಗಿಡಗಳು ಬೆಳೆದ ಟಮೋಟೋ ಫಾರಂನ ಮಧ್ಯೆ-ಮಧ್ಯೆ ಫ್ಲವರ್ ಪಾಟಿನಲ್ಲಿ ಇವರು ಗಾಂಜಾ ಬೆಳೆದಿದ್ದರು. ತರೀಕೆರೆ ತಾಲೂಕಿನ ಅತ್ತಿಗನಾಳು ಕಾಡಂಚಿನ ಗ್ರಾಮ. ಈ ಗ್ರಾಮದ ಅಂಚಿನಲ್ಲಿ ಗುಡ್ಡದ ಬೀರನಹಳ್ಳಿ ಅರಣ್ಯ ವ್ಯಾಪ್ತಿಯಿದೆ. ಇಲ್ಲಿನ ಜಮೀನಿನಲ್ಲಿ ಟಮೋಟೋ ಬೆಳೆಯಲಾಗಿತ್ತು. ಟಮೋಟೋ ಗಿಡಗಳ ಮಧ್ಯೆ ಮನೆ ಮುಂದೆ ಶೋಗೆ ಗಿಡಗಳನ್ನ ಬೆಳೆಸುವ ಚಿಕ್ಕ-ಚಿಕ್ಕ ಪಾಟಿನಲ್ಲಿ ಗಾಂಜಾ ಬೆಳೆದಿದ್ದರು. ಯಾರಿಗಾದರೂ ವಿಷಯ ತಿಳಿದು ಬರುವಷ್ಟರಲ್ಲಿ ಪಾಟುಗಳನ್ನ ಬೇರೆಡೆ ಸ್ಥಳಾಂತರ ಮಾಡಬಹುದು ಎಂದು ಪಾಟಿನಲ್ಲಿ ಗಾಂಜಾ ಬೆಳೆದಿದ್ದರು. ಈ ಮಧ್ಯೆ ತರೀಕೆರೆಯಲ್ಲಿ ಗಾಂಜಾ ಸಪ್ಲೈ ಮಾಡುವ ತಂಡವಿರೋದಾಗಿಯೂ ಪೊಲೀಸರಿಗೆ ಅನುಮಾನವಿತ್ತು. ಅಲ್ಲಲ್ಲೇ ಸಣ್ಣ-ಪುಟ್ಟ ಗಾಂಜಾ ಗಿರಾಕಿಗಳು ಸಿಕ್ಕಿಬಿದ್ದಿದ್ದರು. ಅತ್ತಿಗನಾಳು ಗ್ರಾಮದಲ್ಲಿ ಗಾಂಜಾ ಬೆಳೆದಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಡಿಸಿಐಬಿ ಪೊಲೀಸರು ಎಂಟೂವರೆ ಕೆ.ಜಿ. ಮಾಲಿನ ಸಮೇತ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: Karnataka Weather: ಮಲೆನಾಡು, ಕರಾವಳಿಯಲ್ಲಿ ಇಂದಿನಿಂದ ಏ. 14ರವರೆಗೆ ಭಾರೀ ಮಳೆ ಸಾಧ್ಯತೆ
ಈ ಬಗ್ಗೆ ಪ್ರತಿಕ್ರಿಯೇ ನೀಡಿರೋ ಜಿಲ್ಲಾ ಎಸ್ಪಿ ಅಕ್ಷಯ್, 100-200 ಗ್ರಾಂ ಮಾರಾಟ ಮಾಡೋರನ್ನ ಬಂಧಿಸಿದರೆ ಕಡಿಮೆಯಾಗಲ್ಲ. ಮುಖ್ಯವಾಗಿ ಯಾರು ಸಪ್ಲೆ ಮಾಡುತ್ತಾರೋ ಅವರನ್ನ ಬಂಧಿಸಿದರೆ ಬಹುತೇಕ ಗಾಂಜಾ ಹಾವಳಿ ಕಡಿಮೆಯಾಗುತ್ತದೆ. ನಮ್ಮ ದೃಷ್ಠಿ ಮೇನ್ ಡೀಲರ್ ಮೇಲೆ ಇರುತ್ತದೆ ಎಂದಿದ್ದಾರೆ. ಹಾಸನ ಜಿಲ್ಲೆಯಿಂದ ಬಂದು ಬೆಳವಾಡಿ, ಜಾವಗಲ್ ಬಳಿ ಆಟೋದಲ್ಲಿ ಮಾರಾಟ ಮಾಡುತ್ತಿದ್ದರು ಅವರನ್ನ ಬಂಧಿಸಿದ್ದೇವೆ. ತಾಲೂಕಿನ ಹೊಲದಲ್ಲೂ ಅಕ್ರಮವಾಗಿ ಬೆಳೆದಿದ್ದರು ಅದನ್ನೂ ಸೀಜ್ ಮಾಡಿದ್ದೇವೆ. ಶಿವಮೊಗ್ಗದಿಂದ ಬಂದು ತರೀಕೆರೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದವನ್ನೂ ಬಂಧಿಸಿದ್ದೇವೆ. ಅವರಿಂದ ಎಂಟೂವರೆ ಕೆ.ಜಿ. ಸೀಜ್ ಮಾಡಿದ್ದೇವೆ. ಅವರು ಸೀಟ್ ಕೆಳಗೆ ಚಿಕ್ಕ-ಚಿಕ್ಕ ಪ್ಯಾಕ್ ಮಾಡಿ ಇಟ್ಟಿದ್ದರು. ಗಾಡಿಯಲ್ಲಿದ್ದ ನಾಲ್ಕು ಜನರನ್ನೂ ಬಂಧಿಸಿದ್ದೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ