ಚಿಕ್ಕಮಗಳೂರು : ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಬಡ ಕುಟುಂಬವೊಂದು ಬದುಕಿಗೊಂದು ಭದ್ರವಾದ ಸೂರಿನ ಕನಸು ಕಂಡು, ಮನೆ ಕಟ್ಟಲು ಸಿದ್ಧತೆ ಮಾಡಿಕೊಂಡಾಗ ಅಧಿಕಾರಿಗಳ ಯಡವಟ್ಟಿನಿಂದ ಬಂದ ಮನೆ ವಾಪಾಸ್ ಸರ್ಕಾರಕ್ಕೆ ಹೋಗಿ ಕುಟುಂಬವೊಂದು ಅತಂತ್ರವಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಇಡಕನಿ ಗ್ರಾಮದ ಭದ್ರಾ ಕಾಲೋನಿಯಲ್ಲಿ ನಡೆದಿದೆ.
ಭದ್ರಾ ಕಾಲೋನಿಯ ಅರುಣ್ ಕುಟುಂಬ ಮನೆ ಇಲ್ಲದೆ ಅತಂತ್ರವಾಗಿರೋ ಕುಟುಂಬ. ಮೂರು ವರ್ಷದ ಹಿಂದೆ ಈ ಕುಟುಂಬ ಸರ್ಕಾರದ ವಸತಿ ಯೋಜನೆಯಡಿ ಹೊಸ ಮನೆ ಕನಸು ಕಂಡು ಸಾಲ ಮಾಡಿ ಪೌಂಡೇಷನ್ ಹಾಕಿದ್ರು. ಸರ್ಕಾರದ ಹಣ ಬಂದ ಕೂಡಲೇ ಗೋಡೆ ಕಟ್ಟಿ ಹೊಸ ಮನೆ ನಿರ್ಮಾಣದ ಕನಸು ಹೊತ್ತಿದ್ರು. ಆದ್ರೆ, ಮೂರು ವರ್ಷವಾದರೂ ಹಣ ಬರಲಿಲ್ಲ. ಕಛೇರಿಗೆ ಹೋಗಿ ಅಧಿಕಾರಿಗಳಿಗೆ ಹಣ ಕೇಳಿದಾಗೆಲ್ಲಾ ಬರುತ್ತೆ ಅಂತ ಹೇಳಿ ಕಳಿಸುತ್ತಿದ್ದರು. ಮೂರು ವರ್ಷವಾದರೂ ಹಣ ಬರಲೇ ಇಲ್ಲ. ಆದರೀಗ, ಈ ಕುಟುಂಬಕ್ಕೆ ಇದ್ದೊಂದು ಮನೆಯೂ ಮಳೆ-ಗಾಳಿಗೆ ನೆಲಸಮವಾಗಿದ್ದು, ಮನೆಯ ವಸ್ತುಗಳೆಲ್ಲವೂ ನಾಶವಾಗಿದೆ. ಸದ್ಯ ಈ ಬಡ ಕುಟುಂಬ ಬೀದಿಯಲ್ಲಿ ಬದುಕುವಂತಾಗಿದೆ.
ಇದನ್ನೂ ಓದಿ: Karnataka Unlock 2.0: ಶಿವಮೊಗ್ಗ, ಉಡುಪಿ ಸೇರಿ 6 ಜಿಲ್ಲೆಗಳು ಇಂದಿನಿಂದ ಅನ್ಲಾಕ್; ಬಾರ್, ಅಂಗಡಿ, ರೆಸ್ಟೋರೆಂಟ್ಗಳು ಓಪನ್
ಇನ್ನೂ ಈ ಮನೆ ಕಳೆದ ವರ್ಷವೇ ಅರ್ಧ ಬಿದ್ದು ಹೋಗಿತ್ತು. ಕೂಡಲೇ ಈ ಬಡಕುಟುಂಬ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು. ಆದರೆ, ಈ ವಾರದಲ್ಲಿ ಸುರಿದ ಮುಂಗಾರಿನ ಅಬ್ಬರಕ್ಕೆ ಉಳಿದಿದ್ದ ಅರ್ಧ ಮನೆಯೂ ನೆಲ ಕಚ್ಚಿದೆ. ಆದ್ದರಿಂದ ಇಂದು ಈ ಕುಟುಂಬ ಮಕ್ಕಳು-ಮರಿ ಸಮೇತ ಟಾರ್ಪಲ್ ಕಟ್ಟಿಕೊಂಡು ಅದರೊಳಗೆ ಬದುಕುವಂತಾಗಿದೆ. ಜೋರು ಗಾಳಿ ಸಮೇತ ಒಂದೇ ಒಂದು ಮಳೆ ಬಂದರೆ ಈಗಿರೋ ಶೆಡ್ ಕೂಡ ಕೊಚ್ಚಿ ಹೋಗುವುದರಲ್ಲಿ ಅನುಮಾನವಿಲ್ಲ.
ಮನೆ ಬಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ನಿಮಗೆ ಬಂದಿದ್ದ ಹಣ ವಾಪಾಸ್ ಹೋಗಿದೆ ಅಂತಿದ್ದಾರೆ. ಅಧಿಕಾರಿಗಳ ಮಾತು ಈ ಕುಟುಂಬಕ್ಕೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿದೆ. ಇದ್ದ ಮನೆಯೂ ಇಲ್ಲ. ಕನಸು ಕಂಡಿದ್ದ ಹೊಸ ಮನೆಗೂ ಹಣವಿಲ್ಲ. ನಾವು ಬದುಕೋದು ಹೇಗೆಂದು ನೊಂದವರು ಕಣ್ಣೀರಿಡ್ತಿದ್ದಾರೆ.
(ವರದಿ: ವೀರೇಶ್ ಹೆಚ್ ಜಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ