ಚಿಕ್ಕಮಗಳೂರು : ಉರುಳಿಗೆ ಸಿಲುಕಿ ಜೀವ ಉಳಿಸಿಕೊಳ್ಳಲು ಚಿರತೆ 10 ಗಂಟೆಗಳ ಕಾಲ ಕಿರುಚಾಡಿ, ಕೂಗಾಡಿ ದೇಹದ ಶಕ್ತಿ ಕುಂದಿದ ಮೇಲೆ ಸೋತೆ ಎಂದು ಸಾವಿಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ನೇರಡಿ ಗ್ರಾಮದಲ್ಲಿ ನಡೆದಿದೆ. ನೇರಡಿ ಗ್ರಾಮದ ಬೇಟೆಗಾರರ ಉರುಳಿಗೆ ಬಿದ್ದ 5 ವರ್ಷದ ಗಂಡು ಚಿರತೆ ನೋಡ-ನೋಡ್ತಿದ್ದಂತೆ ಉಸಿರು ಚೆಲ್ಲಿದೆ. ಚಿರತೆ ನೊಂದು-ಬೆಂದು ಸಾಯುವಾಗ ಕಾಡುಪ್ರಾಣಿ ರಕ್ಷಕರೆನ್ನಿಸಿಕೊಂಡವರು ಅಲ್ಲೇ ಇದ್ರು. ಆದ್ರು, ಚಿರತೆಯನ್ನ ಉಳಿಸಲಾಗಿಲ್ಲ. ನಿನ್ನೆ ರಾತ್ರಿಯೇ ಚಿರತೆ ದುಷ್ಕರ್ಮಿಗಳ ಉರುಳಿಗೆ ಸಿಲುಕಿತ್ತು. ಬದುಕಲು ಇಡೀ ರಾತ್ರಿ ಹೋರಾಡಿದ್ರು ಆಗ್ಲಿಲ್ಲ. ಚಿರತೆಯ ಗೋಳಾಟವನ್ನ ಕಂಡ ಸ್ಥಳಿಯರು ಬೆಳಗ್ಗೆ 7.30ಕ್ಕೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
9.30ಕ್ಕೆ ಸ್ಥಳಕ್ಕೆ ಬಂದ ಅಧಿಕಾರಿಗಳು ಅಸಹಾಯಕರಾಗಿದ್ರು. ಅವರೂ ಚಿರತೆ ನರಳಾಟ ನೋಡೋದ ಬಿಟ್ಟು ಬೇರೆನೂ ಮಾಡ್ಲಿಲ್ಲ. ಯಾಕಂದ್ರೆ, ಕಾಫಿನಾಡ ಅರಣ್ಯ ಇಲಾಖೆ ಬಳಿ ಅರವಳಿಕೆ ಮದ್ದು ನೀಡೋ ವೈದ್ಯರಿರಲಿಲ್ಲ. ಪ್ರಾಣಿ ಅಥವ ಮನುಷ್ಯರ ಜೀವಕ್ಕೆ ಸಂಚಕಾರ ಬಂದ್ರೆ ಅರವಳಿಕೆ ಮದ್ದು ಹಾಗೂ ತಜ್ಞರು ಶಿವಮೊಗ್ಗದಿಂದ ಬರಬೇಕಾಗಿತ್ತು. ಅವರಿಗೆ ಸುದ್ದಿ ಮುಟ್ಟಿಸಿ ಬರುವಷ್ಟರಲ್ಲಿ 11.30ರ ವೇಳೆಗೆ ಚಿರತೆ ಚಿರನಿದ್ರೆಗೆ ಜಾರಿತ್ತು.
ಹೀಗೆ ಅರವಳಿಕೆ ಮದ್ದು ಹಾಗೂ ತಜ್ಞರಿಲ್ಲದೇ ಕೆಲ ಪ್ರಾಣಿಗಳು ಸಾವನ್ನಪ್ಪಿರೋದಕ್ಕೆ ಕಾಫಿನಾಡಲ್ಲಿ ಸಾಕಷ್ಟು ಉದಾಹರಣೆಗಳಿವೆ. ಆದ್ರು ಕೂಡ ಸರ್ಕಾರಕ್ಕೆ ಚಿಕ್ಕಮಗಳೂರಿನ ಅರಣ್ಯ ಇಲಾಖೆಗೆ ಬೇಕಾದ ಸೌಲಭ್ಯ ಕಲ್ಪಿಸೋ ಮನಸ್ಸು ಮಾಡಿಲ್ಲ. ಕಾಫಿನಾಡ ಮಲೆನಾಡು ಭಾಗದಲ್ಲಿ ತಿನ್ನೋಕೆಂದು ಕಾಡುಹಂದಿ, ಜಿಂಕೆ, ಸಾರಂಗ, ಮೊಲದಂತಹ ಪ್ರಾಣಿಗಳಿಗೆ ಉರುಳಾಕಾವುದು ಸಾಮಾನ್ಯವಾಗಿಬಿಟ್ಟಿದೆ.
ಕೂಡಲೇ ಅಧಿಕಾರಿಗಳು ಪ್ರಾಣಿ ಬೇಟೆಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲವಾದ್ರೆ, ಮುಂದಿನ ದಿನಗಳಲ್ಲಿ ಕಾಫಿನಾಡಲ್ಲಿ ಕಾಡುಪ್ರಾಣಿಗಳೇ ಇಲ್ಲದಂತಾದ್ರು ಆಶ್ಚರ್ಯವಿಲ್ಲ. ಇನ್ನಾದ್ರು ಸರ್ಕಾರ ಕಾಫಿನಾಡಿಗೆ ಅರವಳಿಕೆ ಮದ್ದು, ಶಾರ್ಪ್ ಶೂಟರ್ಸ್ ಹಾಗೂ ತಜ್ಞರನ್ನ ನೀಡಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮುಜಾಫರ್ನಗರ ಕೋಮು ಗಲಭೆ ಪ್ರಕರಣ; ಸಂಗೀತ ಸೋಮ್ ಸೇರಿದಂತೆ 12 ಬಿಜೆಪಿ ಮುಖಂಡರ ಪ್ರಕರಣ ಹಿಂದಕ್ಕೆ
2016ರಲ್ಲಿ ಚಿಕ್ಕಮಗಳೂರು ನಗರದ ಹೃದಯ ಭಾಗಕ್ಕೆ ಚಿರತೆ ಬಂದಾಗ್ಲೂ ಮದ್ದು ಹಾಗೂ ತಜ್ಞರು ಬಂದದ್ದು ಶಿವಮೊಗ್ಗದಿಂದ್ಲೇ. ಮೇಲಿಂದ ಮೇಲೆ ಪ್ರಾಣಿಗಳು ಸಂಕಷ್ಟಕ್ಕೀಡಾಗ್ತಿದ್ರು ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಕಾಫಿನಾಡ ಅರಣ್ಯ ಇಲಾಖೆಗೆ ಬೇಕಾದ ಸೌಲಭ್ಯವನ್ನ ನೀಡಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ