ಚಿಕ್ಕಮಗಳೂರಿನಲ್ಲಿ ಶವವನ್ನು ಮರದ ಕೊಂಬೆಗೆ ಕಟ್ಟಿ, ಹೊತ್ತು ಸಾಗಿದ ಜನರು!

ಕಳಸ ಸಮೀಪದ ಕಳಕೋಡು ಮೇಗಲಮಕ್ಕಿ ಸಮೀಪದ ಮನುಕುಬ್ರಿಯ 50 ವರ್ಷದ ಶಾರದಮ್ಮ ಮಂಗಳವಾರ ಮೃತರಾಗಿದ್ದರು. ಅವರನ್ನು ಗ್ರಾಮಕ್ಕೆ ತರಲು ರಸ್ತೆ ಇಲ್ಲದೆ ಕಾಡುದಾರಿಯಲ್ಲಿ ಮರದ ಟೊಂಗೆಗೆ ಮೃತದೇಹ ಕಟ್ಟಿಕೊಂಡು ಮನೆಗೆ ತರಲಾಗಿದೆ.

news18-kannada
Updated:June 3, 2020, 7:37 AM IST
ಚಿಕ್ಕಮಗಳೂರಿನಲ್ಲಿ ಶವವನ್ನು ಮರದ ಕೊಂಬೆಗೆ ಕಟ್ಟಿ, ಹೊತ್ತು ಸಾಗಿದ ಜನರು!
ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಕಿದ ಕಳಸದ ಜನರು
  • Share this:
ಚಿಕ್ಕಮಗಳೂರು (ಜೂ. 2): ಮಲೆನಾಡಿನ ಕೆಲವು ಕುಗ್ರಾಮಗಳಲ್ಲಿ ಇಂದಿಗೂ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಏನೇ ವಸ್ತು ಬೇಕಿದ್ದರೂ ನಡೆದೇ ಸಾಗಬೇಕಾದ ಪರಿಸ್ಥಿತಿಯಿದೆ. ಚಿಕ್ಕಮಗಳೂರಿನಲ್ಲಿ ಮೃತದೇಹವನ್ನು ಸಾಗಿಸಲು ರಸ್ತೆ ಇಲ್ಲದೆ ಕಾಡು ಮನುಷ್ಯರಂತೆ ಮೃತದೇಹವನ್ನು ಮರದ ಕೊಂಬೆಗೆ ಕಟ್ಟಿಕೊಂಡು ಕಾಡಿನ ದಾರಿಯಲ್ಲಿ 2  ಕಿ.ಮೀ. ನಡೆದೇ ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮನುಕುಬ್ರಿ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಕಳಸ ಸಮೀಪದ ಕಳಕೋಡು ಮೇಗಲಮಕ್ಕಿ ಸಮೀಪದ ಮನುಕುಬ್ರಿ ಗ್ರಾಮ ಗಿರಿಜನರು ವಾಸಿಸುವ ಕುಗ್ರಾಮ. ಈ ಗ್ರಾಮದ 50 ವರ್ಷದ ಶಾರದಮ್ಮ ಮಂಗಳವಾರ ಮೃತರಾಗಿದ್ದರು. ಅವರನ್ನು ಗ್ರಾಮಕ್ಕೆ ತರಲು ರಸ್ತೆ ಇಲ್ಲದೆ ಕಾಡುದಾರಿಯಲ್ಲಿ ಮರದ ಟೊಂಗೆಗೆ ಮೃತದೇಹ ಕಟ್ಟಿಕೊಂಡು ಕಾಡಿನ ಕಾಲು ದಾರಿಯಲ್ಲಿ ಸಾಗಿ ಗ್ರಾಮ ತಲುಪಿದ್ದಾರೆ. 2 ದಿನಗಳ ಹಿಂದೆ ಶಾರದಮ್ಮನಿಗೆ ಆರೋಗ್ಯ ತೀರಾ ಹದಗೆಟ್ಟಾಗ ಕೂಡ ಇದೇ ರೀತಿ ಕೊಂಬೆಗೆ ಕಟ್ಟಿಕೊಂಡೇ ಆಸ್ಪತ್ರೆಗೆ ಸಾಗಿಸಿದ್ದರು. ಇಂದು ಅವರು ತೀರಿಕೊಂಡ ಬಳಿಕ ದಾರಿ ಇಲ್ಲದೆ ಅದೇರೀತಿ ಮತ್ತೆ ಗ್ರಾಮಕ್ಕೆ ಮೃತದೇಹವನ್ನು ವಾಪಾಸ್ ತಂದಿದ್ದಾರೆ.

ಇದನ್ನೂ ಓದಿ: ಆಹಾರ ಹುಡುಕಿ ಬಂದ ಗರ್ಭಿಣಿ ಆನೆಯ ಬಾಯಲ್ಲಿ ಪಟಾಕಿಯಿಟ್ಟು ಕೊಂದ ಜನ!

ಗ್ರಾಮದ ರಸ್ತೆಗೆ ಬೇಡಿಕೆ ಇಟ್ಟು ದಶಕಗಳೇ ಕಳೆದಿವೆ. ನೂರಾರು ಬಾರಿ ಜನರು ಮನವಿ ಕೂಡ ಮಾಡಿದ್ದಾರೆ. ಆದರೆ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಇವರ ಮನವಿಗೆ ಸ್ಪಂದಿಸಿಲ್ಲ. ಮನವಿ ಕೊಟ್ಟು-ಕೊಟ್ಟು ಸಾಕಾಗಿ ಇಲ್ಲಿನ ಜನ ರಸ್ತೆ ಕೇಳುವುದನ್ನೇ ಕೈಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಈ ರೀತಿಯದ್ದು ಇದೊಂದೇ ಪ್ರಕರಣವಲ್ಲ. ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮದಲ್ಲೂ ಕೂಡ ಕಳೆದ ಒಂದೆರಡು ವರ್ಷಗಳಲ್ಲಿ ಇದೇ ರೀತಿ ಘಟನೆ ನಡೆದಿತ್ತು.

because of No Road Facility Chikmagalur Kalasa People Carried Dead Body in Shoulder.
ಮರದ ಟೊಂಗೆಯಲ್ಲಿ ಹೆಣವನ್ನು ಹೊತ್ತು ಸಾಗುತ್ತಿರುವ ಗಿರಿಜನರು


ಹೊಳೆಕೂಡಿಗೆ ಗ್ರಾಮದ ವೃದ್ಧನೋರ್ವ ಸಾವನ್ನಪ್ಪಿದ್ದಾಗ ಗ್ರಾಮಸ್ಥರು ರಸ್ತೆ ಇಲ್ದೆ ಅಪಾಯದ ಮಟ್ಟ ಮೀರಿ ಮೈದುಂಬಿ ಹರಿಯೋ ಭದ್ರಾ ನದಿ ಮೇಲೆಯೇ ತೆಪ್ಪದಲ್ಲಿ ಮೃತದೇಹವನ್ನ ಸಾಗಿಸಿದ್ದರು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಗ್ರಾಮಸ್ಥರಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ, ಇಂದಿಗೂ ಅಲ್ಲಿನ ಜನ ಬದುಕಿಗಾಗಿ ತೆಪ್ಪವನ್ನೇ ಆಶ್ರಯಿಸಿದ್ದಾರೆ.

ಒಟ್ಟಾರಿ ಗಿರಿಜನರೇ ವಾಸಿಸುವ ಈ ಗ್ರಾಮದಲ್ಲಿ ರಸ್ತೆ ಇಲ್ದೆ ಜನರು ಪರದಾಡುತ್ತಿದ್ದರೂ ಸಂಬಂಧಪಟ್ಟವರು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ಇನ್ನಾದರೂ  ಸಂಬಂಧಪಟ್ಟ ಶಾಸಕರು, ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.

First published: June 3, 2020, 7:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading