ಚಿಕ್ಕಮಗಳೂರು: ಕಾಫಿನಾಡಿನ ಯುವತಿಯೊಬ್ಬಳು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ದೇಶಕ್ಕೆ 71ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹೆಗ್ಗಳಿಕೆ ತಂದಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದ 25 ವರ್ಷದ ಯಶಸ್ವಿನಿ ಈ ಭಾರೀ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 71 ನೇ ಸ್ಥಾನ ಪಡೆದು ಜಿಲ್ಲೆಯ ಜನರು ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಈ ಸಾಧನೆ ಮಾಡಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಶಿಕ್ಷಕ ವೃತ್ತಿಯಲ್ಲಿರುವ ಬಸವರಾಜಪ್ಪ ಹಾಗೂ ಇಂದಿರಾ ಎಂಬುವರ ಮಗಳಾಗಿ ಸೆಪ್ಟಂಬರ್ 09 1995 ರಲ್ಲಿ ಜನಿಸಿರುವ ಯಶಸ್ವಿನಿ 1 ರಿಂದ 7 ನೇ ತರಗತಿಯನ್ನು ಕಡೂರು ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಣೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದಾರೆ. 8 ರಿಂದ 10ನೇ ತರಗತಿಯನ್ನು ಕಡೂರು ಪಟ್ಟಣದ ದೀಕ್ಷಾ ಮಂದಿರ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದು, ಪದವಿ ಪೂರ್ವ ಶಿಕ್ಷಣವನ್ನು ಶಿವಮೊಗ್ಗದ ಜ್ಞಾನದೀಪ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ. ನಂತರ ಡೆಲ್ಲಿಯ ರವಿ ಅಂಡ್ ವಾಜೀ ಇನ್ಸ್ಟಿಟ್ಯೂಟ್ನಲ್ಲಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗೆ 9 ತಿಂಗಳು ತರಬೇತಿ ಪಡೆದು 2018_19 ರಲ್ಲಿ ಮೊದಲ ಪರೀಕ್ಷೆ ಎದುರಿಸಿದ್ದರು. ಆಗ 293 ನೇ ರ್ಯಾಂಕ್ ಪಡೆದುಕೊಂಡು ಇಂಡಿಯನ್ ಡಿಫೆನ್ಸ್ ಆಫ್ ಸ್ಟೇಟ್ ಸರ್ವಿಸ್ ನಲ್ಲಿ ತರಬೇತಿ ಪಡೆಯುತ್ತಿದ್ದರು. ಟ್ರೈನಿಂಗ್ ನಡುವೆ 2019_20 ನೇ ಸಾಲಿನ ಪರೀಕ್ಷೆಯನ್ನು ಮತ್ತೊಮ್ಮೆ ಬರೆದಿದ್ದು ಈ ಭಾರೀ 71 ನೇ ರ್ಯಾಂಕ್ ಪಡೆದುಕೊಂಡಿರುವುದು ಕುಟುಂಬಸ್ಥರಲ್ಲಿ ಸಂತಸ ತಂದಿದೆ.
ಯಶಸ್ವಿನಿ ಅವರ ತಂದೆ ಬಸವರಾಜಪ್ಪ ಸದ್ಯ ಗುಬ್ಬಿಹಳ್ಳಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಗಳ ಈ ಸಾಧನೆಗೆ ಹೆಮ್ಮೆ ಪಟ್ಟಿದ್ದಾರೆ. ಆಕೆಯ ಕಠಿಣ ಶ್ರಮ ಹಗೂ ನಿಯಮಿತ ಗುರಿಯಿಂದಲೇ ಈ ಸಾಧನೆ ಮಾಡಿದ್ದಾಳೆ ಎಂದು ಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ದೃಷ್ಟಿ ಸಮಸ್ಯೆಯುಳ್ಳ ಮೇಘನಾ, ಬಾಲನಟಿ ಕೀರ್ತನಾ ಯುಪಿಎಸ್ಸಿ ಪರೀಕ್ಷೆ ಪಾಸ್; ಡಾ.ರಾಜ್ಕುಮಾರ್ ಅಕಾಡೆಮಿಯಿಂದ 19 ಮಂದಿ ತೇರ್ಗಡೆ
ಕೇಂದ್ರ ಲೋಕಸೇವಾ ಆಯೋಗದ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಿಂದ 37 ಮಂದಿ ತೇರ್ಗಡೆಯಾಗಿದ್ದಾರೆ. ಯಶಸ್ವಿನಿ ಅವರು 71ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕದವರಲ್ಲಿ ಅವರೇ ಟಾಪರ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ