ರಜಾ ಮಜಾಕ್ಕಾಗಿ ಮಲೆನಾಡಿನ ಕಡೆ ಸಾಗುತ್ತಿದ್ದಾರೆ ಜನ, ಮಡಿಕೇರಿ ಮತ್ತು ಚಿಕ್ಕಮಗಳೂರಿಗೆ ಹೈ ಡಿಮ್ಯಾಂಡ್ !

ಅಲ್ಲಿರುವ ದಟ್ಟ ಹಸಿರು, ಗಗನಕ್ಕೆ ಚಾಚಿರುವ ಗಿರಿ ಶಿಖರಗಳು ಎಲ್ಲವೂ ಮನಸ್ಸಿಗೆ ಮುದ ಕೊಡುತ್ತವೆ. ಆ ಪ್ರಕೃತಿಯ ಸಿರಿಯ ನಡುವೆ ಒಂದೆರಡು ದಿನ ಕಳೆದರೂ ಸಾಕು ಮತ್ತೆ ದೈನಂದಿನ ಜಂಜಾಟಗಳ ಜೊತೆ ಹೋರಾಡಲು ಹೊಸಾ ಹುಮ್ಮಸ್ಸು ಬಂದಂತಾಗುತ್ತದೆ ಅನ್ನೋದು ಬಹುತೇಕ ಪ್ರವಾಸಿಗರ ಅನಿಸಿಕೆ. ಕರ್ನಾಟಕದಲ್ಲಿ ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅನೇಕ ಸ್ಥಳಗಳು ಜನರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯುತ್ತಿವೆ.

ಚಿತ್ರಕೃಪೆ: ಸುಧಾಕರ್

ಚಿತ್ರಕೃಪೆ: ಸುಧಾಕರ್

  • Share this:
ಬೆಂಗಳೂರು (ಏಪ್ರಿಲ್ 07): ದೈನಂದಿನ ಜಂಜಾಟಗಳಿಂದ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ಕುಟುಂಬದ ಜೊತೆಗೋ, ಸ್ನೇಹಿತರೊಂದಿಗೋ ಅಥವಾ ಒಬ್ಬರೇ ಸುಮ್ಮನೆ ಏಕಾಂತಕ್ಕೋ ಎಲ್ಲಾದ್ರೂ ಹೋಗ್ಬೇಕು ಎನಿಸುವುದು ಸಹಜ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಇಂಥಾ ಅನಿಸಿಕೆಗಳು ತುಸು ಹೆಚ್ಚೇ ಇರುತ್ತದೆ. ಸಾಮಾನ್ಯವಾಗಿ ಜನ ಪ್ರಕೃತಿ ಸಿರಿ ಇರುವ ಕಡೆಗೆ ಹೆಚ್ಚಾಗಿ ಪ್ರವಾಸ ಹೋಗಲು ಇಷ್ಟಪಡುತ್ತಾರೆ. ಕರ್ನಾಟಕದ ವಿಚಾರದಲ್ಲಿ ಜನರ ನೆಚ್ಚಿನ ಪ್ರವಾಸಿ ತಾಣಗಳೆಂದರೆ ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳು.

ಅಲ್ಲಿರುವ ದಟ್ಟ ಹಸಿರು, ಗಗನಕ್ಕೆ ಚಾಚಿರುವ ಗಿರಿ ಶಿಖರಗಳು ಎಲ್ಲವೂ ಮನಸ್ಸಿಗೆ ಮುದ ಕೊಡುತ್ತವೆ. ಆ ಪ್ರಕೃತಿಯ ಸಿರಿಯ ನಡುವೆ ಒಂದೆರಡು ದಿನ ಕಳೆದರೂ ಸಾಕು ಮತ್ತೆ ದೈನಂದಿನ ಜಂಜಾಟಗಳ ಜೊತೆ ಹೋರಾಡಲು ಹೊಸಾ ಹುಮ್ಮಸ್ಸು ಬಂದಂತಾಗುತ್ತದೆ ಅನ್ನೋದು ಬಹುತೇಕ ಪ್ರವಾಸಿಗರ ಅನಿಸಿಕೆ. ಕರ್ನಾಟಕದಲ್ಲಿ ಮಡಿಕೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅನೇಕ ಸ್ಥಳಗಳು ಜನರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯುತ್ತಿವೆ.

ಕೊರೊನಾ ಎರಡನೇ ಅಲೆಯ ಆತಂಕ ಜೋರಾಗೇ ಇರೋದ್ರಿಂದ ಹೆಚ್ಚು ಓಡಾಟ ಮಾಡುವ ಮುಂಚೆ ಸ್ವಲ್ಪ ಯೋಚಿಸುವಂತಾಗಿದೆ. ಹಾಗಾಗಿ ಆದಷ್ಟು ರೆಸಾರ್ಟ್, ಹೋಮ್​ಸ್ಟೇಗಳಲ್ಲಿ ತಂಗಿ ಅದರ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ಕೊಡುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಗಲು ಕೋವಿಡ್ ಪರೀಕ್ಷೆ ಜೊತೆಗೆ ನಾನಾ ನಿಯಮಗಳ ಪಾಲನೆ, ಒಂದು ವೇಳೆ ಅಲ್ಲಿ ಪರೀಕ್ಷಿಸಬೇಕಾಗಿ ಬಂದು ಪಾಸಿಟಿವ್ ಎಂದಾದರೆ ಚಿಕಿತ್ಸೆ, ಕ್ವಾರಂಟೈನ್ ವ್ಯವಸ್ಥೆ ಹೇಗೆ ಎನ್ನುವುದರ ಬಗ್ಗೆಯೆಲ್ಲಾ ಆಲೋಚಿಸಿ ಆದಷ್ಟೂ ಸ್ಥಳೀಯ ಟ್ರಿಪ್ ಗಳ ಬಗ್ಗೆಯೇ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹೋಮ್​ ಸ್ಟೇ ನಡೆಸುವ ವಿಜಯೇಂದ್ರ ಕೆ ವೈ ಹೇಳುವಂತೆ ಜನ ರೂಂಗಳ ಬಗ್ಗೆ ವಿಚಾರಿಸುವ ಧಾಟಿಯೇ ಬದಲಾಗಿದೆ. ಇಡೀ ಹೋಮ್​ ಸ್ಟೇನಲ್ಲಿ ಎಷ್ಟು ರೂಂಗಳಿವೆ, ಅದರಲ್ಲಿ ನಾವು ಬರುವ ಸಂದರ್ಭದಲ್ಲಿ ಎಷ್ಟು ಜನ ಇರುತ್ತಾರೆ, ಊಟ ತಿಂಡಿ ಎಲ್ಲರೂ ಜೊತೆಯಾಗಿ ಮಾಡಬೇಕಾ ಅಥವಾ ಕೋಣೆಗೇ ಸರಬರಾಜು ಮಾಡುತ್ತೀರಾ, ದಿನಕ್ಕೆ ಎಷ್ಟು ಬಾರಿ ಕೋಣೆಯನ್ನು ಸ್ವಚ್ಛಗೊಳಿಸುತ್ತೀರಾ, ಸ್ಯಾನಿಟೈಸ್ ಮಾಡಲು ವ್ಯವಸ್ಥೆ ಇದೆಯಾ ಎನ್ನುವ ನೂರಾರು ಎಚ್ಚರಿಕೆಯ ಪ್ರಶ್ನೆಗಳನ್ನು ಕೇಳಿಕೊಂಡೇ ಬುಕಿಂಗ್ ಮಾಡುತ್ತಿದ್ದಾರಂತೆ. ಅದರಲ್ಲೂ ತಮ್ಮೊಂದಿಗೆ ಹಿರಿಯರು ಅಥವಾ ಮಕ್ಕಳನ್ನು ಕರೆದುಕೊಂಡು ಬರುವವರಿಗೆ ಪ್ರಶ್ನೆಗಳು ತುಸು ಹೆಚ್ಚೇ ಎನ್ನುತ್ತಾರವರು.

ಇನ್ನು ಮಡಿಕೇರಿ ಜಿಲ್ಲೆಯಲ್ಲಿ ಸದ್ಯ ಕೋವಿಡ್ ನಿರ್ಬಂಧಗಳಿಂದಾಗಿ ಹೆಚ್ಚಾಗಿ ಹೋಟೆಲುಗಳಲ್ಲಿ ಬುಕಿಂಗ್ ಮಾಡುತ್ತಿಲ್ಲ. ಆದರೆ ರೆಸಾರ್ಟ್ ಮತ್ತು ಹೋಮ್​ ಸ್ಟೇಗಳಲ್ಲಿ ಪ್ರವಾಸಿಗರು ಆರಾಮಾಗಿ ಉಳಿಯುತ್ತಿದ್ದಾರೆ. ಈ ಎಲ್ಲಾ ಕಡೆಗಳಲ್ಲಿ ಹಿಂದಿಗಿಂತ ಈಗಿನ ಬಾಡಿಗೆ ದರಗಳಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಆದರೆ ಕೆಲವು ಕಡೆ ಮಾತ್ರ ಹೆಚ್ಚುವರಿಯಾಗಿ ಮಾಸ್ಕ್, ಸ್ಯಾನಿಟೈಸರ್ ಗಳ ಬಳಕೆಯ ಶುಲ್ಕವನ್ನು ಗ್ರಾಹಕರೇ ನೀಡಬೇಕಾಗಿದೆ. ಆದರೂ ಸುಮಾರು ಒಂದು ವರ್ಷದಿಂದ ಮನೆಯೊಳಗೇ ಬಂಧಿಯಾದಂತೆ ಎನಿಸಿದ ಜನರಿಗೆ ಅಗತ್ಯವಾಗಿ ಬೇಕಾದ ವಿರಾಮವನ್ನು ಈ ಸ್ಥಳಗಳು ನೀಡುತ್ತಿವೆ. ತಾವಾಗೇ ಸ್ವಂತ ವಾಹನಗಳಲ್ಲಿ ಹೋಗುವವರಲ್ಲದೇ ಬಾಡಿಗೆ ವಾಹನಗಳಲ್ಲಿ ಹೋಗುವವರೂ ಹೆಚ್ಚಾಗಿ ಮಡಿಕೇರಿ ಮತ್ತು ಚಿಕ್ಕಮಗಳೂರಿನ ನಾನಾ ಭಾಗಗಳಿಗೇ ಹೆಚ್ಚು ಬುಕಿಂಗ್ ಮಾಡುತ್ತಿದ್ದಾರೆ ಎನ್ನುತ್ತಾರೆ ಟೂರಿಸ್ಟ್ ವಾಹನ ಮಾಲಿಕ ಶಿವರಾಜು.

ಹೆಚ್ಚಾಗಿ ಬೆಂಗಳೂರಿನಿಂದ ಜನ ಚಿಕ್ಕಮಗಳೂರು ಮತ್ತು ಮಡಿಕೇರಿಗಳತ್ತ ತೆರಳುತ್ತಿದ್ದಾರೆ. ಈಗ ಬೇಸಿಗೆಯೂ ಇರುವುದರಿಂದ ತಂಪಾದ ಈ ಪ್ರದೇಶಗಳಲ್ಲಿ ಸಮಯ ಕಳೆಯಲು ಇಚ್ಛಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಆದರೆ ಕೋವಿಡ್ ಎರಡನೇ ಅಲೆಗಿಂತ ಮೊದಲು ಉತ್ತರ ಭಾರತದಿಂದ ಹೆಚ್ಚು ಜನ ರಾಜ್ಯಕ್ಕೆ ಪ್ರವಾಸ ಬರುತ್ತಿದ್ದರು. ಆದರೆ ಈಗ ಕೋವಿಡ್ ನಿಯಮಗಳು ಬಿಗಿಯಾಗಿರೋದ್ರಿಂದ ಅವರ ಸಂಖ್ಯೆ ಇಳಿಮುಖವಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಸುಮಾರು 10 ತಿಂಗಳವರಗೆ ಯಾವುದೇ ವಹಿವಾಟು ಇಲ್ಲದೆ ಆರ್ಥಿಕ ಹೊಡೆತದಿಂದ ಜರ್ಝರಿತವಾಗಿದ್ದ ಪ್ರವಾಸೋದ್ಯಮ ಈಗೀಗ ಚಿಗುರಿಕೊಳ್ತಿದೆ. ಎರಡನೇ ಅಲೆಯ ಹೊಡೆತಕ್ಕೆ ಮತ್ತೆಲ್ಲಿ ತಮ್ಮ ಪರಿಸ್ಥಿತಿ ಹಾಗೇ ಆಗುತ್ತದೋ ಎನ್ನುವ ಆತಂಕವಂತೂ ಅವರೆಲ್ಲರಿಗೆ ಇದ್ದೇ ಇದೆ.

ಆಗಿದ್ದಾಗ್ಲಿ, ಇಷ್ಟು ದಿನ ಒದ್ದಾಡಿದ್ದಾಗಿದೆ. ನಿಯಮಗಳು ಮತ್ತಷ್ಟು ಬಿಗಿಯಾಗುವ ಮುನ್ನ ಒಂದು ಸಣ್ಣ ಟ್ರಿಪ್ ಮಾಡಿ ಬಿಡೋಣ ಎಂದು ಆಲೋಚಿಸಿ ಹಸಿರ ಸಿರಿಯೆಡೆ ತೆರಳುವ ನಗರವಾಸಿಗಳಿಗೇನೂ ಕಡಿಮೆಯಿಲ್ಲ. ಹಸಿರ ನಡುವೆ ಸುಮ್ಮನೆ ಒಂದು ವಾಕ್, ನದಿಯ ದಡದ ಪಕ್ಕದಲ್ಲೇ ಒಂದು ಇಳಿಸಂಜೆ, ಝರಿಯ ಕೆಳಗೆ ತಲೆಯೊಡ್ಡುವ ಖುಷಿಯ ಮುಂದೆ ಬದುಕು ಅರಳುತ್ತದೆ. ಮಲೆನಾಡಿನ ತಣ್ಣಗಿನ ಬೆಳಗು, ಶುದ್ಧ ಗಾಳಿ, ಹಕ್ಕಿಗಳ ಚಿಲಿಪಿಲಿ, ಸಣ್ಣಗೆ ಹರಿಯುವ ನೀರಿನ ಸದ್ದು, ಘಮ್ಮೆನ್ನುವ ಕಾಡು ಹೂಗಳ ಸುಗಂಧ ಎಲ್ಲವೂ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿರುವುದು ಅತಿಶಯೋಕ್ತಿಯಲ್ಲ.
Published by:Soumya KN
First published: