ಕೋಲಾರ: ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲ ಚಿಕ್ಕತಿರುಪತಿ ಎಂತಲೇ ಭಕ್ತರಿಂದ ಕರೆಸಿಕೊಳ್ಳುವ ಪುಣ್ಯ ಕ್ಷೇತ್ರವಾಗಿದೆ. ಅಭಯ ಹಸ್ತವನ್ನು ಹೊಂದಿರುವ ಇಲ್ಲಿಯ ವೆಂಕಟೇಶ್ವರನ ಮೂರ್ತಿ ಕರುಣಾಮಯಿ ಶಕ್ತಿಯನ್ನ ಹೊಂದಿರುವುದಾಗಿ ಭಕ್ತರ ನಂಬಿಕೆಯಾಗಿದೆ. ಆದರೆ ಲಾಕ್ಡೌನ್ ಅನ್ಲಾಕ್ ಪ್ರಕ್ರಿಯೆಯಲ್ಲಿ ತೆರೆದ ದೇಗುಲಕ್ಕೆ ಇದೀಗ ಕೊರೋನಾ ಭೀತಿ ಎದುರಾಗಿದೆ. ದೇಗುಲಕ್ಕೆ ಅಂತರರಾಜ್ಯ ಭಕ್ತರು ಆಗಮಿಸುತ್ತಾರೆ ಎನ್ನುವ ಆತಂಕದಿಂದ ಸುತ್ತಲಿನ ನಿವಾಸಿಗಳಿಗೂ, ಗ್ರಾಮಗಳಿಗೂ ಕೊರೊನಾ ಹರಡುವಿಕೆ ಭೀತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಸಭೆ ಸೇರಿದ್ದ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯವರು, ದೇಗುಲ ಸಿಬ್ಬಂದಿ, ಆಡಳಿತ ಮಂಡಳಿ, ಸ್ಥಳೀಯ ಸಂಘ ಸಂಸ್ಥೆಗಳು ದೇಗುಲದ ದರ್ಶನ ವ್ಯವಸ್ಥೆಯನ್ನೇ ನಿಷೇದಿಸುವಂತೆ ಒತ್ತಾಯ ಮಾಡಿದ್ದರು. ಹೀಗಾಗಿ ಮಾಲೂರು ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ದೇಗುಲ ಆಡಳಿತ ಮಂಡಳಿಯ ಅಧಿಕಾರಿಗಳಿಗೆ ಸೂಕ್ಷ್ಮ ವರದಿಯನ್ನ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು, ಅದರಂತೆ ಅಧಿಕಾರಿಗಳು ಭಕ್ತರು ಹೆಚ್ಚು ಆಗಮಿಸುವ ದಿನದಂದು ದರ್ಶನ ವ್ಯವಸ್ಥೆ ರದ್ದು ಮಾಡುವ ಕ್ರಮಕ್ಕೆ ಶಿಪಾರಸು ಮಾಡಿದ್ದಾರೆ. ಹೀಗಾಗಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ಮನವಿಯ ಮೇರೆಗೆ ವಾರದಲ್ಲಿ ಶನಿವಾರ ಹಾಗು ಭಾನುವಾರ ದೇವರ ದರ್ಶನ ಸ್ಥಗಿತ ಮಾಡುವಂತೆ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಆಯುಷ್ಮಾನ್ ಕಾರ್ಡ್ ಇದ್ದರೆ ಖಾಸಗಿ ಆಸ್ಪತ್ರೆಯಲ್ಲೂ ಕೋವಿಡ್ ಚಿಕಿತ್ಸೆ ಉಚಿತ: ಬಾಗಲಕೋಟೆ ಜಿಲ್ಲಾಡಳಿತ ಕ್ರಮ
ಆಷಾಢ ಮಾಸದಲ್ಲಿ ಹೆಚ್ಚು ಕೊರೋನಾತಂಕ:
ಈಗಾಗಲೇ ಚಿಕ್ಕತಿರುಪತಿ ಗ್ರಾಮದ 1 ಕಿಲೋ ಮೀಟರ್ ವ್ಯಾಪ್ತಿಯ ಅಂಚೆ ಮುಸ್ಕೂರು ಗ್ರಾಮದಲ್ಲಿ ಒಬ್ಬರಿಗೆ ಕೊರೊನಾ, 2 ಕಿಮೀ ದೂರದ ಆಲಂಬಾಡಿ ಗ್ರಾಮದ ಒಂದೇ ಕುಟುಂಬದ ಮೂವರಿಗೆ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ, ಸಹಜವಾಗಿ ಚಿಕ್ಕತಿರುಪತಿ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯದಲ್ಲಿ ಇದೀಗ ಆಷಾಢ ಇದ್ದು ನೆರೆಯ ತಮಿಳುನಾಡು, ಆಂದ್ರದಲ್ಲಿ ಆಷಾಢ ಮಾಸದಲ್ಲಿ ಹೆಚ್ಚಿಗೆ ಮದುವೆ ಸಮಾರಂಭ, ಕೌಟುಂಬಿಕ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ. ಹೀಗಾಗಿ ನೆರೆಯ ಎರಡು ರಾಜ್ಯಗಳಿಂದಲೇ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಿರುವ ಕಾರಣ, ಜನರ ಮನವಿಯಂತೆ ಅನಿವಾರ್ಯವಾಗಿ ದೇಗುಲವನ್ನ ಎರಡು ದಿನ ಮುಚ್ಚುವಂತೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ವಾರದಲ್ಲಿ ಉಳಿದ ದಿನಗಳಲ್ಲಿ ದೇಗುಲ ತೆರೆಯಲಿದ್ದು ಭಕ್ತರು ಎಂದಿನಂತೆ ದೇವರ ದರ್ಶನ ಪಡೆದುಕೊಳ್ಳಬಹುದು.
ಒಟ್ಟಿನಲ್ಲಿ ಕೊರೊನಾ ಭೀತಿಯ ಪರಿಣಾಮ ಹಲವು ನಗರಗಳಲ್ಲಿ ವರ್ತಕರು ಸ್ವಯಂ ಲಾಕ್ ಡೌನ್ ಪಾಲಿಸಲು ಮುಂದಾಗಿದ್ದು, ಇದೀಗ ನೆರೆಯ ರಾಜ್ಯದ ಭಕ್ತರಿಂದ ಕೊರೊನಾ ಹರಡದಂತೆ ಜಾಗೃತಿ ವಹಿಸಲು, ದೇಗುಲನ್ನೇ ಬಂದ್ ಮಾಡುವ ಆದೇಶವನ್ನ ಚಿಕ್ಕತಿರುಪತಿ ಗ್ರಾಮಸ್ಥರು ಸ್ವಾಗತಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ