ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆ ಒತ್ತುವರಿ; ಅಕ್ರಮವಾಗಿ ಮನೆಗಳ ನಿರ್ಮಾಣ

ಶೆಟ್ಟಿಹಳ್ಳಿ ಕೆರೆ ಒತ್ತುವರಿ

ಶೆಟ್ಟಿಹಳ್ಳಿ ಕೆರೆ ಒತ್ತುವರಿ

ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಬಸ್ ನಿಲ್ದಾಣದ ಸಮೀಪವೇ ಇರುವ ಶೆಟ್ಟಿಹಳ್ಳಿ ಕೆರೆಯನ್ನ ಒತ್ತುವರಿ ಮಾಡಲಾಗುತ್ತಿದೆ. ಕೆರೆ ಜಾಗದಲ್ಲಿ ಅಕ್ರಮವಾಗಿ ಮನೆ, ಶೆಡ್​ಗಳನ್ನ ನಿರ್ಮಿಸಲಾಗಿದ್ದು, ಇಂತಹ 26 ಮಂದಿಯನ್ನು ಗುರುತಿಸಲಾಗಿದೆ.

  • Share this:

ರಾಮನಗರ: ಕೆರೆಗಳ ಸಂರಕ್ಷಣೆಗೆ ಅನೇಕ ಹೋರಾಟಗಳು ನಡೆಯುತ್ತಿರುವ ಮಧ್ಯೆ ಚನ್ನಪಟ್ಟಣದ ಮಧ್ಯ ಭಾಗದಲ್ಲೇ ಕೆರೆಯೊಂದನ್ನು ರಾಜಾರೋಷವಾಗಿ ಒತ್ತುವರಿ ಮಾಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಶೆಟ್ಟಿಹಳ್ಳಿ ಕೆರೆ ಒತ್ತುವರಿ ಕಾರ್ಯ ನಡೆಯುತ್ತಿದ್ದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲವೆಂಬ ಆರೋಪ ಕೇಳಿ ಬಂದಿದೆ. ಕೆರೆಯನ್ನ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.


ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಮಂಗಳವಾರಪೇಟೆಯ ಸರ್ವೆ ನಂ.13 ರ ಶೆಟ್ಟಿಹಳ್ಳಿ ಕೆರೆ ಜಾಗ ಒಟ್ಟು 20.14 ಎಕರೆಯಲ್ಲಿದ್ದು, ಅದರಲ್ಲಿ 1.28 ಎಕರೆ ಜಾಗವನ್ನ 26 ಜನರು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ. ಕೆರೆಗೆ ಅಂಟಿಕೊಂಡಿರುವ ಇಂದಿರಾ ಕಾಟೇಜ್ ಬಡಾವಣೆಯ ಜನರು ನಿಧಾನವಾಗಿ ಕೆರೆ ಜಾಗವನ್ನ ಒತ್ತುವರಿ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ನಾವು ಲೋಕಾಯುಕ್ತಕ್ಕೆ ದೂರು ನೀಡಿದ್ದ ಸಂದರ್ಭದಲ್ಲಿ ಅಧಿಕಾರಿಗಳ ವರ್ಗ ಕೆರೆ ಜಾಗವನ್ನ ಸರ್ವೆ ಮಾಡಿ ಅಕ್ರಮವಾಗಿ ನಿರ್ಮಾಣವಾಗಿರುವ ಮನೆಗಳನ್ನ ತೆರವು ಮಾಡಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿ 13 ಜನರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದರು. ಹಾಗಾಗಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳು, ಮನೆಗಳನ್ನ ತೆರವು ಮಾಡುವ ಕಾರ್ಯ ಸ್ಥಗಿತವಾಗಿದೆ. ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಸಹ ಈ ಕೆರೆಯ ಬಗ್ಗೆ ಗಮನಹರಿಸುತ್ತಿಲ್ಲ, ಅಧಿಕಾರಿಗಳು ಸಹ ಸುಮ್ಮನಿದ್ದಾರೆಂದು ಆರೋಪಿಸಿದ್ದಾರೆ.


ಇದನ್ನೂ ಓದಿ: Blackmail Case - ಅಶ್ಲೀಲ ವಿಡಿಯೋ ಸೆರೆ ಹಿಡಿದು ಯುವತಿಗೆ ಬ್ಲ್ಯಾಕ್​ಮೇಲ್; ಆಟೋ ಚಾಲಕನ ಬಂಧನ


ಇನ್ನು ಶೆಟ್ಟಿಹಳ್ಳಿ ಕೆರೆಯ ಅರ್ಧದಷ್ಟು ಜಾಗವನ್ನ ಈಗಾಗಲೇ ಒತ್ತುವರಿದಾರರು ಆಕ್ರಮಿಸಿಕೊಂಡಿದ್ದಾರೆ. ಕೆರೆ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನ, ಕುರಿ, ಮೇಕೆ ಶೆಡ್‌ಗಳನ್ನ ನಿರ್ಮಿಸಲಾಗುತ್ತಿದೆ. ಆದರೂ ಸಹ ಚನ್ನಪಟ್ಟಣ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನ್ಯೂಸ್18 ಜೊತೆಗೆ ಮಾತನಾಡಿರುವ ಚನ್ನಪಟ್ಟಣ ತಹಶೀಲ್ದಾರ್ ನಾಗೇಶ್, ನಾವು ಈಗಾಗಲೇ ಕೆರೆ ಜಾಗವನ್ನ ಸರ್ವೆ ಮಾಡಿ ಅಕ್ರಮವಾಗಿ ನಿರ್ಮಾಣವಾಗಿರುವ ಮನೆಗಳನ್ನ ತೆರವು ಮಾಡಲು ಮುಂದಾಗಿದ್ದೆವು. ಆದರೆ ಅಷ್ಟರಲ್ಲಿ ಅಲ್ಲಿ ವಾಸ ಮಾಡುತ್ತಿರುವ 13 ಜನರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಒಟ್ಟು 26 ಜನರು ಕೆರೆ ಜಾಗವನ್ನ ಒತ್ತುವರಿ ಮಾಡಿದ್ದಾರೆ. ಆದರೆ ತಕ್ಷಣವೇ ಸರ್ಕಾರದ ಪರವಾಗಿ ವಕೀಲರನ್ನ ನೇಮಿಸಿಕೊಂಡು ಅಕ್ರಮವಾಗಿ ನಿರ್ಮಾಣವಾಗಿರುವ ಜಾಗದ ಬಗ್ಗೆ ಕೋರ್ಟ್‌ಗೆ ಮನವರಿಕೆ ಮಾಡಿ, ಈ ವಿಚಾರವಾಗಿ ಬಂದಿರುವ ತಡೆಯಾಜ್ಞೆಯನ್ನ ರದ್ದುಪಡಿಸಿದ ನಂತರ ಅಕ್ರಮವಾಗಿ ನಿರ್ಮಾಣವಾಗಿರುವ ಮನೆಗಳನ್ನ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.


ಇದನ್ನೂ ಓದಿ: ನಂಜನಗೂಡು ರಥೋತ್ಸವದಲ್ಲಿ ವಿಘ್ನ: ಮುರಿದುಬಿದ್ದು ಪುಡಿಪುಡಿಯಾದ ಪಾರ್ವತಿದೇವಿ ರಥದ ಚಕ್ರ


ಒಟ್ಟಾರೆ ಕೆರೆಗಳನ್ನ ಉಳಿಸಬೇಕೆಂದು ಸರ್ಕಾರ ಹಾಗೂ ನ್ಯಾಯಾಲಯಗಳೇ ತಿಳಿಸಿದ್ದರೂ ಸಹ ಈ ಕೆರೆಯನ್ನ ಮುಚ್ಚಿ ಅಕ್ರಮವಾಗಿ ಮನೆಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾದ ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕರಾದ ಹೆಚ್.ಡಿ. ಕುಮಾರಸ್ವಾಮಿ, ಸಚಿವ ಸಿ.ಪಿ. ಯೋಗೇಶ್ವರ್‌ರವರ ಜವಾಬ್ದಾರಿಯೂ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೆರೆಯನ್ನ ಉಳಿಸುವ ಪ್ರಯತ್ನ ಮಾಡಲಿ ಎಂಬುದೇ ನಮ್ಮ ಆಶಯ.


ವರದಿ: ಎ.ಟಿ.ವೆಂಕಟೇಶ್

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು