ಚನ್ನಪಟ್ಟಣದಲ್ಲಿ ಅಪ್ರಾಪ್ತೆಯ ರೇಪ್ ಎಸಗಿ ಕಳ್ಳತನ ಮಾಡಿದ್ದ ಖದೀಮನ ಬಂಧನ

ಆರೋಪಿ ಪುನೀತ್​ನನ್ನು ಬಂಧಿಸಿದ ಚನ್ನಪಟ್ಟಣ ಪೊಲೀಸರು

ಆರೋಪಿ ಪುನೀತ್​ನನ್ನು ಬಂಧಿಸಿದ ಚನ್ನಪಟ್ಟಣ ಪೊಲೀಸರು

ಜುಲೈ 28ರಂದು ಚನ್ನಪಟ್ಟಣದ ಅಕ್ಕೂರು ಸಮೀಪ 8 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಒಡವೆಗಳನ್ನ ಕಸಿದುಕೊಂಡು ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  • Share this:

ರಾಮನಗರ (ಚನ್ನಪಟ್ಟಣ): ಕಳೆದ ತಿಂಗಳು ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಾಮನಗರ ಎಸ್​ಪಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.


ಜುಲೈ 28ರಂದು ರಾಮನಗರ ಜಿಲ್ಲೆ ಚನ್ನಪಟ್ಟಣದ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್​ನಲ್ಲಿ ಬಂದ ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಯನ್ನ ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಆಕೆಯ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಕಿತ್ತುಕೊಳ್ಳುತ್ತಾನೆ. ನಂತರ ಅಕೆಗೆ ಪ್ರಜ್ಞೆತಪ್ಪಿಸಿ ಅಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನೆನ್ನಲಾಗಿದೆ.


ಈ ಕುರಿತಾಗಿ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ್ದ ಪೊಲೀಸರ ತಂಡ ಅತನನ್ನು ಪತ್ತೆ ಮಾಡಿದ್ದಾರೆ. ಆಗಸ್ಟ್ 11 ರಂದು ಪ್ರಕರಣದಲ್ಲಿನ ಆರೋಪಿ 30 ವರ್ಷ ವಯಸ್ಸಿನ ಪುನೀತ್‌ ಬಿನ್ಕಪನಿ ಜಿಕ್ಕಯ್ಯ ಎಂಬಾತನನ್ನ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈತ ವೃತ್ತಿಯಲ್ಲಿ ಚಾಲಕನಾಗಿದ್ದು, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ರುದ್ರಾಕ್ಷಿಪುರ ಗ್ರಾಮದವನು ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಹುಬ್ಬಳ್ಳಿಯಲ್ಲಿನ ಭಾರತದ ಏಕೈಕ ಅಧಿಕೃತ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಕೊರೋನಾ ಸಂಕಷ್ಟ


ಆರೋಪಿಯಿಂದ ಅಪ್ರಾಪ್ತ ಬಾಲಕಿಯ ಕಿವಿಯಿಂದ ಕಿತ್ತುಕೊಳ್ಳಲಾಗಿದ್ದ ಚಿನ್ನದ ಓಲೆ, ಕೃತ್ಯಕ್ಕೆ ಬಳಸಿದ್ದ ಡಿಯೋ ಸ್ಕೂಟರ್‌, ಎರಡು ಮೊಬೈಲ್‌ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿ ಶ್ರೀರಂಗಪಟ್ಟಣ, ಹುಳಿಮಾವು, ಮೈಕೋ ಬಡಾವಣಿ, ಚನ್ನಪಟ್ಟಣ ಟೌನ್‌, ರಾಣಿಬೆನ್ನೂರು, ಹಲಗೂರು, ಅಕ್ಕೂರು, ಮಳವಳ್ಳಿ, ರಾಮನಗರದ ಐಜೂರು, ಹೆಬ್ಬಗೋಡಿ, ಹುಲಿಯೂರು ದುರ್ಗ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 13 ದ್ವಿಚಕ್ರ ವಾಹನಗಳು, ಹಾಗೂ ಮೊಬೈಲ್ ಸೇರಿ ಒಟ್ಟು 6 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ರಾಮನಗರದಲ್ಲಿ 4, ಮಂಡ್ಯ 3, ಹಾವೇರಿ 1, ಬೆಂಗಳೂರು ನಗರ 2, ಬೆಂಗಳೂರು ಗ್ರಾಮಾಂತರ 1, ತುಮಕೂರಿನಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣ ದಾಖಲಾಗಿದೆ ಎಂದು ರಾಮನಗರ ಎಸ್​ಪಿ ಅನೂಪ್ ಎ ಶೆಟ್ಟಿ ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದಾರೆ.


ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು