• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚನ್ನಪಟ್ಟಣ ಆಸ್ಪತ್ರೆ ವೈದ್ಯರ ಯಡವಟ್ಟು; ಟೆಸ್ಟ್ ಮಾಡಿಸದಿದ್ದರೂ ವರದಿ ಪಾಸಿಟಿವ್

ಚನ್ನಪಟ್ಟಣ ಆಸ್ಪತ್ರೆ ವೈದ್ಯರ ಯಡವಟ್ಟು; ಟೆಸ್ಟ್ ಮಾಡಿಸದಿದ್ದರೂ ವರದಿ ಪಾಸಿಟಿವ್

ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ

ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ

ಚನ್ನಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರ ಯಡವಟ್ಟು ಸಾರ್ವಜನಿಕರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಪರೀಕ್ಷೆಯನ್ನೇ ಮಾಡಿಸದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ವರದಿ ನೀಡಿ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

  • Share this:

ರಾಮನಗರ(ಚನ್ನಪಟ್ಟಣ): ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕೊರೋನಾ ಎಂಬ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕೇವಲ ಎರಡು ತಿಂಗಳಲ್ಲಿ ಸಾವಿರ ಗಡಿ ದಾಟಿರೋ ಕೊರೋನಾ, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಈ ಮಧ್ಯೆ ಚನ್ನಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರು ಮಾಡಿರೋ ಯಡವಟ್ಟು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.


ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಂಡಿಪೇಟೆ ನಿವಾಸಿ ವೃದ್ದ ಅಮೀರ್ ಜಾನ್ ಎಂಬುವವರು, ಜುಲೈ 29 ಕ್ಕೆ ಕೊವಿಡ್ ಪರೀಕ್ಷೆಮಾಡಿಸಿಕೊಳ್ಳಲು ಹೋಗಿದ್ದಾರೆ. ಮೊದಲಿಗೆ ಮನೆ ವಿಳಾಸ, ಫೋನ್ ನಂಬರ್ ಕೊಟ್ಟು ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಟೆಸ್ಟಿಂಗ್ ಕಿಟ್ ನೀಡಿದ್ದಾರೆ. ಆದ್ರೆ ಈ ವೇಳೆ ಮನೆಯಿಂದ ಕಾಲ್ ಬಂತು ಎಂದು ಅವರು ಪರೀಕ್ಷೆ ಮಾಡಿಸಿಕೊಳ್ಳದೇ ಮನೆಗೆ ವಾಪಾಸ್ ಹೋಗಿದ್ದಾರೆ. ಆದರೆ ನಿನ್ನೆ ಅವರ ಮೊಬೈಲ್ ನಂಬರ್​ಗೆ ಪಾಸಿಟಿವ್ ಬಂದಿದೆ ಎಂದುಮೆಸೇಜ್ ಬಂದಿದೆ. ಅಲ್ಲದೆ ತಾಲೂಕು ಆಸ್ಪತ್ರೆಯಿಂದಲೂ ಕೂಡ ನಿಮಗೆ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಕುಟುಂಬದ ಸದಸ್ಯರು, ನಾವು ಪರೀಕ್ಷೆ ಮಾಡಿಸಿಕೊಂಡಿಲ್ಲ. ನೀವು ಕೊಟ್ಟ ಟೆಸ್ಟ್ ಕಿಟ್ ನಮ್ಮ ಬಳಿಯೇ ಇದೆ. ಹೇಗೆ ಪಾಸಿಟಿವ್ ಬರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪರೀಕ್ಷೆ ಮಾಡಿಸಿಕೊಳ್ಳಲು ಕೊಟ್ಟಿದ್ದ ಕಿಟ್ ಅನ್ನ ಇಂದು ವೈದ್ಯರು ವಾಪಾಸ್ ಪಡೆದಿದ್ದಾರೆ.


ಇದನ್ನೂ ಓದಿ: ತಡೆಯಾಜ್ಞೆ ತೆರವು: ಸಾಲೂರು ಮಠದ ಉತ್ತರಾಧಿಕಾರಿ ನೇಮಕ ಹಾದಿ ಸುಗಮ


ಜುಲೈ 29 ರಂದು 33 ಜನರ ಸ್ಯಾಂಪಲ್ ಪಡೆದಿರುವುದಾಗಿ ಹೇಳುತ್ತಿರುವ ಆಸ್ಪತ್ರೆ ವೈದ್ಯರು, ಈ ಟೆಸ್ಟ್ ಕಿಟ್ ಅನ್ನ ಲ್ಯಾಬ್​ಗೆ ಕಳುಹಿಸದೇ ವರದಿ ಬರಲು ಸಾಧ್ಯ ಹೇಗೆ? ಮನೆಗೆ ಟೆಸ್ಟ್ ಕಿಟ್ ಅನ್ನ ತೆಗೆದುಕೊಂಡು ಹೋಗಿದ್ದಕ್ಕೆ ವಾಪಾಸ್ ಟೆಸ್ಟ್ ಕಿಟ್ ಪಡೆದು, ವೈದ್ಯರು ಅಮೀರ್ ಜಾನ್ ಕುಟುಂಬಸ್ಥರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಆದರೆ ಟೆಸ್ಟ್ ಕಿಟ್ ಇವರ ಬಳಿಯೇ ಇದ್ದಾಗ ಲ್ಯಾಬ್​ಗೆ ಕಳುಹಿಸಿದ್ದ ಟೆಸ್ಟ್ ಕಿಟ್ ಯಾರದ್ದು ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಆ ಟೆಸ್ಟ್ ಕಿಟ್ ಬೇರೆ ಎಲ್ಲೂ ಸಿಗುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತದೆ. ಅಲ್ಲದೆ ಅದರಮೇಲೆ ವ್ಯಕ್ತಿಯ ಹೆಸರು ನಮೂದಿಸಲಾಗಿರುತ್ತದೆ. ಹೀಗಿದ್ದಾಗ ಟೆಸ್ಟ್​ಗೆ ಕಳುಹಿಸದೇ ಪಾಸಿಟಿವ್ ವರದಿ ಬರಲು ಹೇಗೆ ಸಾಧ್ಯ?


ಇಷ್ಟೆಲ್ಲ ಗೊಂದಲಗಳು ಮೂಡಿದ ಮೇಲೆ ನಿನ್ನೆ ಮತ್ತೊಮ್ಮೆ ಅಮೀರ್ ಜಾನ್​ಗೆ ಪರೀಕ್ಷೆ ಮಾಡಲಾಗಿದೆ. ಆ ವರದಿಯಲ್ಲಿ ನೆಗಟಿವ್ ಎಂದು ಬಂದಿದೆ. ಈ ಬಗ್ಗೆ ತಾಲೂಕು ಆಸ್ಪತ್ರೆಯ ವೈದ್ಯರನ್ನ ಕೇಳಿದ್ರೆ ಹಾರಿಕೆ ಉತ್ತರವನ್ನ ನೀಡುತ್ತಿದ್ದಾರೆ. ಒಟ್ಟಾರೆ ತಾಲೂಕು ಆಸ್ಪತ್ರೆ ವೈದ್ಯರು ಮಾಡುತ್ತಿರುವ ಯಡವಟ್ಟಿನಿಂದ ಜನಸಾಮಾನ್ಯರು ಸಾಕಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡುತ್ತಿದೆ. ಟೆಸ್ಟ್ ಮಾಡಿಸಿಕೊಳ್ಳದೇ ಇರುವವರಿಗೂ ಪಾಸಿಟಿವ್ ಎಂದು ವರದಿ ನೀಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಳು ಗಮನಹರಿಸಬೇಕಿದೆ.


ವರದಿ: ಎ.ಟಿ. ವೆಂಕಟೇಶ್

Published by:Vijayasarthy SN
First published: