HOME » NEWS » District » CHEETAH UNWELL FROM NO FOOD AND WATER IN RAMAGANAGARA DISTRICT RHHSN ATVR

ಆಹಾರ, ನೀರಿಲ್ಲದೆ ಚಿರತೆ ಅಸ್ವಸ್ಥ, ಬನ್ನೇರುಘಟ್ಟ ವೈದ್ಯರ ತಂಡದಿಂದ ಚಿಕಿತ್ಸೆ

ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡುಪ್ರಾಣಿಗಳಿಗೆ ನಾಡಿನಲ್ಲೂ ಆಹಾರ ಸಿಗದ ಕಾರಣ ಈ ರೀತಿ ಪರದಾಡುತ್ತಿವೆ. ಇನ್ನು ಕೆಲವು ರಾಷ್ಟ್ರೀಯ ಹೆದ್ದಾರಿ ದಾಟುವ ಸಮಯದಲ್ಲಿ ಅಪಘಾತಗಳಿಂದ ಸಾವನ್ನಪ್ಪುತ್ತಿವೆ. ಹಾಗಾಗಿ ಕಾಡುಪ್ರಾಣಿಗಳ ಉಳಿವಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಬೇಕಾಗಿದೆ.

news18-kannada
Updated:January 5, 2021, 4:02 PM IST
ಆಹಾರ, ನೀರಿಲ್ಲದೆ ಚಿರತೆ ಅಸ್ವಸ್ಥ, ಬನ್ನೇರುಘಟ್ಟ ವೈದ್ಯರ ತಂಡದಿಂದ ಚಿಕಿತ್ಸೆ
ಪ್ರಜ್ಞೆ ತಪ್ಪಿರುವ ಚಿರತೆ
  • Share this:
ರಾಮನಗರ : ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಅದರಲ್ಲೂ ಕಳೆದ ಎರಡ್ಮೂರು ತಿಂಗಳಿಂದ ಚಿರತೆಗಳು ಸೆರೆ ಸಿಗುವುದಕ್ಕಿಂತಲೂ ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದೇ ಹೆಚ್ಚು. ಇಲ್ಲೊಂದು ಚಿರತೆ ಕಾಡಿನಲ್ಲಿ ಆಹಾರ ಸಿಗದೇ ನಾಡಿಗೆ ಬಂದು ಪ್ರಜ್ಞೆತಪ್ಪಿ ರೈತನ ತೆಂಗಿನತೋಟದಲ್ಲಿ ಬಿದ್ದಿತ್ತು. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.

ಹೌದು, ಕಳೆದ ಎರಡ್ಮೂರು ತಿಂಗಳುಗಳಿಂದಲೂ ಸಹ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಚಿರತೆಗಳು ಸೆರೆಯಾಗುವುದಕ್ಕಿಂತಲೂ ಹೆಚ್ಚಾಗಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವುದೇ ಹೆಚ್ಚಾಗಿದೆ. ಕಳೆದ 20 ದಿನಗಳಲ್ಲಿ ಕನಕಪುರ-ದಿಂಡಿಗಲ್ಲು ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಎರಡು ಚಿರತೆಗಳು ಸಾತನೂರು ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿವೆ. ಇನ್ನು ರಾಮನಗರ ತಾಲೂಕಿನ ಚಾಮುಂಡಿಪುರ ಬಳಿಯ ರೈತನ ತೆಂಗಿನತೋಟದಲ್ಲಿ ಚಿರತೆಯೊಂದು ಪ್ರಜ್ಞೆತಪ್ಪಿ ಬಿದ್ದಿರುವ ಘಟನೆ ನಡೆದಿದೆ. ಕಾಡಿನಲ್ಲಿ ಆಹಾರ ಸಿಗದ ಹಿನ್ನೆಲೆ ಚಿರತೆ ಆಹಾರ ಹರಸಿಕೊಂಡು ನಾಡಿನತ್ತ ಮುಖಮಾಡಿದೆ. ಆದರೆ ಇಲ್ಲಿಯೂ ಸಹ ಆಹಾರ ಸಿಗದ ಕಾರಣ ತೀವ್ರ ಹೊಟ್ಟೆ ಹಸಿವಿನಿಂದಾಗಿ ತೆಂಗಿನಮರದ ಕೆಳಗೆ ಜ್ಞಾನ ತಪ್ಪಿ ಬಿದ್ದಿದೆ. ಇನ್ನು ಮುಂಜಾನೆ ತೋಟಕ್ಕೆ ಬಂದ ಗ್ರಾಮದ ಯುವಕರು ಚಿರತೆ ಬಿದ್ದಿದ್ದನ್ನು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ತಂಡ ಅರೆಪ್ರಜ್ಞಾಸ್ಥಿತಿಯಲ್ಲಿದ್ದ ಚಿರತೆಗೆ ಬಲೆಹಾಕಿ ರಕ್ಷಣೆ ಮಾಡಿದರು. ನಂತರ ಬನ್ನೇರುಘಟ್ಟದಿಂದ ಬಂದಿದ್ದ ವೈದ್ಯರ ತಂಡ ತೀವ್ರ ಸುಸ್ತಾಗಿದ್ದ ಚಿರತೆಗೆ ಪ್ರೊಟೀನ್ ಇಂಜೆಕ್ಷನ್ ನೀಡಿದರು. ನಂತರ ಬೋನಿನಲ್ಲಿ ಚಿರತೆಯನ್ನ ರೈತನ ತೋಟದಿಂದ ಅರಣ್ಯ ಇಲಾಖೆಯ ಚಿಕಿತ್ಸಾ ಕೇಂದ್ರಕ್ಕೆ ಕರೆದ್ಯೊಯ್ದರು. ಈ ಬಗ್ಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣ ಚಿರತೆಗೆ ಆಹಾರದ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹಾಗಾಗಿ ಅರಣ್ಯ ಇಲಾಖೆ ನರ್ಸರಿಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿದ ನಂತರ ಕಾಡಿಗೆ ಬಿಡಲಾಗುತ್ತದೆ. ಇದು 3 ವರ್ಷದ ಗಂಡು ಚಿರತೆಯಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಸಿಎಂ ಯಡಿಯೂರಪ್ಪ ಸಮ್ಮುಖದಲ್ಲೇ ಕೆಲ ಮಂತ್ರಿಗಳ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ!

ಕಾಡಿನಲ್ಲಿ ಸಿಗುತ್ತಿಲ್ಲ ಆಹಾರ, ನೀರು

ಹೌದು, ರಾಮನಗರ ಜಿಲ್ಲೆಯಲ್ಲಿರುವ ಸಾವನದುರ್ಗಾ ಅರಣ್ಯ ಪ್ರದೇಶ, ತೆಂಗಿನಕಲ್ಲು ಅರಣ್ಯ ಪ್ರದೇಶ, ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಚಿರತೆಗಳು ಕಾಣಿಸಿಕೊಳ್ಳುತ್ತವೆ. ಕಾಡಿನಲ್ಲಿ ಚಿರತೆಗಳಿಗೆ ಆಹಾರ, ನೀರು ಸಿಗದ ಕಾರಣ ಈ ಸಮಸ್ಯೆ ಎದುರಾಗುತ್ತಿದೆ. ಕಾಡಿನಲ್ಲಿ ಆಹಾರ, ನೀರು ಸಿಗದ ಕಾರಣ ನಾಡಿನತ್ತ ಮುಖ ಮಾಡಿರುವ ಚಿರತೆಗಳಿಗೆ ಇಲ್ಲಿಯೂ ಇದೇ ನಿರಾಸೆ ಎದುರಾಗುತ್ತಿದೆ. ಹಾಗಾಗಿ ಕೆಲವೊಂದು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದರೆ, ಇನ್ನು ಕೆಲವು ಹೀಗೆ ಹಸಿವಿನಿಂದ ಸಾಯುತ್ತಿವೆ.
ಒಟ್ಟಾರೆ ರಾಮನಗರ ಜಿಲ್ಲೆಯಲ್ಲಿರುವ ಕಾಡಿನ ಸುತ್ತಮುತ್ತಲು ಕಲ್ಲುಗಣಿಗಾರಿಕೆಗಳಿಂದ ಕಾಡುಪ್ರಾಣಿಗಳು ಕಾಡಿನಲ್ಲಿ ವಾಸಮಾಡಲು ಸಾಧ್ಯವಾಗುತ್ತಿಲ್ಲ. ಕಾಡಿನಿಂದ ನಾಡಿನತ್ತ ಬರುತ್ತಿರುವ ಕಾಡುಪ್ರಾಣಿಗಳಿಗೆ ನಾಡಿನಲ್ಲೂ ಆಹಾರ ಸಿಗದ ಕಾರಣ ಈ ರೀತಿ ಪರದಾಡುತ್ತಿವೆ. ಇನ್ನು ಕೆಲವು ರಾಷ್ಟ್ರೀಯ ಹೆದ್ದಾರಿ ದಾಟುವ ಸಮಯದಲ್ಲಿ ಅಪಘಾತಗಳಿಂದ ಸಾವನ್ನಪ್ಪುತ್ತಿವೆ. ಹಾಗಾಗಿ ಕಾಡುಪ್ರಾಣಿಗಳ ಉಳಿವಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ವಹಿಸಬೇಕಾಗಿದೆ.

ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: January 5, 2021, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories