HOME » NEWS » District » CHANNAPATTANA CONGRESS PARTY WORKERS ANGRY WITH THEM LEADERS DECISION RHHSN ATVR

ಕುದಿಯುತ್ತಿರುವ ಚನ್ನಪಟ್ಟಣ ಕಾಂಗ್ರೆಸ್, ಕಾರ್ಯಕರ್ತರು ಫುಲ್ ವೈಲೆಂಟ್; ಡಿ.ಕೆ.ಬ್ರದರ್ಸ್ ಸದ್ಯಕ್ಕೆ ಸೈಲೆಂಟ್!

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಮತದಾರರ ಗುಂಪಿದೆ. ಆದರೆ ಪಕ್ಷವನ್ನ ಸರಿಯಾಗಿ ನಡೆಸಿಕೊಂಡು ಹೋಗುವ ಸಮರ್ಥ ನಾಯಕನಿಲ್ಲದ ಕಾರಣ ಪಕ್ಷದ ಕಾರ್ಯಕರ್ತರು ಅನಿವಾರ್ಯವಾಗಿ ಬೇರೆ ಪಕ್ಷಗಳ ಕದತಟ್ಟಿ ಉಸಿರುಗಟ್ಟಿದ ವಾತವರಣದಲ್ಲಿದ್ದಾರೆ. ಆದರೆ ಕಾಂಗ್ರೆಸ್‌ಗೆ ಪ್ರಬಲ ನಾಯಕ ಎಂಟ್ರಿ ಕೊಟ್ಟರೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸಬೆಳಕು ಮೂಡಲಿದೆ ಅನ್ನೋದು ಕಟುಸತ್ಯ.

news18-kannada
Updated:December 9, 2020, 6:27 AM IST
ಕುದಿಯುತ್ತಿರುವ ಚನ್ನಪಟ್ಟಣ ಕಾಂಗ್ರೆಸ್, ಕಾರ್ಯಕರ್ತರು ಫುಲ್ ವೈಲೆಂಟ್; ಡಿ.ಕೆ.ಬ್ರದರ್ಸ್ ಸದ್ಯಕ್ಕೆ ಸೈಲೆಂಟ್!
ಡಿ.ಕೆ. ಬ್ರದರ್ಸ್
  • Share this:
ರಾಮನಗರ (ಚನ್ನಪಟ್ಟಣ): ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂದೇ ಹೇಳಲಾಗುತ್ತಿತ್ತು. ಆದರೆ ಈಗ ಬೊಂಬೆನಾಡಿನಲ್ಲಿ ತೆನೆ ಹೊತ್ತ ಮಹಿಳೆಯದ್ದೇ ಹವಾ ಜೋರಾಗಿದೆ. ಒಕ್ಕಲಿಗ ಮತದಾರರೇ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗ, ಮುಸ್ಲಿಂ ಸಮುದಾಯದ ಮತದಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್‌ಗೆ ಬಹುಪಾಲು ಹಂಚಿಹೋದರು ಸಹ ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗ ಹಾಗೂ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗಲಿವೆ ಅನ್ನೋದನ್ನು ನಾವು ನಂಬಲೇಬೇಕು. ಜೊತೆಗೆ ಇಲ್ಲಿಯವರೆಗೆ ಅದೇ ರೀತಿ ನಡೆದುಕೊಂಡು ಬಂದಿದೆ.

ಸಿ.ಪಿ.ಯೋಗೇಶ್ವರ್ ರಾಜಕೀಯ ಜೀವನಕ್ಕೆ ಕಾಂಗ್ರೆಸ್ ಅಡಿಪಾಯ!

ಹೌದು, ಮಾಜಿ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಿಜೆಪಿ ಪಕ್ಷದ ಮುಖಂಡತ್ವ ವಹಿಸಿಕೊಂಡು ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇವರು 5 ಬಾರಿ ಶಾಸಕರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿ ಒಂದು ಬಾರಿ ಬಿಜೆಪಿ ಸರ್ಕಾರದಲ್ಲಿಯೇ ಅರಣ್ಯ ಮಂತ್ರಿಗಳಾಗಿಯೂ ಅಧಿಕಾರ ನಡೆಸಿದ್ದಾರೆ. ಆದರೆ ಯೋಗೇಶ್ವರ್‌ರವರ ಈ ರಾಜಕೀಯ ಪಯಣಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಅಂದರೆ ಅದು ವಾಸ್ತವ ಸತ್ಯ.

1999 ರಿಂದ ಸತತವಾಗಿ 3 ಬಾರಿ ಶಾಸಕರಾಗಿ ಯೋಗೇಶ್ವರ್ ಆಯ್ಕೆಯಾಗಿದ್ದು ಇದೇ ಕಾಂಗ್ರೆಸ್ ಪಕ್ಷದಿಂದ. ನಂತರ ಬದಲಾದ ರಾಜಕೀಯ ಸನ್ನಿವೇಶಗಳಿಂದ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್‌ಬೈ ಹೇಳಿ ಬಿಜೆಪಿ ಪಕ್ಷದಲ್ಲಿ ಒಮ್ಮೆ ಶಾಸಕರಾದರು, ನಂತರ ಮತ್ತೆ ಬಿಜೆಪಿಗೆ ಗುಡ್ ಬೈ ಹೇಳಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಮತ್ತೆ ಕಾಂಗ್ರೆಸ್ ಗೆ ಮರಳಿ, ನಂತರ ಮತ್ತೆ ಕಾಂಗ್ರೆಸ್ ಗೆ ಕೈಕೊಟ್ಟು ಈಗ ಮತ್ತೆ ಬಿಜೆಪಿಗೆ ಸೇರಿ ಸದ್ಯ ಅಲ್ಲಿದ್ದಾರೆ. ಆದರೆ ಯೋಗೇಶ್ವರ್ ರಾಜಕೀಯ ಬದುಕಿಗೆ ತಿರುವು ಕೊಟ್ಟದ್ದು ಅಂದರೆ ಅದು ಕಾಂಗ್ರೆಸ್ ಪಕ್ಷ ಎನ್ನುವ ಮಾತು ಈಗಲೂ ತಾಲೂಕಿನ ಜನರ ಮನದಲ್ಲಿದೆ.

ನಾಯಕತ್ವದ ಕೊರತೆಯಲ್ಲಿ ನೊಂದು ಬೇಯುತ್ತಿರುವ ಕೈಪಡೆ?

ಗ್ರಾ.ಪಂ ಚುನಾವಣೆಯ ಹಿನ್ನೆಲೆ ಚನ್ನಪಟ್ಟಣದಲ್ಲಿ ಈಗಷ್ಟೇ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲೂ ಸಹ ಸಂಸದ ಡಿ.ಕೆ.ಸುರೇಶ್‌ಗೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿದ್ದವರು ಈಗ ಬೇರೆ ಪಕ್ಷಕ್ಕೆ ಸೇರಿದ್ದಾರೆ. ಆದರೆ ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವನ್ನ ಮುನ್ನಡೆಸುವ ಸಮರ್ಥ ನಾಯಕನನ್ನು ನೀವು ಗುರುತಿಸಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ನಾವು ಪಕ್ಷ ಸಂಘಟನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವೇದಿಕೆಯಲ್ಲಿಯೇ ಕಾರ್ಯಕರ್ತರು ಡಿ.ಕೆ.ಸುರೇಶ್‌ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಡಿ.ಕೆ.ಸುರೇಶ್ ಸಹ ಮಾತನಾಡಿ ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕಾಂಗ್ರೆಸ್‌ಗೆ ಒಬ್ಬ ಸಮರ್ಥ ನಾಯಕನನ್ನ ಹುಟ್ಟುಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಡಿ.ಕೆ.ಸಹೋದರರು ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕಾಂಗ್ರೆಸ್‌ಗೆ ಯಾವ ರೀತಿ ಬಲ ತುಂಬುತ್ತಾರೆಂದು ಕಾರ್ಯಕರ್ತರು ಸಹ ಕಾತುರರಾಗಿದ್ದಾರೆ.

ಕಾಂಗ್ರೆಸ್ ಮತದಾರರಿಂದಲೇ ಹೆಚ್ಡಿಕೆ ಗೆಲುವು, ಸಿಪಿವೈ ಸೋಲು!2018ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 22 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಹೀನಾಯವಾಗಿ ಸೋತಿದ್ದರು. ಆದರೆ ಈ ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆ ಹಾಗೂ ಹೆಚ್ಡಿಕೆ-ಡಿ.ಕೆ.ಬ್ರದರ್ಸ್​ ರಾಜಕೀಯವಾಗಿ ಕಟ್ಟಿಹಾಕಲು ಪಕ್ಷ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡುವ ಮೂಲಕ ಅಧಿಕಾರ ಕೊಟ್ಟಿದೆ. ಆದರೆ ಅವತ್ತು ಹೆಚ್ಡಿಕೆ ಗೆಲುವಿಗೆ, ಯೋಗೇಶ್ವರ್ ಸೋಲಿಗೆ ನೇರ ಕಾರಣಕರ್ತರಾಗಿದ್ದು ಮಾತ್ರ ಇದೇ ಕಾಂಗ್ರೆಸ್ ಪಕ್ಷದ ಮತದಾರರು ಎನ್ನುವುದು ಸಹ ಸತ್ಯ.

ಇದನ್ನು ಓದಿ: ಊರು ತುಂಬಾ ಇರೋರು ಕುರುಬರೇ, ಆದರೆ ಗ್ರಾಪಂ ಚುನಾವಣೆ ಮೀಸಲಾತಿಯಲ್ಲಿ ಈಶ್ವರಪ್ಪ ಅನ್ಯಾಯ ಮಾಡಿದರು; ಗ್ರಾಮಸ್ಥರ ಆಕ್ರೋಶ!

ಇವರಿಬ್ಬರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಹೆಚ್.ಎಂ.ರೇವಣ್ಣ 30 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೆ ಹೆಚ್ಡಿಕೆ ಗೆಲುವಿಗೆ, ಯೋಗೇಶ್ವರ್ ಸೋಲಿಗೆ ಮುಖ್ಯ ಕಾರಣ. ಯಾಕೆಂದರೆ ರೇವಣ್ಣ ಪಡೆದಿದ್ದ ಅಷ್ಟು ಮತಗಳಲ್ಲಿ ಬಹುಪಾಲು ಮತಗಳು ಯೋಗೇಶ್ವರ್ ಕಾಂಗ್ರೆಸ್‌ನಲ್ಲಿದ್ದರೆ ಅವರಿಗೆ ಹೋಗುತ್ತಿದ್ದವು, ಆದರೆ ಯೋಗೇಶ್ವರ್ ಬಿಜೆಪಿ ಪಕ್ಷಕ್ಕೆ ಹೋದ ಹಿನ್ನೆಲೆ ಅವೆಲ್ಲವೂ ಕಾಂಗ್ರೆಸ್‌ನಲ್ಲಿಯೇ ಉಳಿದವು. ಹಾಗಾಗಿ ಹೆಚ್ಡಿಕೆ ಗೆದ್ದರು, ಸಿಪಿವೈ ಸೋತರು.

ಒಟ್ಟಾರೆ ಬೊಂಬೆನಾಡು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಮತದಾರರ ಗುಂಪಿದೆ. ಆದರೆ ಪಕ್ಷವನ್ನ ಸರಿಯಾಗಿ ನಡೆಸಿಕೊಂಡು ಹೋಗುವ ಸಮರ್ಥ ನಾಯಕನಿಲ್ಲದ ಕಾರಣ ಪಕ್ಷದ ಕಾರ್ಯಕರ್ತರು ಅನಿವಾರ್ಯವಾಗಿ ಬೇರೆ ಪಕ್ಷಗಳ ಕದತಟ್ಟಿ ಉಸಿರುಗಟ್ಟಿದ ವಾತವರಣದಲ್ಲಿದ್ದಾರೆ. ಆದರೆ ಕಾಂಗ್ರೆಸ್‌ಗೆ ಪ್ರಬಲ ನಾಯಕ ಎಂಟ್ರಿ ಕೊಟ್ಟರೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸಬೆಳಕು ಮೂಡಲಿದೆ ಅನ್ನೋದು ಕಟುಸತ್ಯ.

ವರದಿ: ಎ.ಟಿ. ವೆಂಕಟೇಶ್
Published by: HR Ramesh
First published: December 9, 2020, 6:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories