ಹುಬ್ಬಳ್ಳಿ(ಏಪ್ರಿಲ್ 13): ಯುಗಾದಿ ಹಿಂದೂಗಳ ವರ್ಷಾರಂಭದ ಮೊದಲ ಹಬ್ಬ. ಹಿಂದೂ ಪಂಚಾಗದ ಪ್ರಕಾರ ಹೊಸ ವರ್ಷದ ಹಿನ್ನೆಲೆಯಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ಬೇವು-ಬೆಲ್ಲ ಸವಿದು ಬರಮಾಡಿಕೊಳ್ಳುವ ಹಬ್ಬ. ಯುಗಾದಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಭ್ರಮ ಕಳೆಕಟ್ಟುವಂತೆ ಮಾಡಿದೆ. ಮುಂಜಾನೆ ಎದ್ದು ಎಣ್ಣೆ ಸ್ನಾನ ಮಾಡಿ, ದೇವಸ್ಥಾನಕ್ಕೆ ತೆರಳಿ, ಬೇವು- ಬೆಲ್ಲ ಸವಿದು ಹಬ್ಬ ಆಚರಿಸಲಾಗುತ್ತಿದೆ.
ಹುಬ್ಬಳ್ಳಿಯ ಪ್ರಮುಖ ದೇವಾಲಯಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನ ದೇವರ ದರ್ಶನ ಪಡೆಯುತ್ತಿರೋ ದೃಶ್ಯ ಕಂಡು ಬರುತ್ತಿದೆ. ಇನ್ನು ಐತಿಹಾಸಿಕ ಉಣಕಲ್ ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯ ರಶ್ಮಿ ಶಿವಲಿಂಗ ವನ್ನು ಸ್ಪರ್ಶಿಸುವ ಘಳಿಗೆಯನ್ನು ಭಕ್ತರು ಕಣ್ಣು ತುಂಬಿಕೊಂಡರು.
ಶತಮಾನಗಳಷ್ಟು ಹಳೆಯದಾದ ಚಂದ್ರಮೌಳೇಶ್ವರನ ದರ್ಶನ ಪಡೆದರೆ ಇಷ್ಟಾರ್ಥ ಗಳು ಈಡೇರುತ್ತೆ ಎಂಬ ನಂಬಿಕೆ ಇಲ್ಲಿನ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೂರ್ಯನ ಕಿರಣಗಳು ಶಿವಲಿಂಗ ಸ್ಪರ್ಶಿಸುವುದನ್ನು ನೋಡಿ ಜನ ಭಕ್ತಯಿಂದ ಸಂಭ್ರಮಿಸಿದ್ರು. 12 ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಈ ದೇವಸ್ಥಾನವನ್ನ ಕಟ್ಟಲಾಗಿದೆ. ಈ ದೇವಸ್ಥಾನದಲ್ಲಿ ಚತುರ್ಮುಖ ಶಿವಲಿಂಗವಿದ್ದು, ದೇವಸ್ಥಾನ ದ್ವಾರ ಬಾಗಿಲದ ಮೇಲಿರುವ ಕಿಂಡಿಗಳ ಮುಖಾಂತರ ಪ್ರತಿ ವರ್ಷ ಯುಗಾದಿ ಹಬ್ಬದಂದು ಸೂರ್ಯನ ಕಿರಳಗಳು ಶಿವಲಿಂಗವನ್ನು ಸ್ಪರ್ಶಿಸುತ್ತವೆ.
ಬೆಳಿಗ್ಗೆ 6-45 ರಿಂದ 7 ಗಂಟೆಯವರೆಗೆ ಈ ಚತುರ್ಮುಖ ಲಿಂಗದ ಮೇಲೆ ಸೂರ್ಯರಶ್ಮಿ ಬಿದ್ದಿದೆ. ಈ ಸಂದರ್ಭವನ್ನು ಕಣ್ತುಂಬಿಕೊಳ್ಳೋದೇ ಹುಬ್ಬಳ್ಳಿಯ ಜನರಿಗೆ ದೊಡ್ಡ ಸಡಗರ. ಬೆಳಿಗ್ಗೆಯಿಂದಲೇ ಕೌತುಕದ ಕ್ಷಣಗಳಿಗಾಗಿ ಕಾದ ಭಕ್ತರು ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳೋದನ್ನು ಕಣ್ತುಂಬಿಕೊಂಡು, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಕೊರೋನಾ ಮೊದಲಾದ ಪಿಡುಗುಗಳಿಂದ ಜಗತ್ತು ಮುಕ್ತವಾಗಲಿ ಎಂದು ಭಕ್ತರು ಪ್ರಾರ್ಥಿಸಿದರು.
ಹುಬ್ಬಳ್ಳಿ - ಧಾರವಾಡಗಳಲ್ಲದೆ ಅಕ್ಕ - ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಶಿವಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಇನ್ನು ನಗರದ ಸಿದ್ಧಾರೂಢ ಮಠ, ತುಳಜಾಭವಾನಿ ದೇವಸ್ಥಾನಗಳಲ್ಲೂ ಜನರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಕೊರೋನಾ ವ್ಯಾಪಕಗೊಂಡಿರೋ ಸಂದರ್ಭದಲ್ಲಿಯೇ ಯುಗಾದಿ ಹಬ್ಬ ನಡೆಯುತ್ತಿದ್ದು, ಹುಬ್ಬಳ್ಳಿಯಲ್ಲಿ ಜನ ಹಬ್ಬದ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಸರಾಫ್ ಕಟ್ಟೆ ಮಾರ್ಕೆಟ್ ನಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದೆ ಖರೀದಿಯಲ್ಲಿ ಜನ ತೊಡಗಿಕೊಂಡಿದ್ದರು. ಮಾರುವವರು ಮತ್ತು ಖರೀದಿಸೋ ನಾಗರೀಕರೂ ಬೇಜವಾಬ್ದಾರಿಯಿಂದ ವರ್ತಿಸ್ತಿರೋದು ಕಂಡು ಬಂದಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ