• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಭೂತಾನ್​ಗೂ ಬೇಕು, ಅಸ್ಸಾಂ ರೈಫಲ್ಸ್​ಗೂ ಬೇಕು ಚಾಮುಲ್ ನಂದಿನಿ ಗುಡ್ ಲೈಫ್ ಹಾಲು!

ಭೂತಾನ್​ಗೂ ಬೇಕು, ಅಸ್ಸಾಂ ರೈಫಲ್ಸ್​ಗೂ ಬೇಕು ಚಾಮುಲ್ ನಂದಿನಿ ಗುಡ್ ಲೈಫ್ ಹಾಲು!

ಚಾಮುಲ್ ನಂದಿನಿ ಗುಡ್ ಲೈಫ್ ಹಾಲು

ಚಾಮುಲ್ ನಂದಿನಿ ಗುಡ್ ಲೈಫ್ ಹಾಲು

ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ವಾಗಿ ರಚನೆಯಾದ ಚಾಮುಲ್ ಮೂರೇ ವರ್ಷಗಳಲ್ಲಿ ವಿದೇಶ ಹಾಗು ನೆರೆರಾಜ್ಯಗಳಿಗೆ ಹಾಲು ಪೂರೈಸಿ ಗಣನೀಯ ಸಾಧನೆ ಮಾಡುವ ಮೂಲಕ ರೈತರ ಬೆನ್ನಿಗೆ ನಿಂತಿದೆ.

  • Share this:

ಚಾಮರಾಜನಗರ (ಜೂ.23): ಮೂರು ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್)ಇದೀಗ  ವಿದೇಶಕ್ಕೂ  ನಂದಿನಿ ಹಾಲು ರಫ್ತು ಮಾಡುತ್ತಿದೆ. ಒಂದೆಡೆ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನೇಮಕಾತಿ ಬಗ್ಗೆ ಗಂಭೀರ  ಆರೋಪ ಹೊತ್ತಿರುವ ಚಾಮುಲ್ ಇನ್ನೊಂದೆಡೆ ವಿದೇಶ ಹಾಗೂ ನೆರೆ ರಾಜ್ಯಗಳಿಗೆ ಹಾಲು ಪೂರೈಕೆಯಲ್ಲಿ ಗಣನೀಯ ಸಾಧನೆ ಮಾಡಿದೆ.


ಚಾಮುಲ್ ನಿಂದ ಭೂತಾನ್ ದೇಶಕ್ಕೆ ಪ್ರತಿ ತಿಂಗಳು 2 ರಿಂದ 3 ಲಕ್ಷ ಲೀಟರ್  ಗುಡ್ ಲೈಫ್ ಗೋಲ್ಡ್ ಹೆಸರಿನ ಹಾಲು ರಫ್ತು ಮಾಡಲಾಗುತ್ತಿದೆ. ವಿದೇಶವಷ್ಟೇ  ಅಲ್ಲ, ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್ , ನೆರೆಯ ಆಂಧ್ರ ಪ್ರದೇಶ ಹಾಗು ತೆಲಂಗಾಣ ಸರ್ಕಾರಗಳಿಗೂ ನಂದಿನಿ ಹಾಲು ಪೂರೈಕೆ ಮಾಡುತ್ತಿರುವುದು ಚಾಮುಲ್ ಹೆಗ್ಗಳಿಕೆ ಆಗಿದೆ.


ಅಸ್ಸಾಂ ರೈಫಲ್ಸ್ ಗೆ ಪ್ರತಿ ತಿಂಗಳು 4 ಲಕ್ಷ ಲೀಟರ್ ಗುಡ್ ಲೈಫ್ ಗೋಲ್ಡ್ ಹಾಲು ಸರಬರಾಜು ಮಾಡಲಾಗುತ್ತಿದೆ. ಹಾಗೆಯೇ ವಿಜಯವಜ್ರ ಹೆಸರಿನಲ್ಲಿ  ಆಂಧ್ರ ಪ್ರದೇಶ ಸರ್ಕಾರಕ್ಕೆ ಪ್ರತಿ ತಿಂಗಳು 12 ಲಕ್ಷ ಲೀಟರ್  ಯು.ಎಚ್.ಟಿ (ಅಲ್ಟ್ರಾ ಹೈ ಟೆಂಪರೇಚರ್ ಟ್ರೀಟೆಡ್) ನಂದಿನಿ ಹಾಲು ಪೂರೈಸಲಾಗುತ್ತಿದೆ . ಆಂಧ್ರ ಪ್ರದೇಶ ಸರ್ಕಾರ ಅಲ್ಲಿನ ಅಂಗನವಾಡಿ ಮಕ್ಕಳು, ಶಾಲಾ ಮಕ್ಕಳು, ಗರ್ಭಿಣಿ ಸ್ರೀಯರಿಗೆ ವಿಜಯವಜ್ರ ಹೆಸರಿನ ಯು.ಎಚ್.ಟಿ ಹಾಲು ನೀಡುತ್ತಿದ್ದು ಚಾಮುಲ್ ನಲ್ಲಿ ವಿಜಯವಜ್ರ ಹಾಲು ತಯಾರಾಗುತ್ತಿದೆ.


ಇದಲ್ಲದೆ ಚಾಮುಲ್ ನಿಂದ ತೆಲಂಗಾಣ ರಾಜ್ಯಕ್ಕು ಪ್ರತಿ ತಿಂಗಳು 4 ಲಕ್ಷ ಲೀಟರ್ ನಂದಿನ‌ ಯುಎಚ್.ಟಿ ನಂದಿನಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ತೆಲಂಗಾಣ ಸರ್ಕಾರ ಅಂಗನವಾಡಿ, ಮಕ್ಕಳು, ಶಾಲಾ ಮಕ್ಕಳು ಗರ್ಭಿಣಿ ಯರಿಗೆ ನಂದಿನಿ ಯುಎಚ್.ಟಿ ಹಾಲು ನೀಡುತ್ತಿದೆ.


ಚಾಮುಲ್ ನಲ್ಲಿ ನಂದಿನಿ ಗುಡ್ ಲೈಫ್,  ನಂದಿನಿ ಗುಡ್ ಲೈಫ್ ಗೋಲ್ಡ್,  ನಂದಿನಿ ಸ್ಲಿಮ್, ನಂದಿನಿ ಸ್ಮಾರ್ಟ್, ನಂದಿನಿ ಸುರಕ್ಷಾ, ವಿಜಯ ವಜ್ರ ಹೆಸರುಗಳಲ್ಲಿ ಆರು ವಿಧಗಳಲ್ಲಿ ಯು.ಎಚ್. ಟಿ    ಹಾಲು ತಯಾರಿಸಲಾಗುತ್ತಿದೆ. ಹಾಲನ್ನು 135° ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಕಾಯಿಸಿ 15 ಸೆಕೆಂಡ್ ಇಟ್ಟು ನಂತರ 4° ಸೆಂಟಿಗ್ರೇಡ್ ನಲ್ಲಿ ತಣ್ಣಗೆ ಮಾಡಕಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಗಳು ಸಾಯುತ್ತವೆ. ಈ ಹಾಲನ್ನು  ಆರು ಲೇಯರ್  ಇರುವ  ಟೆಟ್ರಾ  ಪ್ಯಾಕ್ ಮಾಡುವುದರಿಂದ ಇದು ಆರು ತಿಂಗಳ ಕಾಲ ಕೆಡುವುದಿಲ್ಲ. ಅಲ್ಲದೇ ಫ್ರಿಡ್ಜ್ ಅವಶ್ಯಕತೆ ಇಲ್ಲ ಎನ್ನುತ್ತಾರೆ ಚಾಮುಲ್ ಮಾರುಕಟ್ಟೆ ವ್ಯವಸ್ಥಾಪಕ ಕೆ.ರಾಜಕುಮಾರ್.


ಯು.ಎಚ್.ಟಿ. ಹಾಲು ಉತ್ಪಾದಿಸುವ ರಾಜ್ಯದ ಐದು ಹಾಲು ಒಕ್ಕೂಟಗಳಲ್ಲಿ ಚಾಮರಾಜನಗರವು ಒಂದಾಗಿದ್ದು ಪ್ರತಿನಿತ್ಯ 2.72 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಇದರಲ್ಲಿ ಒಂದು ಲಕ್ಷ ಲೀಟರ್ ಹಾಲನ್ನು ಯು.ಎಚ್.ಟಿ. ಗುಡ್ ಲೈಫ್ ಹಾಲಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಚಾಮುಲ್ ಅಧ್ಯಕ್ಷ ನಂಜುಂಡಪ್ರಸಾದ್ ನ್ಯೂಸ್ 18 ಗೆ ತಿಳಿಸಿದರು.


ಇದನ್ನು ಓದಿ: ಕಾಫಿನಾಡಿನಲ್ಲಿ ಅಪರೂಪದ 100 ವರ್ಷದ ಪಾಪಸ್ ಕಳ್ಳಿ; ಗಿನ್ನೆಸ್ ರೆಕಾರ್ಡ್ ಸೇರುವ ಹೊಸ್ತಿಲಲ್ಲಿ ವಿದೇಶಿ ಗಿಡ!


ಚಾಮರಾಜನಗರ ಜಿಲ್ಲೆ ಬಹುತೇಕ ಮಳೆಯಾಶ್ರಿತ ಪ್ರದೇಶವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯೇ ಜಿಲ್ಲೆಯ ಸಾವಿರಾರು ರೈತರ  ಮುಖ್ಯ ಕಸುಬಾಗಿದೆ. ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ವಾಗಿ ರಚನೆಯಾದ ಚಾಮುಲ್ ಮೂರೇ ವರ್ಷಗಳಲ್ಲಿ ವಿದೇಶ ಹಾಗು ನೆರೆರಾಜ್ಯಗಳಿಗೆ ಹಾಲು ಪೂರೈಸಿ ಗಣನೀಯ ಸಾಧನೆ ಮಾಡುವ  ರೈತರ ಬೆನ್ನಿಗೆ ನಿಂತಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ

First published: