ಚಾಮರಾಜನಗರ (ಜೂ.17) ಚಾಮರಾಜಗರ ಜಿಲ್ಲಾಸ್ಪತ್ರೆಯಲ್ಲಿ ಆರು ದಿನದ ಮಗು ಅಪಹರಣ ಪ್ರಕರಣವನ್ನು ಕೇವಲ ನಾಲ್ಕೇ ಗಂಟೆಯಲ್ಲಿ ಬೇಧಿಸುವಲ್ಲಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗು ಅಪಹರಿಸಿದ್ದ ಮಹಿಳೆಯನ್ನು ಹುಣಸೂರಿನಲ್ಲಿ ಪತ್ತೆಹಚ್ಚುವುದರೊಂದಿಗೆ ಮಗು ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ.
ಇಂದು ಮಧ್ಯಾಹ್ನ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆರು ದಿನದ ಗಂಡು ಮಗುವನ್ನು ಅಪರಿಚಿತ ಮಹಿಳೆಯೊಬ್ಬಳು ಪೋಷಕರನ್ನು ಯಾಮಾರಿಸಿ ಅಪಹರಿಸಿದ್ದಳು. ಮಗುವಿನೊಂದಿಗೆ ಆಸ್ಪತ್ರೆಯಿಂದ ಹೊರಬಂದಿದ್ದ ಮಹಿಳೆ ಆಟೋ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳಿದ್ದಳು. ತಾನು ಹುಣಸೂರಿಗೆ ಹೋಗಬೇಕೆಂದು ಆಕೆ ಆಟೋ ಚಾಲಕನ ಬಳಿ ಹೇಳಿದ್ದಳು ಎನ್ನಲಾಗಿದೆ.
ಮಗು ಅಪಹರಣವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪಟ್ಟಣ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಆಸ್ಪತ್ರೆ ಮುಂಭಾಗ ನಿಲ್ಲುವ ಆಟೋ ಚಾಲಕರಿಂದಲು ಮಾಹಿತಿ ಸಂಗ್ರಹಿಸಿದ್ದರು. ಆಟೋ ಚಾಲಕನೊಬ್ಬ ನೀಡಿದ ಸುಳಿವು ಬೆನ್ನತ್ತಿದ ಪೊಲೀಸರು ತಕ್ಷಣ ಮೈಸೂರು ಹಾಗು ಹುಣಸೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ಇದನ್ನು ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹಾಡಹಗಲೇ ಆರು ದಿನದ ಗಂಡು ಮಗು ಅಪಹರಣ!
ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಹುಣಸೂರಿನಲ್ಲಿ ಬಸ್ ಇಳಿದು ಮಗುವಿನೊಂದಿಗೆ ಮನೆಗೆ ತೆರಳುತ್ತಿದ್ದ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ. ತನಗೆ ಮಕ್ಕಳಾಗದ ಕಾರಣ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಮಗು ಅಪಹರಿಸಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಚಾಮರಾಜನಗರ ಟೌನ್ ಇನ್ಸ್ಪೆಕ್ಟರ್ ನಾಗೇಗೌಡ ನ್ಯೂಸ್18 ಗೆ ತಿಳಿಸಿದ್ದಾರೆ.
ಹುಣಸೂರಿನ ರಂಜಿತಾ ಹಾಗೂ ವಸಂತ ದಂಪತಿಗೆ ಮಕ್ಕಳಿರಿಲ್ಲಲ್ಲ. ಐದು ತಿಂಗಳ ಹಿಂದೆ ರಂಜಿತಾಳಿಗೆ ಗರ್ಭಪಾತವಾಗಿತ್ತು. ಮುಂದೆ ಮಕ್ಕಳಾಗುವುದಿಲ್ಲ ಎಂದು ಈ ದಂಪತಿಗೆ ವೈದ್ಯರು ಹೇಳಿದ್ದರು ಎನ್ನಲಾಗಿದೆ. ಇದೇ ಕೊರಗಿನಲ್ಲಿದ್ದ ರಂಜಿತಾ ಮಗು ಹೊಂದುವ ಸಲುವಾಗಿ ಚಾಮರಾಜನಗರಕ್ಕೆ ಬಂದು ಆರು ದಿನದ ಮಗು ಅಪಹರಿಸಿಕೊಂಡು ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ