Champa Shashti 2021: ಅದ್ಧೂರಿಯಾಗಿ ನಡೆದ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮ ರಥೋತ್ಸವ!

ಡಿ. 1 ನೇ ತಾರೀಖು ಕೊಪ್ಪ ರಿಗೆ ಏರುವ ಮೂಲಕ ಕ್ಷೇತ್ರದಲ್ಲಿ ಆರಂಭವಾಗಿದ್ದ ಚಂಪಾ ಷಷ್ಠಿ ಉತ್ಸವ ಡಿ. 15ಕ್ಕೆ ಕೊಪ್ಪ ಹರಿಗೆ ಇಳಿಸುವ ಮೂಲಕ ತೆರೆ ಕಾಣಲಿದೆ. ದೇವರ ಅವಭೃತ ಸ್ನಾನ, ನೌಕಾ ವಿಹಾರ, ಬಂಡಿ ಉತ್ಸವ, ಪುರುಷರಾಯ ನೇಮೋತ್ಸವ ಕ್ಷೇತ್ರದಲ್ಲಿ ನಡೆಯಲಿದೆ‌.

ಸುಬ್ರಹ್ಮಣ್ಯ ಬ್ರಹ್ಮ ರಥೋತ್ಸವ

ಸುಬ್ರಹ್ಮಣ್ಯ ಬ್ರಹ್ಮ ರಥೋತ್ಸವ

  • Share this:
ಮಂಗಳೂರು: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ (Kukke Shri Subramanya Temple) ಕ್ಷೇತ್ರದಲ್ಲಿ ಚಂಪಾ ಷಷ್ಠಿಯ (Champa Shashti 2021) ವೈಭವ ಮೇಳೈಸಿದೆ. ಚಂಪಾ ಷಷ್ಠಿಯ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ್ದಾನೆ. ದಕ್ಷಿಣ ಭಾರತದ ಪರಮ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವರ್ಷದ ಅದ್ಭುತ ಸನ್ನಿವೇಶಕ್ಕೆ ಮತ್ತೆ ಸಾಕ್ಷಿಯಾಗಿದೆ. ಮುಂಜಾವು ಬೆಳಕು ಹರಿಯುವ ಸಂದರ್ಭದಲ್ಲಿ ದೇವಳದ ಮುಂಭಾಗದಲ್ಲಿರುವ ಬ್ರಹ್ಮರಥವನ್ನೇರಿದ ಸುಬ್ರಹ್ಮಣ್ಯ ಲಕ್ಷಾಂತರ ಜನರಿಗೆ ದರುಶನ ಭಾಗ್ಯ ನೀಡಿದ್ದಾನೆ. ಈ ದಿನ ಚಂಪಾ ಷಷ್ಠಿ ಹಿನ್ನಲೆ ಪ್ರಾತಃ ಕಾಲ 6.58ರ ಹೊತ್ತಿನ ವೃಶ್ಚಿಕ ಲಗ್ನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥದ ಮೇಲೆ ವಿರಾಜಮಾನರಾಗಿ ನೆರೆದ ಭಕ್ತ ಸಮೂಹಕ್ಕೆ ದರ್ಶನ ನೀಡಿದ್ದಾನೆ. ಇದಕ್ಕೂ ಮುನ್ನ ದೇಗುಲದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದಿದವು.

ಮೊದಲು ಸುಬ್ರಹ್ಮಣ್ಯ ನ ಹೂವಿನ ತೇರು ರಥ ಬೀದಿಯಲ್ಲಿ ಮುಂದೆ ಸಾಗಿದರೆ ಬಳಿಕ ಸುಬ್ರಹ್ಮಣ್ಯನನ್ನು ಹೊತ್ತ ಬ್ರಹ್ಮ ರಥ ಸಾಗಿದೆ. ಬ್ರಹ್ಮ ರಥವನ್ನು ಎಳೆಯಲು ಮೊದಲೇ ಸೇವೆಯನ್ನು ಬುಕ್ಕಿಂಗ್ ಮಾಡಿದವರಿಗಷ್ಟೇ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೇರಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಮಾಡಿದ್ದಾರೆ. ಬ್ರಹ್ಮ ರಥ ಸಾಗುತ್ತಿರುವಾಗ ತೇರಿಗೆ ಎಳ್ಳು, ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಂಡಿದ್ದಾರೆ. ತೇರು ಸಂಪೂರ್ಣ ವಾದ ಬಳಿಕ ರಥದಲ್ಲಿ ಅಳವಡಿಸಲಾಗಿದ್ದ ಹಿಂಗಾರ, ಫಲಪುಷ್ಪಗಳನ್ನು ಅರ್ಚಕರು ಭಕ್ತರತ್ತ ವೃಷ್ಟಿ ಮಾಡಿದರು.

ಬೀದಿ ಮಡೆ ಸ್ನಾನಕ್ಕೆ ಅವಕಾಶ

ಕೊರೋನಾದ ಕಾರಣದಿಂದ ಈ ವರ್ಷ ಕ್ಷೇತ್ರದಲ್ಲಿ ಎಡೆ ಸ್ನಾನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಬೀದಿ ಮಡೆ ಸ್ನಾನಕ್ಕೆ ಅವಕಾಶ ನೀಡಲಾಗಿತ್ತು. ನೂರಾರು ಭಕ್ತರು ಕುಮಾರಾಧಾರಾ ನದಿಯಲ್ಲಿ ಮಿಂದು ನದಿ ದಡದಿಂದಲೇ ಸುಬ್ರಹ್ಮಣ್ಯ ನ ಸನ್ನಿಧಿಯ ತನಕ ಬೀದಿಯಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿಕೊಂಡರು. ಈ ಕಠಿಣ ಹರಕೆ ಸೇವೆಯನ್ನು ಮಹಿಳೆಯರು ಮಕ್ಕಳೆನ್ನದೇ ಮಾಡುತ್ತಾರೆ. ದೇವಳದಲ್ಲಿ ನಡೆಯುವ ಎಡೆಸ್ನಾನಕ್ಕೆ ಮಾತ್ರ ಅವಕಾಶ ನಿರಾಕರಿಸಲಾಗಿತ್ತು. ಆದರೆ ಜನರಿಗೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಹೀಗಾಗಿ ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಭಕ್ತರ ದಂಡು ಸುಬ್ರಹ್ಮಣ್ಯದತ್ತ ಹರಿದು ಬಂದಿದೆ‌‌‌‌.

ಬಿದಿರಿನಿಂದ ಬ್ರಹ್ಮ ರಥ ನಿರ್ಮಾಣ

ಈ ಬ್ರಹ್ಮ ರಥೋತ್ಸವ ವನ್ನು ಬಿದಿರಿನಿಂದಲೇ ಎಳೆಯೋದು ಕ್ಷೇತ್ರದ ವಿಶೇಷತೆ. ರಥವನ್ನು ಎಳೆಯಲು ಎಷ್ಟು ಮಂದಿ ಭಕ್ತರಿದ್ದರೂ ರಥ ಹಾದಿ ತಪ್ಪದಂತೆ ಜಾಗೂರಕತೆಯಿಂದ ನಿರ್ವಹಿಸಲು ರಥ ನಿರ್ಮಿಸಿದ ಸ್ಥಳೀಯರ ತಂಡ ಕಾರ್ಯ ನಿರ್ವಹಿಸಿತ್ತು. ಈ ಬಿದಿರಿನಿಂದ ರಥವನ್ನು ಎಳೆದ ಬಳಿಕ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಲಾಗುತ್ತದೆ. ಡಿ. 1 ನೇ ತಾರೀಖು ಕೊಪ್ಪ ರಿಗೆ ಏರುವ ಮೂಲಕ ಕ್ಷೇತ್ರದಲ್ಲಿ ಆರಂಭವಾಗಿದ್ದ ಚಂಪಾ ಷಷ್ಠಿ ಉತ್ಸವ ಡಿ. 15ಕ್ಕೆ ಕೊಪ್ಪ ಹರಿಗೆ ಇಳಿಸುವ ಮೂಲಕ ತೆರೆ ಕಾಣಲಿದೆ. ದೇವರ ಅವಭೃತ ಸ್ನಾನ, ನೌಕಾ ವಿಹಾರ, ಬಂಡಿ ಉತ್ಸವ, ಪುರುಷರಾಯ ನೇಮೋತ್ಸವ ಕ್ಷೇತ್ರದಲ್ಲಿ ನಡೆಯಲಿದೆ‌.

ಇದನ್ನು ಓದಿ: Omicron ಬಗ್ಗೆ ಭಯ ಬೇಡ; ಹೊಸ ವರ್ಷಾಚರಣೆ, ನೈಟ್ ಕರ್ಫ್ಯೂ ಬಗ್ಗೆ ಮುಂದಿನ ವಾರ ತೀರ್ಮಾನ; CM Bommai

ಒಟ್ಟಿನಲ್ಲಿ ಒಮಿಕ್ರಾನ್ ಭೀತಿಯ ನಡುವೆ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಚಂಪಾ ಷಷ್ಠಿ ಯ ಪ್ರಮುಖ ಆಕರ್ಷಣೆ ಬ್ರಹ್ಮ ರಥೋತ್ಸವ ನಿರ್ವಿಘ್ನವಾಗಿ ನಡೆದಿದೆ.‌ ಕಳೆದರಡು ವರ್ಷಗಳಿಂದ ಎಡೆ ಸ್ನಾನಕ್ಕೆ ಅವಕಾಶ ನೀಡದಿರುವ ಬೇಸರದ ನಡುವೆ ಕುಕ್ಕೆ ಸುಬ್ರಹ್ಮಣ್ಯ ನ ವೈಭವವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.
Published by:HR Ramesh
First published: