• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ನ್ಯೂಸ್​​​-18 ಇಂಪ್ಯಾಕ್ಟ್: ಮಾಂಬಳ್ಳಿ ಸ್ಮಶಾನಕ್ಕೆ ಸೇತುವೆ ನಿರ್ಮಾಣ ಮಾಡಲು ಚಾಮರಾಜನಗರ ಜಿಲ್ಲಾಡಳಿತ ಕ್ರಮ

ನ್ಯೂಸ್​​​-18 ಇಂಪ್ಯಾಕ್ಟ್: ಮಾಂಬಳ್ಳಿ ಸ್ಮಶಾನಕ್ಕೆ ಸೇತುವೆ ನಿರ್ಮಾಣ ಮಾಡಲು ಚಾಮರಾಜನಗರ ಜಿಲ್ಲಾಡಳಿತ ಕ್ರಮ

ಮಾಂಬಳ್ಳಿ ಸ್ಮಶಾನ

ಮಾಂಬಳ್ಳಿ ಸ್ಮಶಾನ

ಅಲ್ಲದೆ ಸ್ಮಶಾನ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಬಿಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಈ ದುಸ್ಥಿತಿಯ ಬಗ್ಗೆ ಆಗಸ್ಟ್ 24ರಂದು ನ್ಯೂಸ್ 18 ವಿವರವಾದ ವರದಿ ಮಾಡಿತ್ತು.

  • Share this:

ಚಾಮರಾಜನಗರ(ಆ.27): ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಯಳಂದೂರು ತಾಲೂಕು ಮಾಂಬಳ್ಳಿ ಗ್ರಾಮದ ಸ್ಮಶಾನ ಸಮಸ್ಯೆಗೆ ಮುಕ್ತಿ ಹಾಡಲು ಜಿಲ್ಲಾಡಳಿತ ಮುಂದಾಗಿದೆ. ನದಿಯ ನಡುವೆ ಪ್ರಾಯಸದಿಂದ ಹೆಣಹೊತ್ತು ಸಾಗಿ ಅಂತ್ಯಸಂಸ್ಕಾರ ನಡೆಸುತ್ತಿದ್ದ ಬಗ್ಗೆ ನ್ಯೂಸ್ 18  ಬೆಳಕು ಚೆಲ್ಲಿತ್ತು. ನ್ಯೂಸ್ 18 ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ಸುವರ್ಣಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಹಾಗು ಹೈಕೋರ್ಟ್​ನಲ್ಲಿರುವ ಸ್ಮಶಾನ ಭೂಮಿ ವಿವಾದ ಇತ್ಯರ್ಥಗೊಳಿಸಲು ಕ್ರಮ ಕೈಗೊಂಡಿದ್ದಾರೆ.


ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಶವಸಂಸ್ಕಾರಕ್ಕೆ ಸ್ಮಶಾನ ಇಲ್ಲದೆ ಶವ ಹೊತ್ತು ಸುವರ್ಣಾವತಿ ನದಿಯ ನೀರ ನಡುವೆ ಹಾಯ್ದು ಜಮೀನುಗಳಲ್ಲಿ ಅಂತ್ಯಸಂಸ್ಕಾರ ನಡೆಸಬೇಕಿತ್ತು. ನದಿ ದಾಟಲು ಇತ್ತೀಚೆಗೆ ಗ್ರಾಮಸ್ಥರೇ ಮರದ ಹಲಗೆಗಳ ಸೇತುವೆ ನಿರ್ಮಿಸಿಕೊಂಡಿದ್ದರು. ಹೆಣ ಹೊರುವವರು ಜೀವ ಕೈಯಲ್ಲಿ ಹಿಡಿದು ಈ ಹಲಗೆಗಳ ಸೇತುವೆ ಮೇಲೆ ಸಾಗಬೇಕು. ಆದರೆ ಶವ ಹೊತ್ತೊಯ್ಯುವಾಗ ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ.


ಅಲ್ಲದೆ ಸ್ಮಶಾನ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಬಿಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಈ ದುಸ್ಥಿತಿಯ ಬಗ್ಗೆ ಆಗಸ್ಟ್ 24ರಂದು ನ್ಯೂಸ್ 18 ವಿವರವಾದ ವರದಿ ಮಾಡಿತ್ತು.


ಅಂದು ನ್ಯೂಸ್ 18 ಜೊತೆ ಮಾತನಾಡಿದ್ದ ಜಿಲ್ಲಾದಿಕಾರಿ ಡಾ. ಎಂ ಆರ್. ರವಿ, ಮಾಂಬಳ್ಳಿ ಸ್ಮಶಾನ ಸಮಸ್ಯೆ ಪರಿಹರಿಸಲು ಶೀಘ್ರ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಹೈಕೋರ್ಟ್​ನಲ್ಲಿರುವ ಸ್ಮಶಾನ ಭೂಮಿ ವಿವಾದ ಇತ್ಯರ್ಥ್ಯಗೊಳಿಸುವ ಸಂಬಂಧ ಅಗತ್ಯ ದಾಖಲೆಗಳನ್ನು ಹೈಕೋರ್ಟ್​ಗೆ ಒದಗಿಸಲು ಕೊಳ್ಳೇಗಾಲ ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದ್ದರು.


ತಾವು ಭರವಸೆ ನೀಡಿದಂತೆ ಜಿಲ್ಲಾಧಿಕಾರಿ ಡಾ. ಎಂ ಆರ್. ರವಿ ವಿವಿಧ ಇಲಾಖೆಯ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಸುವರ್ಣಾವತಿ ನದಿಗೆ ಅಡ್ಡಲಾಗಿ 2.4 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಿಸುವ ಕಾಮಗಾರಿಯನ್ನು ಆರಂಭಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದಾರೆ.


ಅಲ್ಲದೆ ಸುವರ್ಣಾವತಿ ನದಿ ದಾಟಿ ಹೋಗಲು ನಿರ್ಮಿಸಲಾಗುವ ಶಾಶ್ವತ ಸೇತುವೆ ಪಕ್ಕದಲ್ಲೇ ಜನರಿಗೆ ತೊಂದರೆಯಾಗದಂತೆ ತೆರಳಲು ಇನ್ನು 10 ದಿನದೊಳಗೆ ತಾತ್ಕಾಲಿಕ ಸೇತುವೆ ಕಟ್ಟಲು ನಿಗಮದ ಕಾರ್ಯಪಾಲಕ ಅಭಿಯಂತರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.


ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಮಕ್ಕಳ ಆಟಿಕೆಗಳ ಮೂಲಕ ಡ್ರಗ್ಸ್​ ಪೂರೈಕೆ!; ಎನ್​ಸಿಬಿ ವಿಚಾರಣೆಯಲ್ಲಿ ಬಯಲು


ಇನ್ನು, ಸರ್ಕಾರ ಸರ್ವೇ ನಂಬರ್ 887 ಹಾಗು 888/1 ರಲ್ಲಿ ಸ್ಮಶಾನಕ್ಕಾ ಮಂಜೂರು ಮಾಡಿದ್ದ 7 ಎಕರೆ 16 ಗುಂಟೆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ಸ್ಮಶಾನ ಭೂಮಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ಅಗತ್ಯ ಕ್ರಮವಹಿಸುವಂತೆ  ಕೊಳ್ಳೇಗಾಲ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ ಅವರಿಗೆ ಸೂಚನೆ  ನೀಡಿದ್ದಾರೆ. ಸರ್ಕಾರಿ ವಕೀಲರನ್ನು ಭೇಟಿ ಮಾಡಿ ಕಡತಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಕ್ರಮ ವಹಿಸಲು ಸೂಚಿಸಿದ್ದಾರೆ.

Published by:Ganesh Nachikethu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು