ಚಾಮರಾಜನಗರ(ಜುಲೈ. 19): ಒಂದು ಕಡೆ ಕೋವಿಡ್-19 ನಿಂದಾದ ಸಂಕಷ್ಟಕ್ಕೆ ಪೊಲೀಸರು ಸ್ಪಂದಿಸಿದ್ದರೆ ಇನ್ನೊಂದು ಕಡೆ ಕೊರೋನಾ ಹರಡುವ ಭೀತಿ ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಎರಡು ವಿಭಿನ್ನ ಘಟನೆಗಳಿಗೆ ಚಾಮರಾಜನಗರ ಜಿಲ್ಲೆ ಸಾಕ್ಷಿಯಾಗಿದೆ.
ಸಾರ್ವಜನಿಕರೊಬ್ಬರು ಮಾಡಿದ ಕೇವಲ ಒಂದು ಎಸ್.ಎಂ.ಎಸ್ ಗೆ ಕೂಡಲೇ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾಥಾಮಸ್, ಮೇವು ನೀರಿಲ್ಲದೆ ಬಳಲುತ್ತಿದ್ದ ಹಸುಗಳ ಹಸಿವು ನೀಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನೊಂದು ಕಡೆ ಮೂವರು ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ ಕೊರೋನಾ ಹರಡದಂತೆ ಕ್ರಮವಹಿಸುವಂತೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಮಾವನ ಮನೆಗೆ ಬೆಂಗಳೂರಿನಿಂದ ವ್ಯಕ್ತಿಯೊಬ್ಬರು ಬಂದಿದ್ದರು. ಮನೆಯಲ್ಲಿ ವಯಸ್ಸಾದ ಅತ್ತೆ ಮಾವ ಇದ್ದರು. ಆದರೆ, ಬೆಂಗಳೂರಿನಿಂದ ಬಂದಿದ್ದ ವ್ಯಕ್ತಿಗೆ ಕೊರೋನಾ ದೃಢಪಟ್ಟಿತ್ತು. ಕೂಡಲೇ ಇವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ ಆರೋಗ್ಯಾಧಿಕಾರಿಗಳು ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ವೃದ್ಧ ಅತ್ತೆ ಮಾವ ಇಬ್ಬರನ್ನು ಹೋಂ ಕ್ವಾರಂಟೈನಲ್ಲಿರುವಂತೆ ಸೂಚಿಸಿ ಮುಂಜಾಗ್ರತಾ ಕ್ರಮವಾಗಿ ಮನೆಯಿಂದ ಹೊರಬಾರದಂತೆ ಹೇಳಿ ಹೋಗಿದ್ದರು.
ಅದರೆ ಇವರ ಮನೆಯ ಹಿಂಭಾಗದಲ್ಲಿನ ಕೊಟ್ಟಿಗೆಯಲ್ಲಿ ಎರಡು ಹಸುಗಳು ಇದ್ದವು. ಸೋಂಕಿತನ ಅತ್ತೆ ಮಾವ ಇಬ್ಬರು ಆರೋಗ್ಯಾಧಿಕಾರಿಗಳ ಸೂಚನೆಯಂತೆ ಮನೆಯೊಳಗೆ ಇದ್ದುದ್ದರಿಂದ ಹಸುಗಳನ್ನು ನೋಡಕೊಳ್ಳುವವರೇ ದಿಕ್ಕಿಲ್ಲದಂತಾಗಿ ನೀರು ಮೇವಿಲ್ಲದೆ ಹಸಿವಿನಿಂದ ಬಳಲತೊಡಗಿದ್ದವು. ಈ ಬಗ್ಗೆ ಅದೇ ಪ್ರದೇಶದ ನಿವಾಸಿ ಲೋಕೇಶ್ ಎಂಬುವವರು ಅಧಿಕಾರಿಗಳಿಗೆ, ಗ್ರಾಮದ ಕೆಲಮುಖಂಡರಿಗೆ ಸಾಕಷ್ಟು ಬಾರಿ ತಿಳಿಸಿದರೂ ಯಾರೂ ಕ್ಯಾರೇ ಎನ್ನಲಿಲ್ಲ.
ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾಥಾಮಸ್ ಅವರಿಗೆ ಕೇವಲ ಒಂದು ಎಸ್.ಎಂ.ಎಸ್. ಮಾಡಿದರು. ಈ ಎಸ್.ಎಂ.ಎಸ್. ಗೆ ಕೂಡಲೇ ಸ್ಪಂದಿಸಿದ ದಿವ್ಯಾ ಸಾರಾಥಾಮಸ್ ಸ್ವಲ್ಪವೂ ತಡಮಾಡದೆ ಮಧ್ಯರಾತ್ರಿಯೇ ಪೊಲೀಸ್ ಸಿಬ್ಬಂದಿಯನ್ನು ಕಳುಹಿಸಿ ಮೇವು ನೀರಿಲ್ಲದೆ ಬಳಲುತ್ತಿದ್ದ ಹಸುಗಳ ಹಸಿವು ನೀಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ
ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಚಾಮರಾಜನಗರದ ಸೋಮವಾರಪೇಟೆಯಲ್ಲಿ ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಸ್ಥಳೀಯರನ್ನು ಆತಂಕಕ್ಕೆ ದೂಡಿದ್ದಾರೆ.
ಸೋಮವಾರಪೇಟೆ ಬಡಾವಣೆಯ ಒಂದೇ ಬೀದಿಯಲ್ಲಿ ಮೂವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಸೋಂಕಿತರನ್ನು ಈಗಾಗಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಧಿಕಾರಿಗಳು ಈ ಪ್ರದೇಶವನ್ನು ಸೀಲ್ ಡೌನ್ ಮಾಡಿ ಕಂಟೈನ್ ಮೆಂಟ್ ಬಫರ್ ಝೋನ್ ಎಂದು ಘೋಷಣೆ ಮಾಡದೆ ಹಾಗು ಯಾವುದೇ ರೀತಿಯ ಮುಂಜಾಗ್ರತಾ ಕ್ರಮವಹಿಸದೆ ಕೇವಲ ಸ್ಯಾನಿಟೈಸರ್ ಸಿಂಪಡಿಸಿ ಕೈತೊಳೆದುಕೊಂಡಿದ್ದಾರೆ.
ಇದನ್ನೂ ಓದಿ : ಕಲಬುರ್ಗಿ ಕೋವಿಡ್ 19 ಆಸ್ಪತ್ರೆಯಲ್ಲಿ ಹಂದಿಗಳ ಬಿಂದಾಸ್ ಅಡ್ಡಾಟ ; ಜಿಲ್ಲಾಧಿಕಾರಿ ಶರತ್ ದಿಢೀರ್ ಭೇಟಿ
ಸೋಮವಾರಪೇಟೆ ಬಡಾವಣೆಯ ಬಸವೇಶ್ವರ ಬೀದಿಯ 38 ವರ್ಷದ ಮಹಿಳೆಗೆ ಹಾಗು ಆಕೆಯ 14 ಮತ್ತು 11 ವರ್ಷದ ಹೆಣ್ಣು ಮಕ್ಕಳಿಗೆ ಸೋಂಕು ತಗುಲಿತ್ತು. ಆದರೆ, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ವಾಸ್ತವಾವಾಗಿ ಇವರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಲು ಕಟ್ಟುನಿಟ್ಟಿನ ಸೂಚನೆ ನೀಡಬೇಕಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ