ಆಕ್ಸಿಜನ್ ದುರಂತ ಪ್ರಕರಣ: ಸತ್ತವರು 24 ಅಲ್ಲ 36, ತನಿಖಾ ಸಮಿತಿಯ ವರದಿಯಲ್ಲಿ ಬಹಿರಂಗ

ಆಕ್ಸಿಜನ್ ಪೂರೈಕೆಯಾಗದೆ ಇರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ಕಾರಣ  ಎಂದು ದೂಷಿಸುವುದು ವಿಹಿತವಲ್ಲ. ಅದಕ್ಕೆ ಯಾವುದೇ ಆಧಾರಗಳೂ ಇಲ್ಲ. ಚಾಮರಾಜನಗರಕ್ಕಾಗಲಿ ಬೇರೆ ಜಿಲ್ಲೆಗಳಿಗಾಲಿ ಆಕ್ಸಿಜನ್ ಪೂರೈಕೆ ಮಾಡಬಾರದೆಂದು ಮೈಸೂರು ಜಿಲ್ಲಾಧಿಕಾರಿ ಹೇಳಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಚಾಮರಾಜನಗರ (ಮೇ.13): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ. 2 ರಂದು ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 24 ಮಂದಿಯಲ್ಲ 36 ಮಂದಿ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಅಂದು ರಾತ್ರಿ  ಜಿಲ್ಲಾಸ್ಪತ್ರೆಯಲ್ಲಿ 10.30ಕ್ಕೆ ಆಕ್ಸಿಜನ್ ಖಾಲಿಯಾಗಿತ್ತು. ರಾತ್ರಿ 10.30ರಿಂದ ಮಧ್ಯರಾತ್ರಿ 2.30ರವರೆಗೆ ಆಕ್ಸಿಜನ್ ಇಲ್ಲದೆ ಕೊರೋನಾ ರೋಗಿಗಳು ಬಳಲಿದ್ದು, ಒಂದು ದಿನದ ಅವಧಿಯಲ್ಲಿ ಆಕ್ಸಿಜನ್ ಲಭ್ಯತೆ ಇಲ್ಲದೇ 36 ಜನ ಪ್ರಾಣ ತೆತ್ತಿದ್ದಾರೆ. ಇದಕ್ಕೆಲ್ಲಾ ಆ ಜಿಲ್ಲೆಯ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಆಸ್ಪತ್ರೆಯ ಮುಖ್ಯಸ್ಥರು ತಮ್ಮ ಕರ್ತವ್ಯ ಸರಿಯಾಗಿ ಪಾಲನೆ ಮಾಡದಿರುವುದೇ ಕಾರಣವಾಗಿದೆ ಎಂದು  ಆಕ್ಸಿಜನ್ ದುರಂತದ ಬಗ್ಗೆ ನ್ಯಾಯಮೂರ್ತಿ ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ಹೈಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೇ 2 ರ ರಾತ್ರಿ 10.30ರಿಂದ ಮೇ 3 ರ ಸಂಜೆಯವರೆಗೆ 36 ಮಂದಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ . ಮೇ 2 ರಂದು ಜಿಲ್ಲಾಸ್ಪತ್ರೆಯಲ್ಲಿ 164 ಜನ ಕೊರೋನಾ ರೋಗಿಗಳಿದ್ದರು. ಈ ಎಲ್ಲಾ ರೋಗಿಗಳಿಗೆ 31 ಲಕ್ಷ ಲೀಟರ್ ಆಕ್ಸಿಜನ್ ಅವಶ್ಯಕತೆ ಇತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರಂದು ಮಧ್ಯಾಹ್ನ 66  ಸಿಲಿಂಡರ್ ಆಕ್ಸಿಜನ್ ಹಾಗೂ ಸಂಜೆ 65 ಆಕ್ಸಿಜನ್ ಸಿಲಿಂಡರ್ ಮೈಸೂರಿನ ಪದಕಿ ಏಜೆನ್ಸಿಯಿಂದ ಬಂದಿತ್ತು. ಈ ಆಕ್ಸಿಜನ್ ಸಿಲಿಂಡರ್ ಗಳು ಅದು ರಾತ್ರಿ 10.30ಕ್ಕೆ ಖಾಲಿಯಾಗಿವೆ. ರಾತ್ರಿ 10.30ರಿಂದ ಮಧ್ಯ ರಾತ್ರಿ 2.30ರವರೆಗೂ ಆಸ್ಪತ್ರೆಯಲ್ಲಿ ಆಕ್ಸಿಜನ್ ಇರಲಿಲ್ಲ. ಆಕ್ಸಿಜನ್ ಅಲಭ್ಯತೆ ಕಾರಣದಿಂದ ಮೇ 2 ರ ರಾತ್ರಿ 10.30 ರಿಂದ ಮೇ 3ರ ಸಂಜೆಯವರೆಗೆ  36 ಮಂದಿ ಕೊರೋನಾ ರೋಗಿಗಳು ಮೃತರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಸ್ಪತ್ರೆಯಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಸಮಿತಿ ಪರಿಶೀಲಿಸಿದೆ. ಅಂದು ರಾತ್ರಿ ಕೇವಲ ಅಟೆಂಡರ್​ಗಳು ಮಾತ್ರ ಅಲ್ಲಿ ಕಂಡುಬಂದಿದ್ದು, ಆ ವೇಳೆಯಲ್ಲಿ ಯಾವುದೇ ನರ್ಸ್ ಅಥವಾ ವೈದ್ಯರು ಇಲ್ಲದಿರುವ ಬಗ್ಗೆಯೂ ವರದಿ ಬೊಟ್ಟು ಮಾಡಿದೆ. ಕೇವಲ ವಾರ್ಡ್ ಅಟೆಂಡರ್​ಗಳು ಮಾತ್ರ ಸತ್ತಿರುವ ರೋಗಿಗಳನ್ನು ಸ್ಟ್ರೇಚರ್​ನಲ್ಲಿ ತೆಗೆದುಕೊಂಡು ಹೋಗುತ್ತಿರುವ  ದೃಶ್ಯಗಳು ಕಂಡುಬಂದಿದೆ. ಆ ಸಮಯದಲ್ಲಿ ರೋಗಿಗಳ ಪಲ್ಸ್ ಚೆಕ್ ಮಾಡಲು ಸಹ ಅಲ್ಲಿ ಯಾವುದೇ ವೈದ್ಯರು ಅಥವಾ ನರ್ಸ್ ಇರಲಿಲ್ಲಾ ಎಂಬುದನ್ನು ಉಲ್ಲೇಖಿಸಲಾಗಿದೆ.

ಪರಿಸ್ಥಿತಿ  ನಿಭಾಯಿಸುವಲ್ಲಿ ಜಿಲ್ಲಾಧಿಕಾರಿ ವಿಫಲ

ಆಕ್ಸಿಜನ್ ಬಿಕ್ಕಟ್ಟಿನ ಸಮಯವನ್ನು ಜಿಲ್ಲಾಧಿಕಾರಿ ತಮ್ಮ ಕ್ರಿಯಾಶೀಲ ಹಾಗು ನಾಯಕತ್ವ ಗುಣಗಳಿಂದ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ವರದಿ  ಹೇಳಿದೆ.

ನ್ಯಾಯಾಂಗ ಸಮಿತಿ ಸಲ್ಲಿಸಿರುವ ವರದಿಯ ಪ್ರತಿ.


ಆಕ್ಸಿಜನ್ ಪೂರೈಕೆಯಾಗದೆ ಇರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ಕಾರಣ  ಎಂದು ದೂಷಿಸುವುದು ವಿಹಿತವಲ್ಲ. ಅದಕ್ಕೆ ಯಾವುದೇ ಆಧಾರಗಳೂ ಇಲ್ಲ. ಚಾಮರಾಜನಗರಕ್ಕಾಗಲಿ ಬೇರೆ ಜಿಲ್ಲೆಗಳಿಗಾಲಿ ಆಕ್ಸಿಜನ್ ಪೂರೈಕೆ ಮಾಡಬಾರದೆಂದು ಮೈಸೂರು ಜಿಲ್ಲಾಧಿಕಾರಿ ಹೇಳಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ: CM BSY Speech: ಲಸಿಕೆ ಅಭಾವದ ಕಾರಣ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಂಚಿಕೆ ತಾತ್ಕಾಲಿಕ ಮುಂದೂಡಿಕೆ; ಸಿಎಂ ಬಿಎಸ್​ವೈ ಸ್ಪಷ್ಟನೆ

ಈ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿಸ್ಥರನ್ನು ಗುರುತಿಸಬೇಕು. ಇನ್ನು ಮುಂದೆ ಮುಂದಿನ 24 ಗಂಟೆಗೆ ಆಗುವಷ್ಟು ಆಕ್ಸಿಜನ ಸ್ಟಾಕ್ ಇಟ್ಟುಕೊಳ್ಳಬೇಕು. ಮೇ 2 ರಂದು ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕು. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ನ್ಯಾಯಮೂರ್ತಿ ವೇಣುಗೋಪಾಲ್ ಗೌಡ ನೇತೃತ್ವದ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಸತ್ತಿದ್ದಾರೆಂದು  ಆರೋಗ್ಯ ಸಚಿವರು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಸಂಪೂರ್ಣ ಸುಳ್ಳು ಎಂಬುದು ನ್ಯಾಯಮೂರ್ತಿಗಳ ವರದಿಯಿಂದ ಸಾಬೀತಾಗಿದೆ. ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಇಲ್ಲವೇ ನೈತಿಕ ಹೊಣೆ ಹೊತ್ತು ಅವರೇ ರಾಜೀನಾಮೆ ನೀಡಬೇಕು. ಐಪಿಸಿ ಸೆಕ್ಷನ್  304 ಅಡಿಯಲ್ಲಿ ಪೊಲೀಸರು ಕೂಡಲೇ ಕೇಸ್ ದಾಖಲಿಸಿಕೊಳ್ಳಬೇಕು. ಈ ಘಟನೆಗೆ ಕಾರಣರಾದವರಿಗೆ ಶಿಕ್ಷಯಾಗಬೇಕೆಂದು ಆಗ್ರಹಿಸಿದ್ದಾರೆ.

ವರದಿ: ಎಸ್.ಎಂ.ನಂದೀಶ್
Published by:HR Ramesh
First published: