ಈರುಳ್ಳಿ ಬೆಳೆಗಾರನಲ್ಲಿ ಕಣ್ಣೀರು ತರಿಸಿದ ಕೊರೋನಾ ; ಚಾಮರಾಜನಗರ ರೈತ ಕಂಗಾಲು

ಈರುಳ್ಳಿ ಬೆಳೆದ ರೈತರು ಸಂತೇಮರಹಳ್ಳಿ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಕಳೆದ ಹದಿನೈದು ದಿನಗಳಿಂದ ಜಾತಕಪಕ್ಷಿಗಳಂತೆ ಕಾಯತೊಡಗಿದ್ದಾರೆ. ಆದರೆ, ಕೇಳುವವರೆ ಇಲ್ಲವಾಗಿದ್ದಾರೆ

ಈರುಳ್ಳಿ

ಈರುಳ್ಳಿ

  • Share this:
ಚಾಮರಾಜನಗರ(ಜುಲೈ. 13): ಈರುಳ್ಳಿ ಬೆಳೆದ ರೈತರು ಕೊರೋನಾ ಮಹಾಮಾರಿಯ ಪರಿಣಾಮ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಸಣ್ಣ ಈರುಳ್ಳಿಯನ್ನು ಕೇಳುವವರೆ ಇಲ್ಲವಾಗಿದ್ದು, ಒಂದು ಸಾವಿರ ಕ್ವಿಂಟಾಲ್​ಗೂ ಹೆಚ್ಚು ಸಣ್ಣ ಈರುಳ್ಳಿ ಕೊಳೆತು ಹೋಗತೊಡಗಿದೆ.

ಸಣ್ಣ ಈರುಳ್ಳಿಗೆ ತಮಿಳುನಾಡಿನಲ್ಲಿ ಬೇಡಿಕೆ ಇದೆ. ಜೊತೆಗೆ  ತಮಿಳುನಾಡಿನಿಂದ ಶ್ರೀಲಂಕಾಕ್ಕೆ ಸಣ್ಣ ಈರುಳ್ಳಿ ರಫ್ತಾಗುತ್ತದೆ. ಆದರೆ, ಕೊರೋನಾ ಹಿನ್ನಲೆಯಲ್ಲಿ ತಮಿಳುನಾಡಿನ ವರ್ತಕರು ಚಾಮರಾಜನಗರ ಜಿಲ್ಲೆಯತ್ತ ತಲೆ ಹಾಕುತ್ತಿಲ್ಲ. ಹೋಗಲಿ ಸಂಗ್ರಹ ಮಾಡಿ ಇಡಬೇಕೆಂದರೆ ಚಾಮರಾಜನಗರ ಜಿಲ್ಲೆಯ ಯಾವ ಎ.ಪಿ.ಎಂ.ಸಿ ಯಲ್ಲು  ಶೈತ್ಯಾಗಾರದಂತಹ ಸೂಕ್ತ ವ್ಯವಸ್ಥೆ ಇಲ್ಲ. ಪರಿಣಾಮ ಒಂದು ಸಾವಿರ ಕ್ವಿಂಟಾಲ್ ಗು ಹೆಚ್ಚು ಸಣ್ಣ ಈರುಳ್ಳಿ ಸಂತೆಮರಹಳ್ಳಿ ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲೇ ಕೊಳೆತು ಹೋಗತೊಡಗಿದೆ.

ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಸಣ್ಣ ಈರುಳ್ಳಿ ಬೆಳೆದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತೇಮರಹಳ್ಳಿ ಹೋಬಳಿಯೊಂದರಲ್ಲೇ  250 ಎಕರೆಗು ಹೆಚ್ಚು ಪ್ರದೇಶದಲ್ಲಿ ಸಣ್ಣ ಈರುಳ್ಳಿ ಬೆಳೆಯಲಾಗಿತ್ತು. ಈರುಳ್ಳಿ ಬೆಳೆದ ರೈತರು ಸಂತೇಮರಹಳ್ಳಿ ಎಪಿಎಂಸಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಕಳೆದ ಹದಿನೈದು ದಿನಗಳಿಂದ ಜಾತಕಪಕ್ಷಿಗಳಂತೆ ಕಾಯತೊಡಗಿದ್ದಾರೆ. ಆದರೆ, ಕೇಳುವವರೆ ಇಲ್ಲವಾಗಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಅಡ್ಡಾದಿಡ್ಡಿ ಬೆಲೆಗೆ ಕೇಳುತ್ತಿದ್ದಾರೆ. ಇದರಿಂದ ಈರುಳ್ಳಿ ಬೆಳೆಯಲು ಮಾಡಿದ ಖರ್ಚು ಸಿಗದಂತಾಗಿದೆ.

ಬಿತ್ತನೆ ಈರುಳ್ಳಿ ಕೆ.ಜಿ.ಗೆ 70 ರಿಂದ 80 ರೂಪಾಯಿ ಕೊಟ್ಟು ಈರುಳ್ಳಿ ಬೆಳೆದಿದ್ದೇವೆ. ಈಗ ಅದೇ ಈರುಳಿಯನ್ನು ಕೆ.ಜಿ.ಗೆ 7 ರಿಂದ 8 ರೂಪಾಯಿಗೆ ಕೇಳುತ್ತಿದ್ದಾರೆ. ಇದರಿಂದ ಹಾಕಿದ ಶೇಕಡ 10 ರಷ್ಟು ಬಂಡವಾಳವು ಬರುವುದಿಲ್ಲ, ವ್ಯವಸಾಯದ ಖರ್ಚಿಗೆ ಚಿನ್ನ ಅಡವಿಟ್ಟು ಸಾಲ ಮಾಡಿದ್ದೇನೆ, ಮುಂದೇನು ಮಾಡುವುದು ಎಂಬುದರ ಬಗ್ಗೆ ದಿಕ್ಕೇ ತೋಚದಂತಾಗಿದೆ ಎಂದು ಸಂತೇಮರಹಳ್ಳಿ ರೈತ ಮಹದೇವಸ್ವಾಮಿ ತಮ್ಮ ಅಳಲು ತೋಡಿಕೊಂಡಿದ್ದಾರೆೆ.

ಇದನ್ನೂ ಓದಿ : ಲಾಕ್ ಡೌನ್ ಗೆ ಮುಂಚೆಯೇ ಶರಣಬಸವೇಶ್ವರ ದೇವಸ್ಥಾನ ಬಂದ್ ; ಅಫಜಲಪುರ ಠಾಣೆ ಸೀಲ್ ಡೌನ್

ನಾವೇ ಕೇರಳ ಅಥವಾ ತಮಿಳುನಾಡಿಗೆ ಹೋಗಿ ಮಾರಾಟ ಮಾಡಿ ಬರೋಣವೆಂದರೆ  ಗೂಡ್ಸ್ ಟೆಂಪೋ ಚಾಲಕರು ಅಲ್ಲಿಗೆ ಹೋಗಿಬಂದ ಮೇಲೆ ಮೂರು ದಿನ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ ಎಂದು ಹಿಂದೇಟು ಹಾಕುತ್ತಿದ್ದಾರೆ. ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ನಮ್ಮ ಕಷ್ಟ ಕೇಳಲು ಬರುತ್ತಿಲ್ಲ ಎಂದು ಮತ್ತೊಬ್ಬ ರೈತ ವಸಂತಕುಮಾರ್ ಹೇಳುತ್ತಾರೆ.

ಸ್ಥಳೀಯ ಶಾಸಕರು ಮಧ್ಯೆ ಪ್ರವೇಶಿಸಿಸಬೇಕು, ನಾವು ಬೆಳೆದ ಈರುಳ್ಳಿಯನ್ನು ಸರ್ಕಾರದ ವತಿಯಿಂದಲೇ ಖರೀದಿ ಮಾಡುವ ಮೂಲಕ ನಮ್ಮ ನೆರವಿಗೆ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದೆ.
Published by:G Hareeshkumar
First published: