ಚಾಮರಾಜನಗರ (ಏ.13); ನಾಗರಿಕತೆ ಬೆಳೆದಂತೆ ಗ್ರಾಮೀಣ ಪ್ರದೇಶಗಳಲ್ಲಿನ ಅದೆಷ್ಟೋ ಸಂಪ್ರದಾಯಗಳು ಕಣ್ಮರೆಯಾಗಿವೆ. ಅದರಲ್ಲೂ ದೇಶಕ್ಕೆ ಅನ್ನ ನೀಡುವ ರೈತರು ನಡೆಸುವ ರಾಶಿಪೂಜೆ, ಭೂಮಿ ಪೂಜೆ, ಯುಗಾದಿ ದಿನದಂದು ಕಟ್ಟುವ ಹೊನ್ನೇರಿನಂತಹ ಪದ್ದತಿಗಳು ನಶಿಸಿ ಹೋಗಿವೆ. ಅದರೆ ಚಾಮರಾಜನಗರ ಜಿಲ್ಲೆ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಬ್ಬವನ್ನ ಹೊಸ ವರ್ಷದ ಜೊತೆಗೆ ಕೃಷಿ ಚಟುವಟಿಕೆಯ ಮೊದಲ ಹೆಜ್ಜೆ ಎಂದೇ ಭಾವಿಸಿ ಹೊನ್ನೇರು ಕಟ್ಟುವ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಯುಗಾದಿ ಬಂತೆಂದರೆ ರೈತರ ಕೃಷಿ ಚಟುವಟಿಕೆಗಳಿಗೆ ಜೀವ ಬಂತು ಎಂದೇ ಅರ್ಥ.. ಹೀಗಾಗಿಯೇ ಚಾಮರಾಜನಗರ ಜಿಲ್ಲೆಯ ಹಂಗಳ ಹೆಬ್ಬಸೂರು, ಜ್ಯೋತಿಗೌಡನಪುರ, ಹೊನ್ನೂರು ಮೊದಲಾದ ಗ್ರಾಮಗಳಲ್ಲಿ ಹೊನ್ನೇರು ಕಟ್ಟುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.
ಹೊನ್ನೇರಿನ ವಿಶೇಷತೆ ಎಂದರೆ ಸೂರ್ಯೋದಯಕ್ಕೂ ಮುನ್ನ ರೈತರು ತಮ್ಮ ಎತ್ತು, ಗಾಡಿ ಹಾಗು ಕೃಷಿ ಪರಿಕರಗಳನ್ನು ನೀರಿನಿಂದ ತೊಳೆದು ಸ್ವಚ್ಚಗೊಳಿಸುತ್ತಾರೆ. ಬಳಿಕ ಎತ್ತುಗಳ ಕೊಂಬುಗಳಿಗೆ ಬಣ್ಣ ಹಾಕಿ ಹೊಂಬಾಳೆ ಕಟ್ಟುತ್ತಾರೆ. ಬಿಳಿ ಗಣಗಲೇ ಹೂವಿನಿಂದ ಅಲಂಕರಿಸುತ್ತಾರೆ. ಎತ್ತಿನ ಗಾಡಿಗಳನ್ನು ಸಹ ಬಣ್ಣಬಣ್ಣದ ಹೂಗಳಿಂದ ಶೃಂಗರಿಸಿ, ಬಾಳೆ, ಹೊಂಬಾಳೆಗಳನ್ನು ಕಟ್ಟಿ ಶೃಂಗರಿಸಿದ ಎತ್ತಿನ ಗಾಡಿಗಳಿಗೆ ಸಾಂಕೇತಿಕವಾಗಿ ಒಂದಿಷ್ಟು ಕೊಟ್ಟಿಗೆ ಗೊಬ್ಬರ ತುಂಬುತ್ತಾರೆ. ಬಳಿಕ ನೊಗ ಹೂಡಿದ ಎತ್ತುಗಳು ಹಾಗು ಎತ್ತಿನ ಗಾಡಿಗಳನ್ನು ಮಂಗಳ ವಾದ್ಯಗಳೊಂದಿಗೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆ ಸಾಗುತ್ತಿದ್ದಾಗ ಮುತ್ತೈದೆಯರು ಹೊನ್ನೇರಿಗೆ ಪೂಜೆ ಸಲ್ಲಿಸುತ್ತಾರೆ. ಆನಂತರ ರೈತರು ತಮ್ಮ ಜಮೀನುಗಳಲ್ಲಿ ಗೊಬ್ಬರ ಸುರಿದು, ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ.
ಇದನ್ನು ಓದಿ: Karnataka Weather: ಕರ್ನಾಟಕದಲ್ಲಿ ಇಂದಿನಿಂದ 4 ದಿನ ಮಳೆ; ಮಲೆನಾಡು, ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಣೆ
ಹಿಂದೂ ಸಂಸ್ಕೃತಿಯ ಪ್ರಕಾರ ಹೊಸ ವರ್ಷ ಆರಂಭವಾಗುವುದೇ ಯುಗಾದಿಯಿಂದ. ಹಾಗಾಗಿ ಯುಗಾದಿ ದಿನದಿಂದು ಹೊನ್ನೇರಿನ ಮೂಲಕ ಕೊಟ್ಟಿಗೆ ಗೊಬ್ಬರ ತೆಗೆದುಕೊಂಡು ಹೋಗಿ ಹೊಲಕ್ಕೆ ಸುರಿದು ಸಾಂಕೇತಿಕವಾಗಿ ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತೇವೆ. ಕೃಷಿ ಚಟುವಟಿಕೆಯ ಅವಿಭಾಜ್ಯ ಅಂಗವಾದ ಎತ್ತುಗಳು ನಮಗೆ ದೇವರ ಸಮಾನ. ಹಾಗಾಗಿ ಅವುಗಳಿಗೆ ಇಂದು ಪೂಜೆ ಸಲ್ಲಿಸಿ ಹೊನ್ನೇರು ಕಟ್ಟಿ ಒಳ್ಳೆಯ ಮಳೆಬೆಳೆ ಆಗಲಿ ಎಂದು ಪ್ರಾರ್ಥಿಸುತ್ತೇವೆ ಎನ್ನುತ್ತಾರೆ ಹೊನ್ನೂರಿನ ರೈತ ನಂಜಪ್ಪ.
ಒಟ್ಟಾರೆ ಯುಗಾದಿ ದಿನದಂದು ಗ್ರಾಮೀಣ ಭಾಗದಲ್ಲಿ ಆಚರಿಸುವ ಹೊನ್ನೇರಿನ ಸಂಪ್ರದಾಯ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿರುತ್ತದೆ. ಸಂಪ್ರದಾಯದ ಹೆಸರಿನಲ್ಲಿ ರೈತ ತನ್ನ ಕೃಷಿ ಚುಟುವಟಿಕೆಗೆ ಮುನ್ನುಡಿ ಬರೆಯುತ್ತಾನೆ. ನಂತರ ವರ್ಷಪೂರ್ತಿ ಬೆವರು ಸುರಿಸಿ ಬೆಳೆ ಬೆಳೆದು ಜಗಕೆ ಅನ್ನ ನೀಡಿ ಅನ್ನದಾತ ಎನಿಸಿಕೊಳ್ಳುತ್ತಾನೆ.
ವಿಶೇಷ ವರದಿ: ಎಸ್.ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ