• Home
  • »
  • News
  • »
  • district
  • »
  • ಚಾಮರಾಜನಗರ ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಹರಡಿದ ಕೊರೋನಾ

ಚಾಮರಾಜನಗರ ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಹರಡಿದ ಕೊರೋನಾ

ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರ  ಕಂಟೈನ್ಮೆಂಟ್ ವಲಯ.

ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರ ಕಂಟೈನ್ಮೆಂಟ್ ವಲಯ.

ಪಾಸಿಟಿವ್  ಆದವರನ್ನು ಹೋಂ ಐಸೋಲೇಷನ್​ಗೆ ಅವಕಾಶ ನೀಡದೆ ಕಡ್ಡಾಯವಾಗಿ ಕೇರ್ ಸೆಂಟರ್ ಗಳಿಗೆ ದಾಖಲಿಸಬೇಕು ಇಲ್ಲದಿದ್ದರೆ ಯಾವುದೇ ಲಾಕ್ ಡೌನ್ ಮಾಡಿದರೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ಜಿಲ್ಲಾಡಳಿತ ಗಮನಿಸಬೇಕಿದೆ.

  • Share this:

ಚಾಮರಾಜನಗರ (ಮೇ.20): ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು‌ ಜನಸಂದಣಿ ಇರುವ  ನಗರಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲೇ ಕೊರೋನಾ ವ್ಯಾಪಕವಾಗಿ ಹರಡತೊಡಗಿದೆ.  ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲು ಕೊರೋನಾ ಸೋಂಕು ಹರಡಿದೆ. ಜಿಲ್ಲೆಯ ಮೂಲೆಮೂಲೆಗಳಲ್ಲು ಕೊರೋನಾ ಅಟ್ಟಹಾಸ ಕಂಡುಬರುತ್ತಿದೆ. ಪ್ರತಿ ದಿನ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳ ವರದಿಯಾಗುತ್ತಿವೆ.


ಶೇಕಡಾ 70ಕ್ಕು ಅಧಿಕ ಪ್ರಕರಣ ಹಳ್ಳಿಗಳಲ್ಲೇ ಪತ್ತೆಯಾಗುತ್ತಿದ್ದು, ಜಿಲ್ಲೆಯ 509 ಹಳ್ಳಿಗಳ ಪೈಕಿ 260ಕ್ಕು ಹೆಚ್ಚು ಹಳ್ಳಿಗಳಲ್ಲಿ ಕೊರೋನಾ ಸೋಂಕು ಹರಡಿದೆ. ಅಚ್ಚರಿ ಅಂದರೆ ಹಲವಾರು ದಿನಗಳಿಂದ ಹೊರಗಿನ ಭಕ್ತರಿಗೆ ಪ್ರವೇಶ ನಿಷೇಧವಿದ್ದರೂ ಕೊರೋನಾ ಹೆಮ್ಮಾರಿ ಮಾತ್ರ ಮಹದೇಶ್ವರ ಬೆಟ್ಟಕ್ಕೂ ವಕ್ಕರಿಸಿದೆ. ದಟ್ಟಾರಣ್ಯದ ಮಧ್ಯೆ ಇರುವ ಗ್ರಾಮಗಳಲ್ಲೂ ಕೊರೋನಾ ಸೋಂಕು ಹರಡಿದೆ. ಮಹದೇಶ್ವರ ಬೆಟ್ಟದ ತುತ್ತತುದಿಯಲ್ಲಿರುವ ಪಡಸಲನತ್ತ, ಮಹದೇಶ್ವರ ಬೆಟ್ಟದ ಅರಣ್ಯದ ಮಧ್ಯಭಾಗದಲ್ಲಿರುವ ನಾಗಮಲೆ ಗ್ರಾಮಗಳಲ್ಲೂ ಕೋವಿಡ್-19 ತನ್ನ ಕಬಂಧ ಬಾಹು ಚಾಚಿದೆ.


ಜಿಲ್ಲೆಯ ವಿವಿಧೆಡೆ 59 ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್  ಎಂದು ಘೋಷಿಸಲಾಗಿದ್ದು ಈ ಪೈಕಿ ಗ್ರಾಮೀಣ ಪ್ರದೇಶದಲ್ಲೇ 56 ಕಂಟೈನ್ಮೆಂಟ್ ಜೋನ್ ಘೋಷಣೆ ಮಾಡಲಾಗಿದೆ. ಕೊರೋನಾ ಸೋಂಕು ಗ್ರಾಮೀಣ ಪ್ರದೇಶಗಳಲ್ಲಿ ಯಾವ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ  ಎಂಬುದಕ್ಕೆ ಪ್ರತಿದಿನ ವರದಿಯಾಗುತ್ತಿರುವ  ಪ್ರಕರಣಗಳೇ ನಿದರ್ಶನವಾಗಿವೆ. ನಿನ್ನೆ ಅಂದರೆ ಮೇ.19 ರಂದು ಒಂದೇ ದಿನ ಒಟ್ಟು 576 ಹೊಸ ಪ್ರಕರಣ ವರದಿಯಾಗಿದ್ದು. ಈ ಪೈಕಿ 479 ಪ್ರಕರಣಗಳು ಅಂದರೆ ಶೇಕಡಾ 83 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಲ್ಲೇ ಕಂಡುಬಂದಿವೆ. ಇದನ್ನೆಲ್ಲಾ ಗಮನಿಸಿದರೆ ಹಳ್ಳಿ ಹಳ್ಳಿಗಳಲ್ಲಿ ಕೊರೋನಾ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಊಹಿಸಬಹುದಾಗಿದೆ.


ಆದರೆ ಕೆಲವೆಡೆ ಕಾಟಾಚಾರದ ಕಂಟೈನ್ಮೆಂಟ್ ಜೋನ್ ಘೋಷಣೆ ಮಾಡಿರುವುದು ಕಂಡುಬರುತ್ತಿದೆ. ಕಂಟೈನ್ಮೆಂಟ್ ಜೋನ್ ಎಂಬ ಫ್ಲೆಕ್ಸ್ ಬಿಟ್ಟರೆ ಮತ್ಯಾವ ನಿಯಮಗಳು ಇಲ್ಲವಾಗಿವೆ. ಕಂಟೈನ್ಮೆಂಟ್ ಜೋನ್ ನಿವಾಸಿಗಳಿಗೆ ಬೇಕಾದ ದಿನಸಿ ಹಾಗು ಇತರೆ ವಸ್ತು ಗಳನ್ನು ಆಯಾ ಗ್ರಾಮ ಪಂಚಾಯ್ತಿ ಸಿಬ್ಬಂದಿ  ತಂದುಕೊಡಬೇಕು. ಆದರೆ ಗ್ರಾಮ ಪಂಚಾಯ್ತಿಗಳು ನಿರ್ಲಕ್ಷ್ಯ ವಹಿಸಿದ್ದು ಕಂಟೈನ್ಮೆಂಟ್ ಜೋನ್ ನಿವಾಸಿಗಳು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ ಎಂಬ ಆರೋಪಗಳು ಸಾಮಾನ್ಯವಾಗಿ ಕೇಳಿಬರುತ್ತಿವೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರು ಕಂಟೈನ್ಮೆಂಟ್ ಜೋನ್ ನಿಂದ ಹೊರಬಂದು ಎಲ್ಲರೊಡನೆ ಬೆರೆಯುವುದು ಸಾಮಾನ್ಯವಾಗಿದ್ದು, ಇದರಿಂದ ಸೋಂಕು‌ ಮತ್ತಷ್ಟು ಹರಡುವ ಭೀತಿ ಎದುರಾಗಿದೆ.


ಇದನ್ನು ಓದಿ: ರಾಮನಗರ ಜಿಲ್ಲೆಯ ಜನರಿಗೆ ಡಿ.ಕೆ.ಬ್ರದರ್ಸ್ ಆಸರೆ; ಕೋವಿಡ್ ಸೋಂಕಿತರಿಗೆ ಉಚಿತ ಹೈಟೆಕ್ ಹೆಲ್ತ್ ಕಿಟ್ ವಿತರಣೆ


ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, "ಕಂಟೈನ್ಮೆಂಟ್ ಜೋನ್ ಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಎಂಬ ದೂರುಗಳು ಬರುತ್ತಿರುವುದು ನಿಜ. ಇದಕ್ಕೆ ಸಿಬ್ಬಂದಿ ಕೊರತೆಯು ಕಾರಣವಾಗಿದೆ. ಹಾಗಾಗಿ ಗ್ರಾಮಪಂಚಾಯ್ತಿ ಪಿಡಿಒ, ಅಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ  ಗ್ರಾಮ ಪಂಚಾಯಿತಿ ಟಾಸ್ಕ್ ಫೋರ್ಸ್ ಮೂಲಕ ನಿರ್ವಹಣೆ ಮಾಡಲು ಕ್ರಮಕೈಗೊಂಡಿದ್ದೇವೆ. ಕಂಟೈನ್ಮೆಂಟ್ ಜೋನ್ ನಿವಾಸಿಗಳಿಗೆ ಬೇಕಾದ ದಿನಸಿ ಹಾಗು ಅವಶ್ಯಕ ವಸ್ತುಗಳನ್ನು ಅವರದ್ದೇ ಹಣದಲ್ಲಿ  ಗ್ರಾಮ ಪಂಚಾಯತಿ ಸಿಬ್ಬಂದಿಗಳ ಮೂಲಕ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಎಲ್ಲೆಲ್ಲಿ ತೊಂದರೆ ಕಂಡು ಬಂದಿದೆಯೋ ಅಲ್ಲೆಲ್ಲಾ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಜನರು ಸಹ ಸರ್ಕಾರದ ಜೊತೆ ಸಹಕರಿಸಬೇಕು," ಎಂದು ತಿಳಿಸಿದ್ದಾರೆ.


ಇನ್ನು ಹಾಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಯಮಗಳು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ ಪಾಲನೆಯಾಗುತ್ತಿಲ್ಲ. ಆಡಳಿತ ಯಂತ್ರ ಕೇವಲ ನಗರಪ್ರದೇಶಗಳಲ್ಲೇ ತನ್ನ ಗಮನ ಕೇಂದ್ರೀಕರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಐಸೋಲೇಷನ್ ನಿಂದಲೇ  ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದು ಬಹಿರಂಗ ಸತ್ಯವಾದರೂ ಹೋಂ ಐಸೋಲೇಷನ್ ಗೆ ಅವಕಾಶ ನೀಡದೆ ಸೋಂಕಿತರನ್ನು ಕೊರೋನಾ ಕೇರ್ ಸೆಂಟರ್ ಗಳಿಗೆ ದಾಖಲಿಸುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಜ್ವರ, ಶೀತ, ನೆಗಡಿ, ಕೆಮ್ಮಿನಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಿ ಕಡ್ಡಾಯವಾಗಿ ಟೆಸ್ಟ್ ಗೆ ಒಳಪಡಿಸಬೇಕು. ಪಾಸಿಟಿವ್  ಆದವರನ್ನು ಹೋಂ ಐಸೋಲೇಷನ್​ಗೆ ಅವಕಾಶ ನೀಡದೆ ಕಡ್ಡಾಯವಾಗಿ ಕೇರ್ ಸೆಂಟರ್ ಗಳಿಗೆ ದಾಖಲಿಸಬೇಕು ಇಲ್ಲದಿದ್ದರೆ ಯಾವುದೇ ಲಾಕ್ ಡೌನ್ ಮಾಡಿದರೂ ಪ್ರಯೋಜನವಾಗುವುದಿಲ್ಲ ಎಂಬುದನ್ನು ಜಿಲ್ಲಾಡಳಿತ ಗಮನಿಸಬೇಕಿದೆ.


ವರದಿ: ಎಸ್.ಎಂ.ನಂದೀಶ್

Published by:HR Ramesh
First published: